ADVERTISEMENT

ತಿಂಗಳಾದರೂ ಬಯಲಾಗದ ಬೆಂಕಿಯ ರಹಸ್ಯ

ಶಾದನಹಳ್ಳಿ ಬಳಿ ಕಾಣಿಸಿಕೊಂಡ ಬೆಂಕಿಗೆ ಬಾಲಕ ಬಲಿಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಮೇ 2017, 8:53 IST
Last Updated 11 ಮೇ 2017, 8:53 IST
ತಿಂಗಳಾದರೂ ಬಯಲಾಗದ ಬೆಂಕಿಯ ರಹಸ್ಯ
ತಿಂಗಳಾದರೂ ಬಯಲಾಗದ ಬೆಂಕಿಯ ರಹಸ್ಯ   
ಮೈಸೂರು: ತಾಲ್ಲೂಕಿನ ಶಾದನಹಳ್ಳಿ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಬಾಲಕ ಹರ್ಷಿಲ್‌ ಬಲಿಯಾಗಿ ತಿಂಗಳು ಸಮೀಪಿಸುತ್ತಿದೆ. ಆದರೂ, ಬೆಂಕಿಗೆ ಕಾರಣ ಏನು ಎಂಬುದು ಈವರೆಗೂ ಬಹಿರಂಗವಾಗಿಲ್ಲ.
 
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೇಮಿಸಿದ ಬಿ.ಎಸ್‌.ಜೈಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ಮಧ್ಯಂತರ ವರದಿ ನೀಡಿದೆ. ಕೈಗಾರಿಕಾ ಸುರಕ್ಷತೆ ಮತ್ತು ಬಾಯ್ಲರ್ ಇಲಾಖೆ ಬೆಂಕಿಗೆ ತಮ್ಮ ಇಲಾಖೆ ಹೊಣೆಯಲ್ಲ ಎಂಬರ್ಥದ ವರದಿಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತ ರಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ‘ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೈತೊಳೆದುಕೊಂಡಿದೆ.
 
‘ಹರ್ಷಿಲ್‌ ಮರಣೋತ್ತರ ಪರೀಕ್ಷೆಯ ವಿವರ ಹಾಗೂ ತನಿಖೆಯ ಸಂದರ್ಭದಲ್ಲಿ ಪೊಲೀಸರು ದಾಖಲಿಸಿಕೊಂಡ ಹೇಳಿಕೆ ಆಧರಿಸಿ ಅಂತಿಮ ವರದಿ ನೀಡಲಾಗುವುದು’ ಎಂದು ಜೈಪ್ರಕಾಶ್‌ ನೇತೃತ್ವದ ಸಮಿತಿ ಹೇಳಿರುವುದು ಗ್ರಾಮಸ್ಥರಲ್ಲಿ ಸಂಶಯ ಮೂಡಿಸಿದೆ.
 
‘ಬಾಲಕ ಬಲಿಯಾದ ಸ್ಥಳದ ಮರಳು, ಮಣ್ಣು ಮತ್ತು ಬೂದಿಯ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದ ಸಮಿತಿಗೆ ಬೆಂಕಿಯ ಕಾರಣ ಪತ್ತೆಹಚ್ಚಲು ತಿಂಗಳುಗಟ್ಟಲೆ ಕಾಲಾವಕಾಶ ಬೇಕೆ? ಪೊಲೀಸರ ತನಿಖೆಗೂ ಸಮಿತಿಯ ವರದಿಗೂ ಏನು ಸಂಬಂಧ’ ಎಂದು ಶಾದನಹಳ್ಳಿ ಹಾಗೂ ಬೆಲವತ್ತ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
 
ತದ್ವಿರುದ್ಧ ವರದಿ: ಬೆಂಕಿಗೆ ಸಂಬಂಧಿಸಿದಂತೆ ಕೈಗಾರಿಕಾ ಸುರಕ್ಷತೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಡಿ.ಸಿ.ಜಗದೀಶ್ ಮತ್ತು ಜೈಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ನೀಡಿದ ವರದಿಗಳು ತದ್ವಿರುದ್ಧವಾಗಿವೆ.
 
‘ಸ್ಥಳದಲ್ಲಿ ಬಾಯ್ಲರ್ ಬೂದಿ ಹಾಗೂ ಮರಳು ಪತ್ತೆಯಾಗಿದೆ. ಈ ಬೂದಿ ರಾಸಾಯನಿಕ ತ್ಯಾಜ್ಯದಿಂದ ಸೃಷ್ಟಿಯಾಗಿದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ. ಇಲ್ಲಿ ಯಾವುದೇ ರಾಸಾಯನಿಕ ವಸ್ತುವಿನ ಘಾಟು ಇಲ್ಲ.
 
ವರುಣಾ ನಾಲೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಳೆದಿರುವ ಪೊದೆಗಳಿಗೆ ಬಿದ್ದ ಬೆಂಕಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಇದು ಬಾಯ್ಲರ್ ಬೂದಿಗೆ ವಿಸ್ತರಿಸಿರುವ ಸಾಧ್ಯತೆ ಇದೆ’ ಎಂದು ಜೈಪ್ರಕಾಶ್ ನೇತೃತ್ವದ ಸಮಿತಿ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
 
‘ರಾಸಾಯನಿಕ ತ್ಯಾಜ್ಯಗಳ ಅಸುರಕ್ಷಿತ ವಿಲೇವಾರಿಯೇ ಬೆಂಕಿಗೆ ಕಾರಣ. ಬಹಳ ಹಿಂದೆಯೇ ತ್ಯಾಜ್ಯ ಸುರಿದು, ಇದರ ಸುತ್ತ ಕಟ್ಟಡ ತ್ಯಾಜ್ಯಗಳನ್ನು ಹಾಕಲಾಗಿದೆ. ವರ್ಷಾನುಗಟ್ಟಲೆ ರಾಸಾಯನಿಕ ಕ್ರಿಯೆ ನಡೆದು ಬೆಂಕಿ ಉದ್ಭವವಾಗಿರುವ ಸಾಧ್ಯತೆ ಇದೆ.
 
ರಾಸಾಯನಿಕ ತ್ಯಾಜ್ಯ ಇರುವ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿಗೂ ಹಾಗೂ ನಂತರ ಇದರ ಸುತ್ತ ಕಾಣಿಸಿಕೊಂಡಿರುವ ಬೆಂಕಿಗೂ ವ್ಯತ್ಯಾಸಗಳಿವೆ’ ಎಂದು ಬಾಯ್ಲರ್ ಇಲಾಖೆಯ ಡಿ.ಸಿ.ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.
 
ಕೈಗಾರಿಕೆಗಳೊಂದಿಗೆ ಶಾಮೀಲು: ‘ಜಿಲ್ಲಾಡಳಿತ ಮತ್ತು ತಜ್ಞರ ಸಮಿತಿ ಕೈಗಾರಿಕೆಗಳೊಂದಿಗೆ ಶಾಮೀಲಾಗಿದ್ದು, ಸತ್ಯವನ್ನು ಮರೆಮಾಚಲಾಗುತ್ತಿದೆ’ ಎಂದು ಬೆಲವತ್ತ ರಾಮಚಂದ್ರ ಆರೋಪಿಸಿದ್ದಾರೆ.
 
‘ಜಮೀನು ಮಾಲೀಕರು ಕೈಗಾರಿಕೆಗಳಿಂದ ಹಣ ಪಡೆದು ಕಸ ಸುರಿಯಲು ಅವಕಾಶ ನೀಡಿದ್ದಾರೆ. ಸುತ್ತಲಿನ ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯವನ್ನು ಇಲ್ಲಿ ಸುರಿದಿದ್ದನ್ನು ನಾವೇ ಕಂಡಿದ್ದೇವೆ. ಅಂತಹ ಕೈಗಾರಿಕೆಗಳ ಹೆಸರನ್ನು ಸಮಿತಿಗೆ ನೀಡಿದರೂ ಮಧ್ಯಂತರ ವರದಿಯಲ್ಲಿ ನಮೂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
****
72 ಡಿಗ್ರಿ ತಾಪಮಾನ
ಮೈಸೂರು:
ಹರ್ಷಿಲ್‌ ಬಲಿಯಾದ ಸ್ಥಳದ ತಾಪಮಾನವನ್ನು ಕೆಎಸ್‌ಪಿಸಿಬಿ ಅಧಿಕಾರಿಗಳು ನಿತ್ಯವೂ ಪರಿಶೀಲಿಸುತ್ತಿದ್ದಾರೆ. ಈ ಸ್ಥಳದ ಮೂರು ಕಡೆ 72, 62 ಹಾಗೂ 54 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡುಬಂದಿದೆ.

‘ಈ ಜಮೀನಿನ ಮೇಲೆ ಪೊಲೀಸರು ಸಿಬ್ಬಂದಿ ನಿಗಾ ವಹಿಸಿದ್ದಾರೆ. ನಿತ್ಯವೂ ಸ್ಥಳಕ್ಕೆ ಭೇಟಿ ನೀಡಿ ತಾಪಮಾನ ದಾಖಲಿಸುತ್ತಿದ್ದೇವೆ. ದಿನಕಳೆದಂತೆ ತಾಪಮಾನ ಕಡಿಮೆಯಾಗುತ್ತಿದೆ’ ಎಂದು ಪರಿಸರ ಅಧಿಕಾರಿ ರಘುರಾಮ್‌ ತಿಳಿಸಿದ್ದಾರೆ.
****
ವಾರದಲ್ಲಿ ವರದಿ
ಮೈಸೂರು:
10 ತಜ್ಞರ ಸಮಿತಿಯ ಅಂತಿಮ ವರದಿ ವಾರದಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಪಿಸಿಬಿ ಮೂಲಗಳು ಮಾಹಿತಿ ನೀಡಿವೆ.
‘ಸಮಿತಿಯ ಎಲ್ಲ ಸದಸ್ಯರ ಅಭಿಪ್ರಾಯ ಒಳಗೊಂಡ ಅಂತಿಮ ವರದಿ ಸಿದ್ಧವಾಗಿದೆ. ಮೇ 8ರಂದು ನಡೆದ ಮಂಡಳಿಯ ಸಭೆಯಲ್ಲಿ ಇದು ಚರ್ಚೆಗೆ ಬಂತು. ಕೆಲ ವಿಚಾರಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಹೀಗಾಗಿ, ಅವುಗಳನ್ನು ಸರಿಪಡಿಸಿ ಸಲ್ಲಿಕೆ ಮಾಡುವಂತೆ ಅಧ್ಯಕ್ಷರು ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
****
ಹರ್ಷಿಲ್‌ ಮೃತದೇಹದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯ ಬಳಿಕ ಸಾವಿನ ಕಾರಣ ಪತ್ತೆಯಾಗಲಿದೆ
ಡಾ.ಎಚ್‌.ಟಿ.ಶೇಖರ್, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.