ADVERTISEMENT

ತಂಬಾಕು ಬಿಟ್ಟು ಟೊಮೆಟೊ ಕೈ ಹಿಡಿದ ರೈತ

ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 8:47 IST
Last Updated 25 ಜುಲೈ 2017, 8:47 IST

ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿ ಗೌಡಿಕೆರೆಯ ಪದವೀಧರ ರೈತ ಮಂಜುನಾಥ್‌ ವಾಣಿಜ್ಯ ಬೆಳೆ ತಂಬಾಕು ಕೃಷಿಯನ್ನು ಕೈಬಿಟ್ಟು  ಟೊಮೊಟೊ ಕೃಷಿಗೆ ಒತ್ತು ನೀಡಿದ್ದಾರೆ.  ಈ ಮೂಲಕ ಅನ್ಯ ಕೃಷಿಕರಿಗೂ ಮಾದರಿಯಾಗಿದ್ದಾರೆ.

ತನ್ನ 5 ಎಕರೆ 10 ಗುಂಟೆ ಪ್ರದೇಶದಲ್ಲಿ ತಂಬಾಕು ಬೆಳೆದು ಕೈ ಸುಟ್ಟುಕೊಂಡಿದ್ದ ಮಂಜುನಾಥ್‌, ಈ ವರ್ಷ 5 ಎಕರೆ ಪ್ರದೇಶದಲ್ಲಿ ಪರ್ಯಾಯವಾಗಿ ಟೊಮೆಟೊ ಕೃಷಿ ಮಾಡಿದ್ದು, ಫಲ ಕೈಹಿಡಿಯುವ ಮೂಲಕ ಹಸನ್ಮುಖಿಯಾಗಿದ್ದಾರೆ.

ಬಿ.ಎ. ಪದವೀಧರರಾದ ಅವರು, ವಾಣಿಜ್ಯ ಬೆಳೆಗೆ ಸೂಕ್ತ ಪರ್ಯಾಯ ಬೆಳೆ ಗುರುತಿಸುವ ನಿಟ್ಟಿನಲ್ಲಿ ವಿವಿಧ ಕೃಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದಾರೆ.

ADVERTISEMENT

ಅದರಂಎ ದೃಢ ಮನಸ್ಸು ಮಾಡಿ ತಂಬಾಕು ಕೃಷಿ ಬೇಡವೇ ಬೇಡ ಎಂಬ ದೃಢ ಮನಸ್ಸಿನಿಂದ ಐದು ಎಕರೆ ಪ್ರದೇಶದಲ್ಲಿ ‘ಆರ್ಕ್ ರಕ್ಷಕ್’ ಹೆಸರಿನ ಟೊಮ್ಯಾಟೊ ತಳಿ ಬೆಳೆದಿದ್ದಾರೆ.

5 ಎಕರೆ ಭೂಮಿಯನ್ನು ಮಂಜುನಾಥ್‌ ಮೂರು ಭಾಗವಾಗಿ ಗುರುತಿಸಿ, ಹನಿ ನೀರಾವರಿ ಹಾಗೂ ಮಲ್ಚಿಂಗ್‌ ಪದ್ಧತಿಯನ್ನು ಕೃಷಿಗೆ ಅನುಸರಿಸಿದ್ದಾರೆ. 

ಪ್ರತಿ ಭಾಗದಲ್ಲೂ ತಲಾ 8 ಸಾವಿರದಂತೆ 40 ಸಾವಿರ ಟೊಮೆಟೊ ಸಸಿ ನಾಟಿ ಮಾಡಿದ್ದಾರೆ. ಮಲ್ಚಿಂಗ್ ಪದ್ಧತಿ ಅಳವಡಿಕೆಯಿಂದ ಕಡಿಮೆ ವೆಚ್ಚದಲ್ಲಿ ಬೇಸಾಯ ಮಾಡುವುದು ಸಾಧ್ಯವಾಗಿದೆ  ಎಂದು ಹೇಳಿದರು.

ಹನಿ ನೀರಾವರಿ: ಒಂದೇ ಕೊಳವೆಬಾವಿಯಿಂದ 5 ಎಕರೆ ಪ್ರದೇಶಕ್ಕೂ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನೀರು, ರಸಗೊಬ್ಬರ ಪೋಲಾಗದೆ ಸಮರ್ಪಕ ಬಳಕೆ ಆಗುತ್ತಿದೆ ಎಂದು ಅವರು ವಿವರಿಸುತ್ತಾರೆ.

ಹಿಂದೆ ತಂಬಾಕು ಕೃಷಿಗೆ ₹ 4 ರಿಂದ 5 ಲಕ್ಷ ವೆಚ್ಚವಾಗುತ್ತಿತ್ತು. ಈಗ ಟೊಮೆಟೊ ಕೃಷಿಗೆ ₹ 7.50 ಲಕ್ಷ ವ್ಯಯಿಸಿದ್ದು, ಅದೂ ಈಗಾಗಲೇ ಕೈಸೇರಿದೆ. ಮಾರುಕಟ್ಟೆ ದರ ಸ್ಥಿರವಾಗಿದ್ದರೆ ಉತ್ತಮ ಆದಾಯದ ನಿರೀಕ್ಷೆ ಇದೆ ಎಂದು ಹೇಳುತ್ತಾರೆ.

ಕೇರಳಕ್ಕೆ ಸಾಗಣೆ: ಟೊಮೆಟೊ ಖರೀದಿಗೆ ಕೇರಳದ ಮಾರಾಟಗಾರರು ನೇರವಾಗಿ ಬಂದು ಬರುತ್ತಾರೆ. 20 ಕೆ.ಜಿ. ಕ್ರೇಟ್‌ಗೆ ₹ 1300ರಿಂದ 1500 ಸಿಗಲಿದೆ. 

ಟೊಮೆಟೊ 3 ರಿಂದ 4 ತಿಂಗಳ ಅವಧಿಯ ಬೆಳೆ.  ತಂತ್ರಜ್ಞಾನ ಬಳಸಿದರೆ ಕೂಲಿಯಾಳುಗಳು ಕಡಿಮೆ. ಕಠಾವು ಸಂದರ್ಭ ಎಕರೆಗೆ 10ಜನರು ಬೇಕಾಗಬಹುದು ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.