ADVERTISEMENT

ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿವೆ ‘ಕಾಡಿನಮಕ್ಕಳು’

ಬಿ.ಆರ್.ಗಣೇಶ್
Published 5 ಸೆಪ್ಟೆಂಬರ್ 2017, 7:32 IST
Last Updated 5 ಸೆಪ್ಟೆಂಬರ್ 2017, 7:32 IST
ಹಳೆಕೆರೆ ಹಾಡಿಯಲ್ಲಿ ಶಿಥಿಲಗೊಂದ ಮನೆ
ಹಳೆಕೆರೆ ಹಾಡಿಯಲ್ಲಿ ಶಿಥಿಲಗೊಂದ ಮನೆ   

ಪಿರಿಯಾಪಟ್ಟಣ: ‘ಅರಣ್ಯ ಹಕ್ಕು’ ಕಾಯ್ದೆಯ ಮೂಲಕ ಗಿರಿಜನರಿಗೆ ಎಲ್ಲ ಸೌಲಭ್ಯ ಪಡೆಯುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಅರಣ್ಯವಾಸಿಗಳು ಇನ್ನೂ ‘ಕಗ್ಗತ್ತಲ’ಲ್ಲೇ ವಾಸಿಸುವಂತಾಗಿದೆ.

ತಾಲ್ಲೂಕಿನಲ್ಲಿ 38 ಗಿರಿಜನ ಹಾಡಿಗಳಿದ್ದು, ಅವುಗಳಲ್ಲಿ 5 ಹಾಡಿಗಳು ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನದ ‘ಬಫರ್ ಜೋನ್‌’ ವ್ಯಾಪ್ತಿಯಲ್ಲಿ ಅಂದರೆ; ಅರಣ್ಯ ಪ್ರದೇಶದೊಳಗೆ ನೆಲೆಗೊಂಡಿವೆ. ವರ್ತಿ ಹಾಡಿಯಲ್ಲಿ 52 ಕುಟುಂಬಗಳಿದ್ದು 180 ಗಿರಿಜನರಿದ್ದಾರೆ, ಹಳೆಕೆರೆ ಹಾಡಿಯಲ್ಲಿ 62 ಕುಟುಂಬಗಳಿದ್ದು 207 ಗಿರಿಜನರಿದ್ದಾರೆ.

ಮರಳುಕಟ್ಟೆ ಹಾಡಿಯಲ್ಲಿ 57 ಕುಟುಂಬಗಳಿದ್ದು 228 ಗಿರಿಜನ, ಕಂಡಿಬೊಕ್ಕೆ ಹಾಡಿಯಲ್ಲಿ 22 ಕುಟುಂಬಗಳಿದ್ದು 61 ಜನ, ಮಗಲಗನಕೆರೆ ಹಾಡಿಯಲ್ಲಿ 29 ಕುಟುಂಬಗಳಿದ್ದು 148 ಜನ ವಾಸವಾಗಿದ್ದಾರೆ.

ADVERTISEMENT

ಈ ಹಾಡಿಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ಸೌಲಭ್ಯವಿಲ್ಲ. ಇದರೊಂದಿಗೆ ಶಾಶ್ವತ ಮನೆ ನಿರ್ಮಿಸಲೂ ಸಾಧ್ಯವಾಗಿಲ್ಲ. ಪ್ಲಾಸ್ಟಿಕ್‌ ಹೊದಿಕೆ, ಹೆಂಚು, ಬಿದಿರು ಸಹಾಯದಿಂದ ಗೂಡು ಕಟ್ಟಿಕೊಂಡಿದ್ದಾರೆ ಈ ಜನ. ಆದರೆ, ಮಳೆಗಾಲದಲ್ಲಿ ಈ ಮನೆಗಳು ಮುರಿದುಬೀಳುತ್ತವೆ. ಇವುಗಳ ದುರಸ್ತಿಯೇ ದುರಸ್ತವಾಗಿದೆ ಎನ್ನುತ್ತಾರೆ ಹಾಡಿ ಜನರ ಮುಖಂಡ ಶಿವಣ್ಣ.

ಸಮನ್ವಯ ಕೊರತೆ ಎಲ್ಲಿ?: ಹುಲಿ ಸಂತತಿ ಹೆಚ್ಚಾದ ಕಾರಣ 2014ರಲ್ಲಿ ತಾಲ್ಲೂಕಿನಲ್ಲಿ 8,500 ಎಕರೆ ಅರಣ್ಯವನ್ನು ‘ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್‌’ ಎಂದು ಗುರುತಿಸಲಾಗಿದೆ. ಇಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳಬೇಕಾದರೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಆದರೆ, ಇದುವರೆಗೂ ಒಂದೂ ಅರ್ಜಿ ಸಲ್ಲಿಸಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ!

ವರ್ತಿ ಹಾಡಿಯ ಅಯ್ಯಪ್ಪ ಮತ್ತು ಶಿವು ಎಂಬುವವರಿಗೆ ವರ್ಷದ ಹಿಂದೆ ಚೌತಿ ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ಯೋಜನೆಯಲ್ಲಿ 2 ಮನೆ ಮಂಜೂರಾಗಿದ್ದವು. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದ ಕಾರಣ ಮನೆ ನಿರ್ಮಿಸಲು ಅರಣ್ಯ ಇಲಾಖೆ ತಡೆಯೊಡ್ಡಿದೆ. ಅರ್ಜಿ ಸಲ್ಲಿಸಬೇಕಿದ್ದ ಪಿಡಿಒ ಇದುವರೆಗೂ ತಮ್ಮ ಕೆಲಸ ಮಾಡಿಲ್ಲ.

ಹಾಡಿಗಳಿಗೆ ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗಳ ಕಚೇರಿಯಿಂದ ಕ್ರಿಯಾ ಯೋಜನೆ ತಯಾರಿಸಿ, ಅನುದಾನ ಪಡೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಪಿಡಿಒ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಸಮಿತಿ ಅಧ್ಯಕ್ಷ ಶಿವಣ್ಣ.

ಅಹೋರಾತ್ರಿ ಹೋರಾಟ: ಅರಣ್ಯ ಹಕ್ಕು ಕಾಯ್ದೆ ಅಡಿ ತಲಾ 28 ಗುಂಟೆ ಭೂಮಿ ಪಡೆದು ಮುಸುಕಿನ ಜೋಳ, ಶುಂಠಿ ಬೇಸಾಯ ಮಾಡುತ್ತಿರುವ ಗಿರಿಜನರಿಗೆ, ವಾಸ್ತವವಾಗಿ ಸ್ವಾಧೀನದಲ್ಲಿರುವಷ್ಟು ಭೂಮಿಯನ್ನು ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿರುವ ಜಾನಕಮ್ಮ ಅವರ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಗಿರಿಜನರಲ್ಲಿನ ಒಗ್ಗಟ್ಟಿನ ಕೊರತೆ ಕೂಡ ಅವರ ಸಮಸ್ಯೆಗೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.