ADVERTISEMENT

ಟೂರಿಸ್ಟ್ ಪಾಸ್‌ಪೋರ್ಟ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 9:22 IST
Last Updated 1 ಸೆಪ್ಟೆಂಬರ್ 2014, 9:22 IST

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ‘ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್’ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಭಾನುವಾರ ಬಿಡುಗಡೆ ಮಾಡಿದರು.

ಶ್ರೀ ಚಾಮರಾಜೇಂದ್ರ ಮೃಗಾಲಯ ಆವರಣದ ಕಾರಂಜಿ ಬಳಿ ಟೂರಿಸ್ಟ್‌ ಪಾಸ್‌ಪೋರ್ಟ್‌ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರವಾಸಿ ತಾಣಗಳ ಸುಲಭ ವೀಕ್ಷಣೆಗೆ, ಟಿಕೆಟ್‌ ಕೊಳ್ಳಲು ಆಗುವ ಕಾಲ ವಿಳಂಬವನ್ನು ತಪ್ಪಿಸಲು ಹಾಗೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್ ಜಾರಿಗೆ ತರಲಾಗುತ್ತದೆ.

ದಸರಾಕ್ಕೆ ದೇಶ–ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಅವರಿಗೆ ಅನುಕೂಲವಾಗಲಿದೆ. ಸೆ. ೧೫ರಿಂದ ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್‌ ಚಾಲನೆಗೊಳ್ಳಲಿದೆ. ಪ್ರವಾಸಿಗರು ದಸರಾ ಮತ್ತು ಮೃಗಾಲಯ ವೆಬ್‌ಸೈಟ್‌ ಮೂಲಕ ಟಿಕೆಟ್‌ ಕಾದಿರಿಸಬಹುದು’ ಎಂದು ತಿಳಿಸಿದರು.

‘ಮೈಸೂರಿನ ಅಂಬಾವಿಲಾಸ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿಬೆಟ್ಟ, ಕೆಆರ್‌ಎಸ್‌ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮವನ್ನು ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್ ಮೂಲಕ ವೀಕ್ಷಿಸಬಹುದು. ಇದರ ಅವಧಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಇರಲಿದೆ’ ಎಂದು ಹೇಳಿದರು. ‘ಪಾಸ್‌ಪೋರ್ಟ್‌ನಲ್ಲಿ ಒಟ್ಟು ಮೂರು ಮಾದರಿಗಳಿರುತ್ತವೆ.

ಮೊದಲ ಮಾದರಿಯಲ್ಲಿ ಅರಮನೆ ಹಾಗೂ ಮೃಗಾಲಯ ಒಳಗೊಂಡಿದ್ದು, ಇದಕ್ಕಾಗಿ ಕಿತ್ತಲೆ ಬಣ್ಣದ ಪಾಸ್‌ಪೋರ್ಟ್ ಇರುತ್ತದೆ. ಎರಡನೆಯ ಮಾದರಿಯಲ್ಲಿ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ ಹಾಗೂ ಚಾಮುಂಡಿ ಬೆಟ್ಟ ಒಳಗೊಂಡಿದ್ದು ಹಸಿರು ಬಣ್ಣದ ಪಾಸ್‌ಪೋರ್ಟ್ ಇರುತ್ತದೆ. ಮೂರನೆಯ ಮಾದರಿಯಲ್ಲಿ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿ ಬೆಟ್ಟ, ಕೆಆರ್ಎಸ್‌ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮಗಳಿದ್ದು ನೀಲಿ ಬಣ್ಣದ ಪಾಸ್‌ಪೋರ್ಟ್ ಇರುತ್ತದೆ’ ಎಂದು ಹೇಳಿದರು.

‘ಕಿತ್ತಲೆ ಬಣ್ಣದ ಪಾಸ್‌ಪೋರ್ಟ್‌ನ ಗರಿಷ್ಠ ಕಾಲಾವಧಿ ಒಂದು ದಿನಕ್ಕೆ ಮಾತ್ರ. ವಯಸ್ಕರಿಗೆ ₨ 8೦, ಮಕ್ಕಳಿಗೆ ₨ 4೦. ವಿದೇಶಿಗರಿಗೆ ₨ ೨೨೦, ಮಕ್ಕಳಿಗೆ ₨ ೧೧೦. ಹಸಿರು ಬಣ್ಣದ ಪಾಸ್‌ಪೋರ್ಟ್‌ನ ಅವಧಿ ಎರಡು ದಿನಗಳಿಗೆ ಮಾತ್ರ. ವಯಸ್ಕರಿಗೆ ₨ 12೦ ಹಾಗೂ ಮಕ್ಕಳಿಗೆ ₨ 7೫. ವಿದೇಶಿ ಪ್ರವಾಸಿಗರಿಗೆ ₨ ೨೬೦ ಮತ್ತು ಮಕ್ಕಳಿಗೆ ₨ ೧೬೦. ನೀಲಿ ಬಣ್ಣದ ಪಾಸ್‌ಪೋರ್ಟ್ ಮೂರು ದಿನಗಳಿಗೆ ಮಾತ್ರ. ವಯಸ್ಕರಿಗೆ ₨ 16೦ ಹಾಗೂ ಮಕ್ಕಳಿಗೆ ₨ 10೦ ಹಾಗೂ ವಿದೇಶಿಗರಿಗೆ ₨ ೫೧೦ ಮತ್ತು ಮಕ್ಕಳಿಗೆ ₨ ೧೭೦ ನಿಗದಿಪಡಿಸಲಾಗಿದೆ’ ಎಂದರು. 
 
ಶಾಸಕರಾದ ಜಿ.ಟಿ. ದೇವೇಗೌಡ, ಆರ್‌. ಧರ್ಮಸೇನ, ತನ್ವೀರ್‌ ಸೇಟ್‌, ಜಿ.ಪಂ. ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್‌, ಉಪಾಧ್ಯಕ್ಷ ಎಲ್‌. ಮಾದಪ್ಪ, ಜಿಲ್ಲಾಧಿಕಾರಿ ಸಿ. ಶಿಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಮೈಸೂರು ಟೂರಿಸ್ಟ್‌ ಪಾಸ್‌ಪೋರ್ಟ್ ಯೋಜನೆಯ ನೋಡೆಲ್ ಅಧಿಕಾರಿ ಬಿ.ಪಿ. ರವಿ, ಉಪ ವಿಭಾಗಾಧಿಕಾರಿ ಸಯಿದಾ ಆಯಿಷಾ, ಮೈಸೂರು ಅರಮನೆ ಮಂಡಳಿಯ ನಿರ್ದೇಶಕಿ ಕೆ.ಎಂ. ಗಾಯತ್ರಿ, ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.