ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ

ತಿಪ್ಪೂರು ಗ್ರಾಮದಲ್ಲಿ ನಾಯಕ ಸಮುದಾಯ ಭವನ ಉದ್ಘಾಟನೆ; ಎಚ್.ಡಿ.ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 9:14 IST
Last Updated 20 ಮಾರ್ಚ್ 2017, 9:14 IST
ಕೆ.ಆರ್.ನಗರ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ನಾಯಕ ಸಮಾಜದಿಂದ ಭಾನುವಾರ ನಡೆದ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಶಾಸಕ ಸಾ.ರಾ.ಮಹೇಶ್ ಇದ್ದಾರೆ.
ಕೆ.ಆರ್.ನಗರ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ನಾಯಕ ಸಮಾಜದಿಂದ ಭಾನುವಾರ ನಡೆದ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಶಾಸಕ ಸಾ.ರಾ.ಮಹೇಶ್ ಇದ್ದಾರೆ.   

ಕೆ.ಆರ್.ನಗರ: ‘ಜೆಡಿಎಸ್ ಅಧಿಕಾರಕ್ಕೆ ಬಂದರೆ, ಅಧಿಕಾರ ಹಿಡಿದ 24 ಗಂಟೆ ಅವಧಿಯಲ್ಲಿ ಕೃಷಿ ಸಾಲ ಮನ್ನಾ ಮಾಡಲಾಗುವುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ನಾಯಕ ಸಮಾಜದಿಂದ ಭಾನುವಾರ ಏರ್ಪಡಿಸಿದ್ದ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಯವ್ಯಯದಲ್ಲಿ ಸಾಲ ಮನ್ನಾ ಮಾಡಲಾಗುತ್ತದೆ ಎಂದು ರೈತರು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ, ಈ ಸರ್ಕಾರ ರೈತರ ಬಗ್ಗೆ ಏಕೆ ಇಷ್ಟೊಂದು ಅಸಡ್ಡೆಯಾಗಿ ನಡೆದುಕೊ ಳ್ಳುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

ನೀರಾವರಿಗೆ ₹ 16 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಟ್ಟಗೆ ರಸ್ತೆ ಮಾಡಲು ಆಗಿಲ್ಲ. ಇರುವ ಬಸ್ಸುಗಳಿಗೇ ರಸ್ತೆ ಇಲ್ಲ. ಇನ್ನು ಹೊಸ ದಾಗಿ 2 ಸಾವಿರ ಬಸ್ ಖರೀದಿ ಮಾಡು ತ್ತಾರಂತೆ. ಜತೆಗೆ ಮುಂದಿನ ಕಾರ್ಯ ಕ್ರಮಗಳಿಗೆ ₹ 35 ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದು ಬಜೆಟ್ ಪುಸ್ತಕ ದಲ್ಲಿ ಹೇಳಿದ್ದಾರೆ. ಹೀಗೆ ಘೋಷಣೆ ಮಾಡಿದ ಯಾವುದರ ಲ್ಲಾದರೂ ಸ್ವಲ್ಪ ಕಡಿಮೆ ಮಾಡಿ ಕೃಷಿ ಸಾಲ ಮನ್ನಾ ಮಾಡಬಹುದಿತ್ತು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ 4 ವರ್ಷದ ಅವಧಿಯಲ್ಲಿ ₹ 46 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಹಣ ಎಲ್ಲಿಗೆ ಹೋಯಿತು ಎಂದು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ಕೊಡುತ್ತಿ ರುವ ಕಾರ್ಯಕ್ರಮಗಳು ಪರಿಶಿಷ್ಟರಿಗೆ ತಲಪುತ್ತಿಲ್ಲ. ಅದರಲ್ಲಿ ಸಾಕಷ್ಟು ಲೋಪ ದೋಷಗಳಿವೆ ಎಂದು ಆರೋಪಿಸಿದರು.

ಸಮುದಾಯ ಭವನ ಉದ್ಘಾಟನೆ ಮಾಡುವಾಗ ಇರುವಂಥ ಉತ್ಸಾಹ ಕೊನೆಯವರೆಗೂ ಇರಬೇಕು, ಸಮು ದಾಯ ಭವನ ಜೂಜು ಅಡ್ಡೆಯಾಗಲು ಬಿಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಸಾ.ರಾ.ಮಹೇಶ್ ಮಾತ ನಾಡಿದರು. ಮೈಸೂರು ಪಾಲಿಕೆ ಅಧ್ಯಕ್ಷ ಎಂ.ಜೆ.ರವಿಕುಮಾರ್, ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್, ಗ್ರಾ.ಪಂ ಅಧ್ಯಕ್ಷೆ ದಾಕ್ಷಾಯಿಣಿ ಮಂಜುನಾಥ್, ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗೊರಗುಂಡಿ ಶ್ರೀನಿವಾಸಪ್ರಸಾದ್, ಜಿ.ಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ಹಿರಿಯ ವಕೀಲ ತಿಮ್ಮೇಗೌಡ, ಮುಖಂಡ ಮಹದೇವ ನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.