ADVERTISEMENT

ನಿತ್ಯ 15 ನಿಮಿಷ ವಿದ್ಯುತ್‌ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:31 IST
Last Updated 13 ಮೇ 2017, 10:31 IST
ನಿತ್ಯ 15 ನಿಮಿಷ ವಿದ್ಯುತ್‌ ದೀಪಾಲಂಕಾರ
ನಿತ್ಯ 15 ನಿಮಿಷ ವಿದ್ಯುತ್‌ ದೀಪಾಲಂಕಾರ   

ಮೈಸೂರು: ಅರಮನೆಗೆ ನಿತ್ಯ 15 ನಿಮಿಷ ಹಾಗೂ ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ ಒಂದು ಗಂಟೆ ಕಾಲ ವಿದ್ಯುತ್ ದೀಪಾಲಂಕಾರ ಮಾಡಲು ಮುಖ್ಯ ಕಾರ್ಯದರ್ಶಿ ಸುಭಾಷಚಂದ್ರ ಕುಂಟಿಯಾ ನೇತೃತ್ವದಲ್ಲಿ ಇಲ್ಲಿ ಶುಕ್ರವಾರ ನಡೆದ ಮೈಸೂರು ಅರಮನೆ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

ಈಗ ನಿತ್ಯ 5 ನಿಮಿಷ ಹಾಗೂ ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಂದು 30 ನಿಮಿಷಗಳ ಕಾಲ ವಿದ್ಯುತ್ ದೀಪಾಲಂಕಾರ ಇತ್ತು. ಭಾರತೀಯರು ಹಾಗೂ ವಿದೇಶಿಯರಿಗೆ ಏಕರೂಪದ ಪ್ರವೇಶ ದರ ನಿಗದಿಪಡಿಸಲು ಮುಖ್ಯಕಾರ್ಯದರ್ಶಿ ಸೂಚಿಸಿದರು. 

ಇತರೆ ಭಾಷೆಗಳಿಗೆ ಧ್ವನಿ–ಬೆಳಕು:  ಕೇವಲ ಕನ್ನಡದಲ್ಲಿ ಮಾತ್ರ ಇದ್ದ ‘ಧ್ವನಿ ಮತ್ತು ಬೆಳಕು’ ಕಾರ್ಯಕ್ರಮವನ್ನು ಹಿಂದಿ ಮತ್ತು ಇಂಗ್ಲಿಷಿನಲ್ಲಿ ರೂಪಿಸಲು ತೀರ್ಮಾನಿಸಲಾಯಿತು. ಆದರೆ, ಮೊದಲು ಕನ್ನಡದಲ್ಲಿಯೇ ಕಾರ್ಯಕ್ರಮ ಬಿತ್ತರವಾಗಬೇಕು. ನಂತರ, ಇದರ ಅನುವಾದ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಮೂಡಿಬರಬೇಕು. ಎರಡು ತಿಂಗಳ ಒಳಗೆ ಜಾರಿಯಾಗಲಿ ಎಂದು ಸೂಚಿಸಿದರು.

ADVERTISEMENT

ಯುಗಾದಿ ಉತ್ಸವ, ಜೂನ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ, ಡಿಸೆಂಬರ್‌ನಲ್ಲಿ ಫಲಪುಷ್ಪ ಪ್ರದರ್ಶನದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಯಿತು.

ಮತ್ತೆರಡು ಟಿಕೆಟ್ ದ್ವಾರಗಳಿಗೆ ಅಸ್ತು: ಸದ್ಯ, ಮುಖ್ಯದ್ವಾರದಲ್ಲಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಇರುವುದರಿಂದ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದ ಬಲರಾಮ ಹಾಗೂ ವಸ್ತುಪ್ರದರ್ಶನ ಮೈದಾನದ ಕಡೆ ಇರುವ ಜಯಮಾರ್ತಾಂಡ ದ್ವಾರದಲ್ಲೂ ಟಿಕೆಟ್ ಕೌಂಟರುಗಳನ್ನು ಆರಂಭಿಸಲು ನಿರ್ಧರಿಸಲಾಯಿತು.

ಹೈಟೆಕ್ ಶೌಚಾಲಯ ಕಟ್ಟಲು ನಿರ್ಧಾರ: ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಹೈಟೆಕ್ ಗ್ರೀನ್ ಟಾಯ್ಲೆಟ್‌ಗಳನ್ನು ಸಿಎಸ್‌ಆರ್‌ (ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಯೋಜನೆಯಡಿ ನಿರ್ಮಿಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷಚಂದ್ರ ಕುಂಟಿಆ ಸೂಚಿಸಿದರು.

ಆದರೆ, ಅರಮನೆಯ ಪಾರಂಪರಿಕ ಕಟ್ಟಡ ವಿನ್ಯಾಸಕ್ಕೆ ಧಕ್ಕೆಯಾಗದ ರೀತಿ ನೋಡಿಕೊಳ್ಳಬೇಕು. ಎಲ್ಲದಕ್ಕೂ ಮುಂಚಿತವಾಗಿ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಅವರು ಹೇಳಿದರು.

ಅಗ್ನಿಶಾಮಕ ನಿಯಂತ್ರಣ ಘಟಕ ಸ್ಥಾಪನೆ
ಇದುವರೆಗೂ ಅರಮನೆಯಲ್ಲಿ ಅಗ್ನಿಶಾಮಕ ನಿಯಂತ್ರಣ ಘಟಕ ಸ್ಥಾಪನೆಯಾಗದಿರುವುದು ಏಕೆ ಎಂದು ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರನ್ನು ಸುಭಾಷಚಂದ್ರ ಕುಂಟಿಆ ಪ್ರಶ್ನಿಸಿದರು. ಕೂಡಲೇ, ಅರಮನೆ ಆವರಣದಲ್ಲಿ ಅರಮನೆಗೆಂದೇ ಪ್ರತ್ಯೇಕ ಅಗ್ನಿಶಾಮಕ ನಿಯಂತ್ರಣ ಘಟಕ ಸ್ಥಾಪಿಸಿ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.