ADVERTISEMENT

ದುರ್ಗಾಂಬಾ ಎಫ್‌ಸಿ ಶುಭಾರಂಭ

ಪುಟ್‌ಬಾಲ್‌: ‘ಎ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:55 IST
Last Updated 24 ಮಾರ್ಚ್ 2018, 12:55 IST
ದುರ್ಗಾಂಬಾ ಎಫ್‌ಸಿ ಮತ್ತು ಚಾಣಕ್ಯ ಕೂಟ ಎಫ್‌ಸಿ ತಂಡದ ಆಟಗಾರರು ಚೆಂಡಿಗಾಗಿ ಪೈಪೋಟಿ ನಡೆಸಿದರು
ದುರ್ಗಾಂಬಾ ಎಫ್‌ಸಿ ಮತ್ತು ಚಾಣಕ್ಯ ಕೂಟ ಎಫ್‌ಸಿ ತಂಡದ ಆಟಗಾರರು ಚೆಂಡಿಗಾಗಿ ಪೈಪೋಟಿ ನಡೆಸಿದರು   

ಮೈಸೂರು: ಹೊಂದಾಣಿಕೆಯ ಆಟವಾಡಿದ ದುರ್ಗಾಂಬಾ ಎಫ್‌ಸಿ ತಂಡದವರು ಮೈಸೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಆಶ್ರಯದ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.

ವಿ.ವಿ. ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದುರ್ಗಾಂಬಾ ಎಫ್‌ಸಿ 2–0 ಗೋಲುಗಳಿಂದ ಚಾಣಕ್ಯ ಕೂಟ ಎಫ್‌ಸಿ ತಂಡವನ್ನು ಮಣಿಸಿತು.

ಮೊದಲ ಅರ್ಧ ಗಂಟೆಯಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನೀಡಿದವು. 29ನೇ ನಿಮಿಷದಲ್ಲಿ ಗಾಡ್ವಿನ್‌ ಅವರು ಚೆಂಡನ್ನು ಗುರಿ ಸೇರಿಸಿ ದುರ್ಗಾಂಬಾ ಎಫ್‌ಸಿಗೆ ಮುನ್ನಡೆ ತಂದಿತ್ತರು. ಆ ಬಳಿಕ ವಿರಾಮದವರೆಗೆ ಹೆಚ್ಚಿನ ಗೋಲುಗಳು ಬರಲಿಲ್ಲ.

ADVERTISEMENT

ಎರಡನೇ ಅವಧಿಯಲ್ಲೂ ದುರ್ಗಾಂಬಾ ತಂಡದ ಆಟಗಾರರು ಎದುರಾಳಿ ಗೋಲುಪೆಟ್ಟಿಗೆ ಗುರಿಯಾಗಿಸಿ ಮೇಲಿಂದ ಮೇಲೆ ದಾಳಿ ನಡೆಸಿದರು. 51ನೇ ನಿಮಿಷದಲ್ಲಿ ಸಲ್ಮಾನ್‌ ಅವರು ತಂಡದ ಎರಡನೇ ಗೋಲು ಗಳಿಸಿ ಎದುರಾಳಿಗಳ ಮೇಲೆ ಇನ್ನಷ್ಟು ಒತ್ತಡ ಹೇರಿದರು.

ಚಾಣಕ್ಯ ಕೂಟ ಎಫ್‌ಸಿ ತಂಡದವರು ಕೊನೆಯಲ್ಲಿ ಮರುಹೋರಾಟ ನಡೆಸಲು ಪ್ರಯತ್ನಿಸಿದರು. ಆದರೆ, ರಕ್ಷಣಾ ವಿಭಾಗ ಬಲಪಡಿಸಿಕೊಂಡ ದುರ್ಗಾಂಬಾ ಎಫ್‌ಸಿ ಪೂರ್ಣ ಪಾಯಿಂಟ್‌ ತನ್ನದಾಗಿಸಿಕೊಂಡಿತು.

ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪೋಪ್‌ ಎಫ್‌ಸಿ ಮತ್ತು ಜಾಲಿ ಇಲೆವೆನ್‌ ಎಫ್‌ಸಿ ತಂಡಗಳು ಪೈಪೋಟಿ ನಡೆಸಲಿವೆ.

**********

ಕ್ರೀಡಾಪಟುಗಳಿಗೆ 27ರಂದು ಸನ್ಮಾನ

ಮೈಸೂರು: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ (2017–18) ಪದಕ ಗೆದ್ದ ಮೈಸೂರು ವಿ.ವಿ. ಕ್ರೀಡಾಪಟುಗಳಿಗೆ ಸನ್ಮಾನ ಮತ್ತು ನಗದು ಬಹುಮಾನ ವಿತರಣೆ ಸಮಾರಂಭ ಮಾರ್ಚ್‌ 27ರಂದು ಸಂಜೆ 4.30ಕ್ಕೆ ನಡೆಯಲಿದೆ.

ಅಖಿಲ ಭಾರತ ಅಂತರ ವಿ.ವಿ ಕೊಕ್ಕೊ ಟೂರ್ನಿಯಲ್ಲಿ ಚಿನ್ನ ಗೆದ್ದ ಪುರುಷರ ತಂಡ, ಕಂಚು ಜಯಿಸಿದ ಮಹಿಳೆಯರ ತಂಡ ಮತ್ತು ಯೋಗ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ತಂಡದ ಸದಸ್ಯರಿಗೆ ತಲಾ ₹ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಪ್ರಭಾರಿ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ವಿ.ವಿ. ಅಂತರಕಾಲೇಜು ಕ್ರೀಡಾಕೂಟದಲ್ಲಿ ಹೊಸ ದಾಖಲೆ ಸ್ಥಾಪಿಸಿದ ಅಥ್ಲೀಟ್‌ಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಗುವುದು.

********

30ರಂದು ಜಿಲ್ಲಾಮಟ್ಟದ ಚೆಸ್‌ ಟೂರ್ನಿ

ಮೈಸೂರು: ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಆಶ್ರಯದಲ್ಲಿ ಮಾರ್ಚ್‌ 30ರಂದು ವಿ.ವಿ. ಲಯನ್ಸ್‌ ಹಾಲ್‌ನಲ್ಲಿ ಜಿಲ್ಲಾಮಟ್ಟದ ಚೆಸ್‌ ಟೂರ್ನಿ ಆಯೋಜಿಸಲಾಗಿದೆ.

7 ವರ್ಷ, 9 ವರ್ಷ, 11 ವರ್ಷ ಮತ್ತು 15 ವರ್ಷ ವಯಸ್ಸಿನೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಆಸಕ್ತರು www.mysoredca.com ವೆಬ್‌ಸೈಟ್‌ನಲ್ಲಿ ಅಥವಾ ಮೊ: 9448273082 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

********

5ರಿಂದ ಚೆಸ್‌ ಶಿಬಿರ

ಮೈಸೂರು: ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ವತಿಯಿಂದ ಏಪ್ರಿಲ್‌ 5ರಿಂದ ಮೇ 15ರ ವರೆಗೆ ವಿ.ವಿ. ಲಯನ್ಸ್‌ ಹಾಲ್‌ನಲ್ಲಿ ಚೆಸ್‌ ಶಿಬಿರ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಶಿಬಿರ ನಡೆಯಲಿದೆ.

ಆಸಕ್ತರು www.mysoredca.com ವೆಬ್‌ಸೈಟ್‌ನಲ್ಲಿ ಅಥವಾ ಮೊ: 9448273082 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

*****

10ರಿಂದ ಕ್ರಿಕೆಟ್‌ ಶಿಬಿರ

ಮೈಸೂರು: ಟೆರೆಷಿಯನ್‌ ಸ್ಪೋರ್ಟ್ಸ್‌ ಅಕಾಡೆಮಿ ವತಿಯಿಂದ ಟೆರೆಷಿಯನ್‌ ಕಾಲೇಜು ಮೈದಾನದಲ್ಲಿ ಏಪ್ರಿಲ್‌ 10ರಿಂದ ಮೇ 15ರ ವರೆಗೆ ಬಾಲಕ ಮತ್ತು ಬಾಲಕಿಯರಿಗೆ ಕ್ರಿಕೆಟ್‌ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಏ‌ಪ್ರಿಲ್‌ 1ರಿಂದ ಕಾಲೇಜಿನಿಂದ ಅರ್ಜಿ ಪಡೆದು ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಮೊ: 9900104387 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.