ADVERTISEMENT

ತವರು ಜಿಲ್ಲೆಗೆ ಸಿಎಂ ಕೊಡುಗೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 5:09 IST
Last Updated 16 ಮಾರ್ಚ್ 2017, 5:09 IST
ತವರು ಜಿಲ್ಲೆಗೆ ಸಿಎಂ ಕೊಡುಗೆ
ತವರು ಜಿಲ್ಲೆಗೆ ಸಿಎಂ ಕೊಡುಗೆ   

ಮೈಸೂರು: ಸ್ವಂತ ಜಿಲ್ಲೆ ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಭರಪೂರ ಕೊಡುಗೆಗಳನ್ನು ಪ್ರಕಟಿಸದೇ ಇದ್ದರೂ ಜಿಲ್ಲೆಯನ್ನು ಕಡೆಗಣಿಸಿಲ್ಲ.

ಕಳೆದೆರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಬಳಿಯಲ್ಲಿ ಚಿತ್ರನಗರಿ ನಿರ್ಮಾಣ ಈ ಬಾರಿ ಬಜೆಟ್‌ನಲ್ಲಿ ಸೇರುವ ಮೂಲಕ ಮರುಜೀವ ಪಡೆದುಕೊಂಡಿರುವುದು ಬಹುದೊಡ್ಡ ಕೊಡುಗೆ ಎನಿಸಿದೆ.

ಇದರ ಜತೆಗೆ, ಮೈಸೂರು ಸುತ್ತಲಿನ 22 ಕಿ.ಮೀ ಉದ್ದದ ರಸ್ತೆಯನ್ನು ₹ 117 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿ ಸುವುದು ನಗರದ ಮೂಲಸೌಕರ್ಯ ಕ್ಷೇತ್ರಕ್ಕೆ ಮಹತ್ವದ ಕಾಣಿಕೆಯಾಗಿದೆ.

ADVERTISEMENT

ಹೊಸ ತಾಲ್ಲೂಕಿನ ಕೊಡುಗೆ: ಸರಗೂರು ತಾಲ್ಲೂಕು ಕೇಂದ್ರವಾಗಿ ಘೋಷಿಸುವಂತೆ  25 ವರ್ಷಗಳ ಹಿಂದೆ ಎದ್ದಿದ್ದ ಒತ್ತಾಯ, ಬಜೆಟ್‌ನಲ್ಲಿ ಈಡೇರಿದೆ. ತಾಲ್ಲೂಕು ಕೇಂದ್ರ ಘೋಷಿಸುವಂತೆ ಈ ಮೊದಲು ನಂಜುಂಡಪ್ಪ ವರದಿ, ಗದ್ದಿಗೌಡರ ವರದಿ, ಎಂ.ಪಿ.ಪ್ರಕಾಶ್ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಎಚ್.ಡಿ. ಕೋಟೆ ತಾಲ್ಲೂಕು ವಿಸ್ತೀರ್ಣದಲ್ಲಿ ದೊಡ್ಡ ದಿರುವುದರಿಂದ ಸರಗೂರು ತಾಲ್ಲೂಕು ರಚನೆ ಅಗತ್ಯವಾಗಿತ್ತು. ಇದಕ್ಕೆ ಪೂರಕ ವಾಗಿ ಹೋರಾಟಗಳೂ ನಡೆದಿದ್ದವು.

ಆರೋಗ್ಯ ಕ್ಷೇತ್ರ: ಆರೋಗ್ಯ ಕ್ಷೇತ್ರದಲ್ಲಿ ಮೈಸೂರಿಗೆ ನೀಡಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಳೆದ ಬಜೆಟ್‌ನಲ್ಲಿಯೇ ಪ್ರಸ್ತಾವವಾಗಿತ್ತು. 250 ಹಾಸಿಗೆಗಳ ಸಾಮರ್ಥ್ಯ ₹ 310 ಕೋಟಿ ವೆಚ್ಚದ ಈ ಬೃಹತ್ ಆಸ್ಪತ್ರೆಗೆ ಕೇಂದ್ರ ಸರ್ಕಾರ ಶೇ 40ರಷ್ಟು ಅನುದಾನ ನೀಡಲಿದೆ. ಮತ್ತೆ ಇದೇ ಯೋಜನೆ ಪ್ರಸ್ತಾವ ಬಜೆಟ್‌ನಲ್ಲಿ ಕೇಳಿಬಂದಿದೆ.

₹ 10 ಕೋಟಿ ವೆಚ್ಚದಲ್ಲಿ ಮೂತ್ರ ಕೋಶಗಳ ರೋಗಗಳಿಗೆ ಸಂಬಂಧಿಸಿ ದಂತೆ ನೆಪ್ರೊ ಯುರಾಲಜಿ ಘಟಕ ನಿರ್ಮಾಣ ಮೂತ್ರಪಿಂಡ ರೋಗಿಗಳಲ್ಲಿ ನಿಟ್ಟುಸಿರು ಬಿಡುವಂತಾಗಿದೆ.

ಔಷಧೀಯ ಸಸ್ಯಗಳ ಗಿಡಮೂಲಿಕೆ ಔಷಧಕೋಶಗಳ ಉಪಯೋಗಕ್ಕಾಗಿ ರೂಪಿಸಿರುವ ಯೋಜನೆಯ ಪ್ರಾಯೋ ಗಿಕ ಜಾರಿಗೆ ಎಚ್.ಡಿ.ಕೋಟೆ ಆಯ್ಕೆಯಾಗಿದೆ.

ನೀರಾವರಿ: ನಂಜನಗೂಡು ತಾಲ್ಲೂಕಿನ ಹುರ ಸೇರಿದಂತೆ 25 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪ್ರಸ್ತಾವ ಆ ಭಾಗದ ರೈತರಲ್ಲಿ ಸಂತಸ ತಂದಿದೆ. ಇದರಿಂದ ಅಂತರ್ಜಲ ಏರಿಕೆಯಾಗಿ, ಕೃಷಿಗೆ ಸಹಾಯವಾಗುವ ನಿರೀಕ್ಷೆ ಇದೆ.

ಕಾವೇರಿ ಕೊಳ್ಳದ ನೀರಾವರಿ ನಾಲೆಗಳ ಅಭಿವೃದ್ಧಿ ₹ 509.55 ಕೋಟಿ ಯನ್ನು ಮೀಸಲಿಡಲಾಗಿದ್ದು, ಇದರಲ್ಲಿ ಹಾರೋಹಳ್ಳಿ ಮೇಲ್ಮಟ್ಟದ ನಾಲೆಯ ಆಧುನೀಕರಣವೂ ಸೇರಿದೆ. ಮೋಡ ಬಿತ್ತನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾ ಗಿದ್ದು, ಇದಕ್ಕಾಗಿ ₹ 30 ಕೋಟಿಯನ್ನು ತೆಗೆದಿರಿಸಲಾಗಿದೆ.  ಇದರಿಂದ ಸತತ ಬರಗಾಲದಿಂದ ತತ್ತರಿಸಿ ಜಲಾಶಯಗಳು ಬರಿದಾಗು ತ್ತಿರುವ ಸ್ಥಿತಿಗೆ ಪೂರ್ಣ ವಿರಾಮ ಬೀಳಬಹುದು ಎಂಬ ನಿರೀಕ್ಷೆ ಮೂಡಿಸಿದೆ.

ಅರಣ್ಯ: ಅರಣ್ಯ ಪ್ರದೇಶದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಸೌರವಿದ್ಯುತ್‌ ಪಂಪ್‌ನಿಂದ 100 ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವ ಮಾಡಲಾಗಿದೆ. ಅರಣ್ಯ ರಕ್ಷಕ, ಅರಣ್ಯ ವೀಕ್ಷಕ, ಫಾರೆಸ್ಟರ್‌ಗಳ ನೇಮಕಾತಿಗೆ ವಿಶೇಷ ನಿಯಮ ರೂಪಿಸಿರುವುದರಿಂದ ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗ ಬಹುದು ಎಂಬ ನಿರೀಕ್ಷೆ ಮೂಡಿಸಿದೆ.

ಕೈಗಾರಿಕೆ: ಕಳೆದ ಕೆಲವು ಬಜೆಟ್‌ಗಳಲ್ಲಿ ಪ್ರಸ್ತಾವವಾಗುತ್ತಲೇ ಇರುವ ರೇಷ್ಮೆ ಮೆಗಾ ಕ್ಲಸ್ಟರ್‌ ಸ್ಥಾಪನೆ ಈ ಬಾರಿಯೂ ಪ್ರಸ್ತಾಪವಾಗಿದೆ. ಇದರ ಜತೆಗೆ, ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದಲ್ಲಿ ಮತ್ತೊಂದು ಸಂಘಟಿತ ರೇಷ್ಮೆ ನೇಯ್ಗೆ ಕಾರ್ಖಾನೆ ಯೋಜನೆ ಪ್ರಸ್ತಾಪಿಸಲಾಗಿದೆ. ಇದಕ್ಕೆಂದೇ ₹ 5 ಕೋಟಿಯನ್ನು ಮೀಸಲಿಡಲಾಗಿದೆ.

**

ಸ್ವಾಗತಾರ್ಹ ಬಜೆಟ್...

ಮೈಸೂರು: ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಕೈಗಾರಿಕಾ ಇಲಾಖೆಗೆ ₹ 2,250 ಕೋಟಿ ಅನುದಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ, ಮಹಿಳಾ ಉದ್ಯಮಿಗಳಿಗೆ ಶೇ 4ರ ಬಡ್ಡಿದರದಲ್ಲಿ ₹ 50 ಲಕ್ಷದಿಂದ ₹ 2 ಕೋಟಿವರೆಗಿನ ಸಾಲ ಯೋಜನೆ, ಔಷಧೀಯ ಹಾಗೂ ವೈದ್ಯಕೀಯ ಉಪಕರಣ ಉದ್ಯಮ ವಲಯದ ಅಭಿವೃದ್ಧಿಗೆ ವಿಷನ್‌ ಗ್ರೂಪ್ ರಚನೆ ಸೇರಿದಂತೆ ಹಲವು ಸ್ವಾಗತಾರ್ಹ ಅಂಶಗಳಿವೆ.
ಇದರ ಜತೆಗೆ, ಕೆಐಎಡಿಬಿ, ಕೆಎಸ್‌ಎಫ್‌ಸಿ ಮತ್ತು ಕೆಎಸ್‌ಎಸ್‌ಐಡಿಸಿ ಒದಗಿಸುವ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರುವುದು ಸೇರಿದಂತೆ ಇನ್ನು ಕೆಲವು ಬೇಡಿಕೆಗಳು ಈಡೇರಿಲ್ಲ ಎಂಬ ನಿರಾಸೆಯೂ ಇದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್‌ ಜೈನ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ದೃಷ್ಟಿ ಇಲ್ಲ
ಬಜೆಟ್ ಯಾವುದೇ ಅಭಿವೃದ್ಧಿ ದೃಷ್ಟಿ ಹೊಂದಿಲ್ಲ. ಇದೊಂದು ನಗರಪಾಲಿಕೆಯ ಬಜೆಟ್‌ನಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಟೀಕಿಸಿದ್ದಾರೆ.
ಬರದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಬಹಳಷ್ಟು ನಿರೀಕ್ಷೆಗಳಿತ್ತು. ಬಜೆಟ್‌ನಿಂದ ಇಡೀ ರೈತ ಸಮುದಾಯವೇ ನಿರಾಸೆಗೊಂಡಿದೆ. ಸಾಲಮನ್ನಾ ಮಾಡದಿರುವುದು ಬೇಸರ ತರಿಸಿದೆ. ಕೃಷಿ ವೇತನ ಆಯೋಗ ರಚಿಸದೇ ಸರ್ಕಾರಿ ನೌಕರರ ವೇತನ ಆಯೋಗ ರಚಿಸಿರುವುದು ಸರಿಯಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮತೋಲಿತ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಒಂದು ರೀತಿಯಲ್ಲಿ ಸಮತೋಲಿತವಾಗಿದೆ ಎಂದು ಮೈಸೂರು ವಾಣಿಜ್ಯ
ಮತ್ತು ಕೈಗಾರಿಕಾ ಸಂಸ್ಥೆಯ
ಅಧ್ಯಕ್ಷ ಎ.ಎಸ್.ಸತೀಶ್
ತಿಳಿಸಿದ್ದಾರೆ.
ಸಣ್ಣಕೈಗಾರಿಕೆಗಳಿಗೆ, ಮಹಿಳಾ ಉದ್ಯಮಿಗಳಿಗೆ ಬಜೆಟ್‌ನಲ್ಲಿ ನೆರವು ಲಭಿಸಿದೆ. ನಗರಕ್ಕೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.