ADVERTISEMENT

ಕೇಂದ್ರ ಸಚಿವ ಹೆಗಡೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 5:18 IST
Last Updated 26 ಡಿಸೆಂಬರ್ 2017, 5:18 IST

ಮೈಸೂರು: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಜರಬಾದಿನ ಬಿಜೆಪಿ ಕಚೇರಿ ಎದುರು ಧರಣಿ ಕುಳಿತಿದ್ದವರನ್ನು ಪೊಲೀಸರು ಬಂಧಿಸಿದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಸೋಮವಾರ ಸಂಜೆ ಬಿಜೆಪಿ ಕಚೇರಿ ಎದುರು ಧರಣಿ ಕುಳಿತರು. ಅನಂತಕುಮಾರ ಹೆಗಡೆ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವಶ್ರೇಷ್ಠವಾಗಿದೆ. ಇಡೀ ಪ್ರಪಂಚ ಈ ಸಂವಿಧಾನಕ್ಕೆ ತಲೆಬಾಗಿದೆ. ಬಹುತೇಕ ರಾಷ್ಟ್ರಗಳು ಭಾರತದ ಸಂವಿಧಾನವನ್ನು ಮಾದರಿಯಾಗಿ ಸ್ವೀಕರಿಸಿವೆ. ಇದರ ಮಹತ್ವ ಅರಿಯದ ಕೇಂದ್ರ ಸಚಿವರು ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಪ್ರತಿಭಟನಾಕಾರರ ಮನವೊಲಿಕೆಗೆ ನಜರಬಾದ್‌ ಠಾಣೆಯ ಪೊಲೀಸರು ಯತ್ನಿಸಿದರು. ಅನುಮತಿ ಪಡೆಯದೆ ಧರಣಿ ಕುಳಿತ ಆರೋಪದ ಮೇರೆಗೆ ಎಲ್ಲರನ್ನು ಬಂಧಿಸಿ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್‌) ಮೈದಾನಕ್ಕೆ ಕರೆದೊಯ್ದು ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಎಫ್‌ಟಿಎಸ್‌ ವೃತ್ತದ ಅಂಬೇಡ್ಕರ್‌ ಪ್ರತಿಮೆ ಎದುರು ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಂವಿಧಾನ ಮತ್ತು ಜಾತ್ಯತೀತರ ಕುರಿತು ನೀಡಿದ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಿದರು. ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಅನಂತಕುಮಾರ ಅವರ ಮಾತಿನ ಮೂಲಕ ಬಿಜೆಪಿಯ ಡೋಂಗಿತನ ಬಯಲಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಬದಲಾಯಿಸುವ ಹುನ್ನಾರ ಬಹಿರಂಗವಾಗಿದೆ. ಕೇಂದ್ರ ಸಚಿವ ಸ್ಥಾನ ಲಭಿಸಿದ ಬಳಿಕ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜ ಸ್ವಾಸ್ಥ್ಯ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌, ಜಿಲ್ಲಾ ಘಟಕದ ಅಧ್ಯಕ್ಷ ಅಜಂ ಪಾಷ, ಪಾಲಿಕೆ ಸದಸ್ಯ ಪುರುಷೋತ್ತಮ್‌ ಇದ್ದರು.

ಕ್ಷಮೆ ಯಾಚನೆಗೆ ಪಟ್ಟು: ಜಿಲ್ಲಾ ನ್ಯಾಯಾಲಯದ ಗಾಂಧಿ ಪುತ್ಥಳಿಯ ಎದುರು ಜಮಾಯಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರು, ಅನಂತಕುಮಾರ ಹೆಗಡೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಸಂವಿಧಾನದ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಚೌಕಟ್ಟು ನಿರ್ಮಿಸಿದ ಅಂಬೇಡ್ಕರ್‌ ಅವರ ಶ್ರಮವನ್ನು ಮಣ್ಣುಪಾಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಮತ್ತು ಜಾತ್ಯತೀತರ ಕುರಿತು ನೀಡಿದ ಹೇಳಿಕೆಯನ್ನು ಸಚಿವ ಹೆಗಡೆ ಅವರು ಕೂಡಲೇ ಹಿಂಪಡೆಯಬೇಕು. ಈ ಕುರಿತು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅತ್ಯಾಚಾರ ನಡೆಸಿದವರಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ. ಈ ಪಕ್ಷ ಎಂತಹ ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದಕ್ಕೆ ಇದು ನಿದರ್ಶನ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.