ADVERTISEMENT

ಖುಷಿ ನಶೆಯ ನೃತ್ಯ ‘ರಂಗಿತರಂಗ’

ದಸರಾ ಮಹೋತ್ಸವ ಯುವ ಸಂಭ್ರಮ: ವಿವಿಧ ತಂಡಗಳಿಂದ ಸಾಂಸ್ಕೃತಿಕ ಪ್ರತಿಭೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 9:45 IST
Last Updated 28 ಸೆಪ್ಟೆಂಬರ್ 2016, 9:45 IST

ಮೈಸೂರು: ವಿದ್ಯಾರ್ಥಿ ತಂಡಗಳು ಸಾಂಸ್ಕೃತಿಕ ಕಾರಂಜಿಯಲ್ಲಿ ನಾಡು, ನುಡಿ, ಜಲ ಸಂರಕ್ಷಣೆಯ ಮಹತ್ವ ಅರಳಿಸಿ, ಪ್ರೇಕ್ಷಕರನ್ನು ಸಂತಸದ ಅಲೆಯಲ್ಲಿ ತೇಲಿಸಿದವು.
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಯುವಸಂಭ್ರಮದಲ್ಲಿ ಮಂಗಳವಾರ ವಿವಿಧ ತಂಡಗಳು ಸಾಂಸ್ಕೃತಿಕ ಪ್ರತಿಭೆ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಹೆಜ್ಜೆಗೆಜ್ಜೆ ನಿನಾದ, ವೇಷಭೂಷಣ, ಸಂಗೀತ, ವರ್ಣರಂಜಿತ ಬೆಳಕು ಅದ್ಧೂರಿ ಮೆರುಗು ನೀಡಿದ್ದವು.

ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಪಾಠಶಾಲೆಯ (ತಿಲಕ್‌ನಗರ) ವಿದ್ಯಾರ್ಥಿಗಳು ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...’ ನಾಡಗೀತೆಗೆ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ‘ವಂದೇಮಾತರಂ...’ ‘ಜೈ ಹೋ...’ ಮತ್ತು ‘ರಘುಪತಿ ರಾಘವ ರಾಜಾರಾಂ....’ ಗೀತೆಗಳಿಗೆ ಮಕ್ಕಳು ನರ್ತಿಸಿದರು.

ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡದವರು ಡಿ.ದೇವರಾಜು ಅರಸು ಕೊಡುಗೆ  ಮತ್ತು ಸುಧಾರಣೆಗಳ ಕುರಿತ ನೃತ್ಯರೂಪಕ ಪ್ರದರ್ಶಿಸಿದರು. ‘ನಾನಿರುವುದೆ ನಿಮಗಾಗಿ, ನಾಡಿರುವುದೇ ನಮಗಾಗಿ ಕಣ್ಣಿರೇಕೆ....’ ‘ಜನನಾಯಕ ನಮ್ಮ ಊರಿಗೆ’ ಹಾಡುಗಳ ಮಿಳಿತದಲ್ಲಿ ನೃತ್ಯ ವೈಭೋಗ ಹೊಮ್ಮಿಸಿದರು.

ವರಕೋಡಿನ ಮೊರಾರ್ಜಿ ದೇಸಾಯಿ ಪಿಯು ವಸತಿ ವಿಜ್ಞಾನ ಕಾಲೇಜಿನ ತಂಡದವರು ನೆಲ, ಜಲ, ಭಾಷೆಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿದರು. ನಜರಬಾದ್‌ನ ವಾಣಿವಿಲಾಸ ಅರಸು ಬಾಲಿಕಾ ಪಿಯು ಕಾಲೇಜಿನವರು ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಅವರ ಹೋರಾಟವನ್ನು ಸಾರಿದರು. ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪಿಯು ಕಾಲೇಜಿನವರು ಕನ್ನಡ ಭಾಷಾಭಿಮಾನ ಮೆರೆದರು.

ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ತಂಡದವರು ಜನಪದ ವಾದ್ಯ ಗೋಷ್ಠಿ  ಪ್ರದರ್ಶಿಸಿದರು. ಜನಪದ ವಾದ್ಯಗಳ ತಾಳಮೇಳಗಳ ಸಪ್ಪಳಕ್ಕೆ ಪ್ರೇಕ್ಷಕರು ಕುಂತಲ್ಲೇ, ನಿಂತಲ್ಲೇ ಹೆಜ್ಜೆ ಹಾಕಿ ಸಂಭ್ರಮಿಸಿದರು. 20ಕ್ಕೂ ಹೆಚ್ಚು ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.

ಪ್ರೇಕ್ಷಕರ ಗ್ಯಾಲರಿಯ ಒಂದು ಅಂಕಣದಲ್ಲಿ ಯುವಕರು ಕುಣಿದು ಕುಪ್ಪಳಿಸಿದರೆ, ಮತ್ತೊಂದು ಅಂಕಣದಲ್ಲಿದ್ದ ಯುವತಿಯರು ನಾವೇನು ಕಡಿಮೆಯಿಲ್ಲ ಎಂದು ಹೆಜ್ಜೆ ಹಾಕಿದರು. ಸಂಜೆಗತ್ತಲಿನ ನೃತ್ಯ ಮೋಡಿಯಲ್ಲಿ ಯುವಪಡೆಗೆ ಖುಷಿಯ ನಶೆ ಏರಿತ್ತು. ಇಡೀ ಆವರಣದಲ್ಲಿ ‘ತಕಧಿಮಿತ’ ರಂಗೇರಿತ್ತು. ಮೊಬೈಲ್‌ ಕ್ಯಾಮೆರಾಗಳಲ್ಲಿ ನೃತ್ಯ ಸಿರಿಯನ್ನು ಕೆಲವರು ಸೆರೆ ಹಿಡಿಯುವುದರಲ್ಲಿ ತಲ್ಲೀನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.