ADVERTISEMENT

‘ಕಾಂಗ್ರೆಸ್ ನಡಿಗೆ, ಸ್ವರಾಜ್ಯದೆಡೆಗೆ’; ಸಿದ್ಧರಾಗಿ

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:51 IST
Last Updated 3 ಜನವರಿ 2017, 9:51 IST

ಮೈಸೂರು: ‘ಕಾಂಗ್ರೆಸ್ ನಡಿಗೆ, ಸ್ವರಾಜ್ಯದೆಡೆಗೆ’ ಕಾರ್ಯಕ್ರಮವನ್ನು ಜ. 30ರೊಳಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪಕ್ಷದ ನಗರ ಮತ್ತು ಗ್ರಾಮಾಂತರ ಘಟಕಗಳ ಅಧ್ಯಕ್ಷರಿಗೆ ಸೂಚನೆ ನೀಡಿದರು. ಕಾಂಗ್ರೆಸ್ ನಗರ ಘಟಕವು ಜಗನ್ಮೋಹನ ಅರಮನೆಯಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಬಲವರ್ದನೆಗೆ ಹೆಚ್ಚು ಗಮನಹರಿಸಬೇಕಿದೆ. ಪಕ್ಷದ ವಾರ್ಡ್ ಸಮಿತಿಗಳನ್ನು ರಚಿಸಬೇಕು. ಚನ್ನಾಗಿ ಕೆಲಸ ಮಾಡದಿದ್ದರೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರನ್ನು ಬದಲಾಯಿಸಬೇಕು. ಎಲ್ಲ ಸಮಿತಿಗಳಲ್ಲಿ ಪ್ರತ್ಯೇಕ ವಿಭಾಗ ರಚಿಸಿ ಪದಾಧಿಕಾರಿಗಳನ್ನು ಕೂಡಲೇ ನೇಮಿಸಬೇಕು ಎಂದರು.

‘ಭವಿಷ್ಯದ ಚುನಾವಣೆಗಳನ್ನು ನಮ್ಮ  ಸರ್ಕಾರದ ಸಾಧನೆಗಳನ್ನು ತಿಳಿಸುವ ಮೂಲಕ ಎದುರಿಸಬೇಕು. ನಂಜನಗೂಡು ಉಪಚುನಾವಣೆಯನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಡಜನತೆಯ ಪರವಾದ ನಿಲುವನ್ನು ಸಮಾಜಕ್ಕೆ ತಿಳಿಸಬೇಕು.

ಅನ್ನಭಾಗ್ಯ, ಪಶು ಭಾಗ್ಯ ಸೇರಿದಂತೆ ನಾನಾ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಂಗ್ರೆಸ್‌ ಚುನಾವಣೆಗೆ ಮುನ್ನ ನೀಡಿದ 175 ಭರವಸೆಗಳ ಪೈಕಿ, 125 ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ನೀರಾವರಿ ಯೋಜನೆಳಿಗೆ ₹ 60 ಸಾವಿರ ಕೋಟಿ ನೀಡಿದೆ. ನಗರಗಳ ಅಭಿವೃದ್ಧಿಯಾಗಿದೆ. ನಿಗಮಗಳನ್ನು ಶ್ರೀಮಂತಗೊಳಿಸಲಾಗಿದೆ. ಇವೆಲ್ಲವೂ ರಾಜ್ಯದ ಅಭಿವೃದ್ಧಿಯ ಸಂಕೇತಗಳು’ ಎಂದರು.

ಕಾಂಗ್ರೆಸ್‌ ಮುಖಂಡ ಅಡಗೂರು ಎಚ್‌.ವಿಶ್ವನಾಥ್ ಮಾತನಾಡಿದರು. ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಧರ್ಮಸೇನಾ ಅತಿಥಿಗಳಾಗಿದ್ದರು.ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ರಾಧಾಮಣಿ ರಾಜೇಗೌಡ ಅಧಿಕಾರ ಸ್ವೀಕರಿಸಿದರು. ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ವಿಜಯ್‌ ಕುಮಾರ್, ನಗರ ಘಟಕದ ಅಧ್ಯಕ್ಷ ರವಿ ಶಂಕರ್, ಮುಖಂಡರಾದ ಸಿ.ದಾಸೇಗೌಡ, ಸುಶೀಲಮ್ಮ ಕೇಶವಮೂರ್ತಿ, ಶಫೀ ಉಲ್ಲಾ, ವೆಂಕಟೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.