ADVERTISEMENT

ಎಚ್.ಡಿ. ಕೋಟೆ: ₹ 25 ಕೋಟಿ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 8:27 IST
Last Updated 12 ಜನವರಿ 2017, 8:27 IST

ಎಚ್.ಡಿ.ಕೋಟೆ: ಬರದಿಂದಾಗಿ ತಾಲ್ಲೂ ಕಿನಲ್ಲಿ 39 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ₹ 25 ಕೋಟಿಗೂ ಹೆಚ್ಚು ಬೆಳೆ ನಷ್ಟ ಉಂಟಾಗಿದೆ. ಖುಷ್ಕಿ ಜಮೀನಿಗೆ ಒಂದು ಹೆಕ್ಟರ್‌ಗೆ ₹ 6550 ಹಾಗೂ ನೀರಾವರಿಗೆ ₹13,800 ಪರಿಹಾರ ನೀಡುವುದಾಗಿ ಸಹಾಯಕ ಕೃಷಿ ನಿರ್ದೇಶಕ ಜಯರಾಂ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಸುಮಾರು 33 ಸಾವಿರ ಹೆಕ್ಟರ್‌ನಲ್ಲಿ ರೈತರು ತಂಬಾಕು ಬೆಳೆಯುತ್ತಿದ್ದು, ರಾಜ್ಯದಲ್ಲಿ 2020 ಕ್ಕೆ ತಂಬಾಕನ್ನು ನಿಷೇಧ ಮಾಡುವುದರಿಂದ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಇಲಾಖೆಯಿಂದ ಉತ್ತೇಜನ ನೀಡಲಾಗುತ್ತಿದೆ ಎಂದರು.

ತಾಲ್ಲೂಕಿನಲ್ಲಿ 15 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು 2 ಪ್ರಕರಣ ವಜಾಗೊಂಡಿದೆ, ಉಳಿದ 13 ರೈತರ ಕುಟುಂಬಕ್ಕೆ ₹5 ಲಕ್ಷ  ಪರಿಹಾರ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೂ ಇಲಾಖೆ ಕ್ರಮ ವಹಿಸಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದೇವಣ್ಣ ಮಾತನಾಡಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಏನನ್ನೂ ಕಲಿಸದೆ ಕೇವಲ ತಿಂಡಿ ತಿನಿಸಿ, ಮಲಗಿಸಿ, ಕಾಲಹರಣ ಮಾಡಿ ಮನೆಗೆ ಕಳುಹಿಸಲಾ ಗುತ್ತಿದ್ದು, ಇದರಿಂದ ಮಕ್ಕಳಿಗೆ ಯಾವ ಅನುಕೂಲವೂ ಆಗುತ್ತಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಭೆಗೆ ಬನ್ನಿ ಎಂದು  ಪೋನ್ ಮಾಡಿ ಕರೆದರೂ ಸಿಡಿಪಿಒ ಪಿ. ಶೇಷಾದ್ರಿ ಬರದೆ ತಮ್ಮ ಪರವಾಗಿ ತಮ್ಮ ಅಧೀನ ಸಿಬ್ಬಂದಿಗಳನ್ನು ಕಳಿಸುತ್ತಿದ್ದಾರೆ. ಅವರಿಂದಲು ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಮುಂದಿನ ಸಭೆಗೂ ಅಧಿಕಾರಿ ಬರದಿದ್ದಲ್ಲಿ ಅವರ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಕಾರ್ಯ ನಿರ್ವಾಣಾಧಿಕಾರಿಗೆ ಸೂಚಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶಂಬೇಗೌಡ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಹಾಯಧನದ ರೂಪದಲ್ಲಿ ನೀಡುವ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ನೇಗಿಲುಗಳಿಗೆ ಹಣ ಪಡೆಯುತ್ತಿರುವ ಬಗ್ಗೆ ದೂರುಗಳಿದ್ದು ಸರಿ ಪಡಿಸುವಂತೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ ವಲಯ, ಮೀನುಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಮುಂತಾದ ಇಲಾಖೆಯ ಅಧಿಕಾರಿಗಳು ಇಲಾಖೆಯ ಪ್ರಗತಿ ವರದಿಯನ್ನು ಸಭೆಗೆ ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಇಓ ಶ್ರೀಕಂಠರಾಜೇಅರಸ್, ಸಮಾಜ ಕಲ್ಯಾಣಾಧಿಕಾರಿ ಕೆ.ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ಎಇಇ ಸುನೀಲ್‌ಕುಮಾರ್, ಚಿಕ್ಕ ನಾಯಕ, ಡಾ. ರವಿಕುಮಾರ್, ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.