ADVERTISEMENT

ಟಿಕೆಟ್ ವಂಚಿತರ ಸಮಾಧಾನಕ್ಕೆ ಮುಂದಾದ ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 9:40 IST
Last Updated 20 ಏಪ್ರಿಲ್ 2018, 9:40 IST

ಪಿರಿಯಾಪಟ್ಟಣ: ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಮುಂದಾದ ಕೇಂದ್ರ ಸಚಿವ ಮನ್‌ ಸುಖ್‌ ಲಾಲ್‌ ಟಿಕೆಟ್‌ ವಂಚಿತರ ಆಕ್ರೋಶದಿಂದ ಸಭೆ ಮೊಟಕು ಗೊಳಿಸಿ ಅವರ ಸಂಧಾನಕ್ಕೆ ಮುಂದಾದ ಘಟನೆ ಗುರುವಾರ ನಡೆಯಿತು.

ಪಟ್ಟಣ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಆರಂಭವಾ ಗುತ್ತಿದ್ದಂತೆ ಬಿಜೆಪಿ ಮುಖಂಡ ಕೆ.ಕೆ.ಶಶಿ ಉದ್ಯಮಿ ಎಸ್‌.ಮಂಜುನಾಥ್‌ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆ ರದ್ದುಗೊಳಿಸಿ ಹೊರ ನಡೆದರು.

ಕಾರ್ಯಕರ್ತರಿಗೆ ಸಲಹೆ: ನಂತರ ನಡೆದ ಸಭೆಯಲ್ಲಿ ಮಾತನಾಡಿ, ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವ ಮೂಲಕ ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಮುಂದಾಗಬೇಕು.

ADVERTISEMENT

ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಮತಗಳು ಕೈಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಅಭ್ಯರ್ಥಿ ಆಯ್ಕೆ ಕುರಿತಾದ ಗೊಂದಲ ಬಗೆಹರಿಸಿ ಅಧಿಕೃತ ಅಭ್ಯರ್ಥಿ ಪರ ತಾಲ್ಲೂಕಿನಾದ್ಯಂತ ಮತಯಾಚಿಸಲು ಎಲ್ಲ ಮುಖಂಡರು ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.

ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಸುನಿಲ್‌ ಸುಬ್ರಮಣ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿ ಕಿರಣ್‌ ಜಯರಾಮೇಗೌಡ, ಮುಖಂಡರಾದ ಆರ್.ಟಿ.ಸತೀಶ್, ಬೆಮ್ಮತಿ ಕೃಷ್ಣ, ಎಂ.ಎಂ.ರಾಜೇಗೌಡ, ಡಾ.ಪ್ರಕಾಶ್ ಬಾಬುರಾವ್, ಕೆ.ಕೆ.ಶಶಿ, ಸುದರ್ಶನ್ ಹಲವರು ಹಾಜರಿದ್ದರು.

ಬಿಜೆಪಿ ಮುಖಂಡರ ಮನೆಗೆ ಭೇಟಿ: ಬಿಜೆಪಿಯಲ್ಲಿ ಉಂಟಾಗಿರುವ ಅಸಮಾ ಧಾನ ಸರಿಪಡಿಸಲು ಕೇಂದ್ರಸಚಿವರು ಮುಖಂಡ ಎಚ್.ಡಿ.ಗಣೇಶ್ ಮನೆಗೆ ಭೇಟಿ ನೀಡಿ ಚರ್ಚಿಸಿದರು.ಆದರೆ, ಅವರು ಸಚಿವರ ಮಾತಿಗೆ ಮನ್ನಣೆ ನೀಡಲಿಲ್ಲ.ನಂತರ ಪಕ್ಷದ ಕಚೇರಿಯ ಸಭೆಗೂ ಗೈರುಹಾಜರಾದರು. ಸಭೆಯ ನಂತರ ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್ ಮನೆಗೆ ಭೇಟಿ ನೀಡಿದ ಸಚಿವರು, ಕೆಲವು ಮುಖಂಡರೊಂದಿಗೆ ಒಂದು ಗಂಟೆ ಚರ್ಚೆ ನಡೆಸಿದರು.

ಈ ಸಭೆಗೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಜೆ.ರವಿ, ಮುಖಂಡರಾದ ಡಾ.ಪ್ರಕಾಶ್‌ ಬಾಬುರಾವ್, ಕೆ.ಕೆ.ಶಶಿ ಇತರರು ಗೈರು ಹಾಜರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.