ADVERTISEMENT

ಜಲಾಶಯಗಳಿದ್ದರೂ ನೀರಿಗೆ ತತ್ವಾರ

ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಎಚ್‌.ಡಿ.ಕೋಟೆ ತಾಲ್ಲೂಕಿನ ರೈತ ಸಮುದಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:23 IST
Last Updated 23 ಮಾರ್ಚ್ 2017, 6:23 IST
ಎಚ್.ಡಿ.ಕೋಟೆ ತಾಲ್ಲೂಕಿನ ಹೆತ್ತಿಗೆ ಗ್ರಾಮದಲ್ಲಿ ಕುಡಿಯುವ ನೀರಿನ ತೊಂಬೆ ಬಳಿ ನೀರಿಗಾಗಿ ಕೊಡಗಳೊಂದಿಗೆ ಗುಂಪು ಸೇರಿರುವ ಗ್ರಾಮಸ್ಥರು
ಎಚ್.ಡಿ.ಕೋಟೆ ತಾಲ್ಲೂಕಿನ ಹೆತ್ತಿಗೆ ಗ್ರಾಮದಲ್ಲಿ ಕುಡಿಯುವ ನೀರಿನ ತೊಂಬೆ ಬಳಿ ನೀರಿಗಾಗಿ ಕೊಡಗಳೊಂದಿಗೆ ಗುಂಪು ಸೇರಿರುವ ಗ್ರಾಮಸ್ಥರು   

ಎಚ್.ಡಿ.ಕೋಟೆ:  ತಾಲ್ಲೂಕಿನಲ್ಲಿ ಕಬಿನಿ, ನುಗು, ತಾರಕ ಹಾಗೂ ಹೆಬ್ಬಳ್ಳ ಜಲಾಶಯಗಳಿದ್ದರೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಹಲವಾರು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಇದಕ್ಕಾಗಿ ತಾಲ್ಲೂಕು ಆಡಳಿತ ಟ್ಯಾಂಕರ್‌ನಲ್ಲಿ ನೀರು ಸರಬರಾಜು, ಖಾಸಗಿ ವ್ಯಕ್ತಿಗಳ ಕೊಳವೆ ಬಾವಿ ಬಳಕೆ ಸೇರಿದಂತೆ ಇತರ ಹಲವು ಕ್ರಮಗಳನ್ನು ಕೈಗೊಂಡರೂ ನೀರಿನ ತತ್ವಾರ ಬಗೆಹರಿಯುತ್ತಿಲ್ಲ.  ಕಳೆದ ಮುಂಗಾರಿನಲ್ಲಿ ಸರಿಯಾಗಿ ಮಳೆಯಾಗದೆ ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ.

ತಾಲ್ಲೂಕು ಆಡಳಿತ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಮುಂದಾಗಿದೆ.
150 ಟನ್ ಮೇವು ಖರೀದಿ ಮಾಡಿ, ಹಂಪಾಪುರ ಹೋಬಳಿಯೊಂದಕ್ಕೆ ಸುಮಾರು 83 ಟನ್ ಮೇವು ಹಂಚಿಕೆ ಮಾಡಲಾಗಿದೆ. 

ಬೆಳೆ: ತಾಲ್ಲೂಕಿನ 66,804 ಹೆಕ್ಟೇರ್ ಪ್ರದೇಶದ ಪೈಕಿ 55 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ವಾಡಿಕೆಯಂತೆ ಪ್ರಸ್ತುತ ವರ್ಷದಲ್ಲಿ 1,030 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಕೇವಲ 547 ಮಿ.ಮೀ ಮಳೆಯಾಗಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯನ್ನು 30,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಬೇಕಿತ್ತು. ಈ ಬಾರಿ 26,200 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಮಳೆ ಇಲ್ಲದೆ, ಶೇ 70ರಷ್ಟು ನಷ್ಟ ಉಂಟಾಗಿದೆ.

ಮುಸುಕಿನ ಜೋಳ 8,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಸುಮಾರು 4 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಒಣಗಿ ಹೋಗಿದೆ. ರಾಗಿಯನ್ನು ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಪೂರ್ಣ ಪ್ರಮಾಣದಲ್ಲಿ ಒಣಗಿ ಹುಲ್ಲು ಕೂಡ ಸಿಗಲಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿ ಜಯರಾಮಯ್ಯ ತಿಳಿಸಿದರು.

‘ಸರ್ಕಾರದಿಂದ ಹೆಚ್ಚಿನ ಪರಿಹಾರ ಸಿಗುವ ಆಶಾಭಾವನೆಯಲ್ಲಿ ಇದ್ದೇವೆ. ಮಳೆ ಆಶ್ರಿತ ಜಮೀನಿಗೆ ಒಂದು ಎಕರೆ ಬೆಳೆ ನಷ್ಟಕ್ಕೆ ಕೇವಲ ₹ 2,720 ಮಾತ್ರ ನೀಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ’ ಎಂದು ರೈತ ಮುಖಂಡ ಮಹದೇವಸ್ವಾಮಿ ಹೇಳುತ್ತಾರೆ.

ಕುಡಿಯುವ ನೀರು: ತಾಲ್ಲೂಕಿನಲ್ಲಿ ಸುಮಾರು 1,400 ಕೊಳವೆ ಬಾವಿಗಳಿದ್ದು, ಅದರಲ್ಲಿ 1,100 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಸಿಗುತ್ತಿದೆ. ನದಿಮೂಲದಿಂದ 414 ಹಳ್ಳಿಗಳಿಗೆ ನೀರು ಒದಗಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 232 ಗ್ರಾಮಗಳಿಗೆ ನೀರು ಒದಗಿಸಲಾಗಿದೆ.

ಒಟ್ಟು 9 ಯೋಜನೆಯಲ್ಲಿ 5 ಯೋಜನೆಗಳು ಪ್ರಗತಿಯಲ್ಲಿದ್ದು ಉಳಿದ 4 ಯೋಜನೆಗಳ ಕಾಮಗಾರಿ ಪ್ರಾರಂಭವಾಗಬೇಕಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ಚಾಮಲಾಪುರ, ಕಣಿಯನಹುಂಡಿ, ಹಾಲನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಬರದಿಂದ ತತ್ತರಿಸಿರುವ ಜನರು ಜೀವನ ನಿರ್ವಹಣೆಗೆ ಕೊಡಗು ಮತ್ತು ಕೇರಳಕ್ಕೆ ವಲಸೆ ಹೋಗುತ್ತಿದ್ದಾರೆ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ತಾಲ್ಲೂಕಿನಲ್ಲಿ ಸಮರ್ಪಕವಾಗಿ ಜಾರಿಯಲ್ಲಿ ಇಲ್ಲದಿರುವುದರಿಂದ ಜನರು ಕೂಲಿ ಅರಸಿ ಹೋಗುವ ಪರಿಸ್ಥಿತಿ ತಲೆದೋರಿದೆ.
-ಸತೀಶ್ ಬಿ.ಆರಾಧ್ಯ

*

ಅಭಿಪ್ರಾಯಗಳು
ಈ ವರ್ಷ ಸರಿಯಾಗಿ ಮಳೆಯಾಗದೆ ಇರುವುದರಿಂದ ತಾಲ್ಲೂಕಿನಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ಎಲ್ಲಾ ಹೋಬಳಿಯಲ್ಲೂ ಮೇವು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದ ರೀತಿಯಲ್ಲಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ.
-ಎಂ.ನಂಜುಂಡಯ್ಯ, ತಾಲ್ಲೂಕು ದಂಡಾಧಿಕಾರಿ, ಎಚ್.ಡಿ.ಕೋಟೆ

ADVERTISEMENT

*
ಪ್ರತಿ ಕುಟುಂಬಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೂರು ದಿನ ಕೆಲಸ ನೀಡುವುದರಿಂದ ಕೂಲಿಗಾಗಿ ಯಾರೂ ವಲಸೆ ಹೋಗಬಾರದು. ಉದ್ಯೋಗ ನೀಡಲು ನಿರಾಕರಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮೇಲೆ ದೂರು ನೀಡಿ.
-ಶ್ರೀಕಂಠರಾಜೇಅರಸ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಎಚ್.ಡಿ.ಕೋಟೆ

*
ತಾಲ್ಲೂಕಿನಲ್ಲಿ ಹಿಂಗಾರಿನಲ್ಲಿ 21 ಮಿ.ಮೀ ಮಳೆಯಾಗಿದ್ದು, ರೈತರು ತಮ್ಮ ಜಮೀನುಗಳಲ್ಲಿ ಮಾಗಿ ಉಳುಮೆ ಮಾಡಿಕೊಂಡರೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಲಭ್ಯವಾಗುತ್ತದೆ. ಹಾಗೇ ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗುವುದರಿಂದ ತಾಲ್ಲೂಕಿನ ರೈತರು ಸದುಪಯೋಗಪಡಿಸಿಕೊಳ್ಳಬೇಕು.
-ಜಯರಾಮಯ್ಯ, ಸಹಾಯಕ ಕೃಷಿ ನಿರ್ದೇಶಕ, ಎಚ್‌.ಡಿ.ಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.