ADVERTISEMENT

ನೀರಿನ ವಿಚಾರದಲ್ಲಿ ರಾಜಕಾರಣ ಬೇಡ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 10:46 IST
Last Updated 26 ಸೆಪ್ಟೆಂಬರ್ 2016, 10:46 IST

ಕೆ.ಆರ್.ನಗರ: ಕೇಂದ್ರ ಮತ್ತು ತಮಿಳುನಾಡು ಸರ್ಕಾರ ಕೇವಲ ಮತ ಬ್ಯಾಂಕಿಗಾಗಿ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಕೃಷ್ಣ ಮಂದಿರದಲ್ಲಿ ಶನಿವಾರ ನಡೆದ ‘ರೈತನ ಬದುಕು ಮತ್ತು ನೀರು ರಾಜಕೀಯ ಆತ್ಮಾವಲೋಕನ’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಎರಡೂ ಸರ್ಕಾರಗಳು ಮತ ಬ್ಯಾಂಕ್ ಗಾಗಿ ರಾಜಕೀಯ ಮಾಡುತ್ತಿರುವುದರಿಂದ ಕರ್ನಾಟಕ ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕಾವೇರಿ ಕೊಳ್ಳದ ನೀರಿನ ಪರಿಸ್ಥಿತಿಯನ್ನು ಅವಲೋಕಿಸದೆ ಸುಪ್ರೀಂ ಕೋರ್ಟ್ ನಿಂದ ಆದೇಶ ಬಂದು ರಾಜ್ಯಕ್ಕೆ ನುಂಗಲಾರದ ತುತ್ತಾಗಿದೆ.

ಇಂತಹ ಪರಿಸ್ಥಿತಿಯನ್ನು ಎದುರಿಸಲು ವಿಧಾನಮಂಡಲ ಅಧಿವೇಶನ ಒಮ್ಮತದ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.
ರಾಜ್ಯದಲ್ಲಿ ರೈತ ಸಂಘಟನೆಗಳು ಸೇರಿದಂತೆ ಇತರ ಕನ್ನಡಪರ ಸಂಘಟನೆಗಳು ಒಡೆದು ಹೋಳಾಗಿವೆ. ರಾಜ್ಯದ ನೆಲ, ಜಲ, ಭಾಷೆಯ ಬಗ್ಗೆ ಹೋರಾಟ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ರಾಜಕೀಯ ಬೆರೆಸದೇ ಒಟ್ಟುಗೂಡಿ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಎಲ್ಲಾ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿರುವುದು ರೈತರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.

ಬೆಂಗಳೂರು ಸೇರಿದಂತೆ ಇತರೆ ಪಟ್ಟಣಗಳಿಗೆ ಕಾವೇರಿ ಕೊಳ್ಳದಿಂದ ಕುಡಿಯುವ ನೀರು ಒದಗಿಸಬೇಕು ಎಂದರೆ ಕನಿಷ್ಠ 50 ಟಿಎಂಸಿ ಆದರೂ ನೀರು ಬೇಕು. ಆದರೆ ಇಂದು ಕಾವೇರಿ ಜಲಾಶಯಗಳಲ್ಲಿ ಕೇವಲ 27 ಟಿಎಂಸಿ ನೀರು ಮಾತ್ರ ಉಳಿಸಿಕೊಳ್ಳಲಾಗಿದೆ. ಹೀಗೆ ಮುಂದುವರೆದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ ಎಂದರು.

ಈ ಎಲ್ಲ ವಿಚಾರಗಳನ್ನು ರಾಜ್ಯ ಸರ್ಕಾರ ನ್ಯಾಯಾಲಯ ಮತ್ತು ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಸಹ ತಮಿಳುನಾಡಿನ ರೈತರ ಮೂರನೇ ಬೆಳೆಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ನೀರಿನ ಲಭ್ಯತೆ ತಿಳಿಯದೇ ಕೇವಲ ತಮಿಳುನಾಡು ಪರ ತೀರ್ಪು ನೀಡುವ ನ್ಯಾಯಮೂರ್ತಿ ಗಳನ್ನು  ಅನುಮಾನದಿಂದ ನೋಡುವ ಸಂದರ್ಭ ಎದುರಾಗಿದೆ ಎಂದರು.

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಎ.ಎಸ್.ರಾಮಪ್ರಸಾದ್, ಸಮಾಜ ಸೇವಕ ಎಸ್.ಪಿ.ತಮ್ಮಯ್ಯ, ರೈತ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಸರಗೂರು ನಟರಾಜು ಮಾತನಾಡಿದರು. ರೈತ ಸಂಘ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನೇತ್ರಾವತಿ, ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ, ಕರವೇ ಅಧ್ಯಕ್ಷ ರುದ್ರೇಶ್, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಕೆ.ಎಲ್.ಸ್ವಾಮಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.