ADVERTISEMENT

‘ಕಪ್ಪುಹಣ, ತೆರಿಗೆ ವಂಚನೆ ತಡೆಗೆ ನೋಟು ರದ್ದತಿ’

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:39 IST
Last Updated 28 ಮೇ 2017, 6:39 IST

ಮೈಸೂರು: ಕಪ್ಪುಹಣವನ್ನು ಬೆಳಕಿಗೆ ತರುವುದು ಮತ್ತು ನಿಂತ ನೀರಿನಂತಿದ್ದ ದೇಶದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವುದೇ ನೋಟು ರದ್ದತಿ ಕ್ರಮದ ಹಿಂದಿನ ಪ್ರಮುಖ ಉದ್ದೇಶವಾಗಿತ್ತು ಎಂದು ಪುಣೆಯ ಅರ್ಥಕ್ರಾಂತಿ ಪ್ರತಿಷ್ಠಾನದ ಸ್ಥಾಪಕ ಅನಿಲ್ ಬೋಕಿಲ್  ಹೇಳಿದರು.ನಮ್ಮ ಮೈಸೂರು ಫೌಂಡೇಷನ್‌ ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ನೋಟು ರದ್ದತಿ– ದೇಶದ ಆರ್ಥಿಕತೆಯ ಮೇಲಿನ ಪರಿಣಾಮಗಳು’ ಕುರಿತು ಅವರು ಮಾತನಾಡಿದರು.

ಕಪ್ಪುಹಣವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಜತೆಗೆ, ಭ್ರಷ್ಟಾಚಾರವನ್ನು ಪತ್ತೆ ಹಚ್ಚುವುದು ಕಷ್ಟ. ದೇಶದ ಆರ್ಥಿಕತೆಯನ್ನು ಕಾಡುತ್ತಿದ್ದ ಇವೆರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರವು ನೋಟು ರದ್ದತಿಯಂತಹ ಮಹತ್ವದ ನಿರ್ಧಾರ ಕೈಗೊಳ್ಳ­ಬೇಕಾಯಿತು. ಈ ಸಂಬಂಧ ನೋಟು ರದ್ದತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದವರಲ್ಲಿ   ಪ್ರಮುಖನಾಗಿರುವೆ ಎಂದು ಹೇಳಿದರು.

ತೆರಿಗೆ ಎಂಬುದು ಸರ್ಕಾರದ ಬೊಕ್ಕಸಕ್ಕೆ ಸೇರುವ ಶುದ್ಧ ವರಮಾನ. ಆದರೆ ಜನರು ತೆರಿಗೆ ವಂಚಿಸಲು ಕಪ್ಪುಹಣ ಕೂಡಿಡಲು ಶುರು­ಮಾಡಿದರು. ತೆರಿಗೆ ಪಾವತಿಯಾಗದ ಕಾರಣ ಸರ್ಕಾರದ ಬೊಕ್ಕಸ ತುಂಬಲಿಲ್ಲ. ಹಣದ ಕೊರತೆಯಿಂದಾಗಿ ಸರ್ಕಾರಕ್ಕೂ ತನ್ನ ಯೋಜನೆಗಳನ್ನು ಜಾರಿಗೊಳಿಸಲು ಆಗಲಿಲ್ಲ. ಜತೆಗೆ ಭ್ರಷ್ಟಾಚಾರದ ಪಿಡುಗು ಕಾಡಿತು. ಇದರಿಂದಾಗಿ ಆರ್ಥಿಕ ಪ್ರಗತಿ ಕುಂಠಿತವಾಗತೊಡಗಿತು ಎಂದು ವಿವರಿಸಿದರು.

ADVERTISEMENT

ಅಧಿಕ ಮೌಲ್ಯದ ನೋಟು ರದ್ದತಿ ಬಗ್ಗೆ ನಮ್ಮ ಪ್ರತಿಷ್ಠಾನವು ಬಹಳ ವರ್ಷಗಳ ಹಿಂದೆಯೇ ಮಾತನಾಡಿತ್ತು. 1998ರಲ್ಲಿ ಮೊದಲ ಬಾರಿಗೆ ಈ ಬಗ್ಗೆ ಚಿಂತನೆ ನಡೆಸಿದ್ದೆವು. ನಮ್ಮ ಯೋಜನೆ ಸುದೀರ್ಘ ಅವಧಿಯ ಬಳಿಕ ಕಾರ್ಯರೂಪಕ್ಕೆ ಬಂದಿದೆ ಎಂದರು. ಹಣ ಎಂಬುದು ಒಂದು ಮಾಧ್ಯಮ. ಆದರೆ, ಭಾರತದಲ್ಲಿ ಹಣ ಒಂದು ವಸ್ತುವಾಗಿ ಬದಲಾಗಿತ್ತು. ಈ ಪರಿಸ್ಥಿತಿಯನ್ನು ಬದಲಿಸಲು ನೋಟು ರದ್ದತಿ ಮಾಡಬೇಕಾಯಿತು ಎಂದು ಅವರು ವಿವರಿಸಿದರು.

ಅಮೆರಿಕವು 1969ರಲ್ಲಿ ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿತ್ತು. 100 ಡಾಲರುಗಳಿಗಿಂತ ಅಧಿಕ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದುಕೊಂಡಿತ್ತು. ಈ ಕ್ರಮ ಅತ್ಯುತ್ತಮ ಫಲಿತಾಂಶ ನೀಡಿತ್ತು. ಅಮೆರಿಕದ ಕರೆನ್ಸಿ ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿ ಎನಿಸಿದೆ ಎಂದರು. ನಮ್ಮ ಮೈಸೂರು ಫೌಂಡೇಷನ್‌ ಅಧ್ಯಕ್ಷ ಎಸ್‌.ಕೆ.ದಿನೇಶ್‌, ಯಶವಂತ್‌್, ಅರ್ಜುನ್‌ ರಂಗಾ, ಅರ್ಥಕ್ರಾಂತಿ ಪ್ರತಿಷ್ಠಾನದ ಅರುಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.