ADVERTISEMENT

ಪರಿಶಿಷ್ಟರ ಕಾಮಗಾರಿಗೆ ಗಡುವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 9:58 IST
Last Updated 19 ಜುಲೈ 2017, 9:58 IST

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಸರ್ಕಾರವು ನಿಗದಿಪಡಿಸಿರುವ ವಿವಿಧ ಯೋಜನೆಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಎಸ್‌ಸಿಪಿ’ ಮತ್ತು ‘ಟಿಎಸ್‌ಪಿ’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳು ಯೋಜನೆ ಯನ್ನು ಪೂರ್ಣಗೊಳಿಸದೆ ಇರುವುದು ಸರಿಯಲ್ಲ. 

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಚುರುಕಾಗಬೇಕು. ಮಂಜೂರಾಗಿರುವ ಕೊಳವೆಬಾವಿಗಳನ್ನು ಮುಗಿಸಬೇಕು. ಕಳೆದ ವರ್ಷದ ಕಾಮಗಾರಿ ಗಳನ್ನು ಇನ್ನೂ ಮುಗಿಸದೆ ಇರುವುದಕ್ಕೆ ಅವರು ಕಾರಣ ಕೇಳಿದರು.

ADVERTISEMENT

ಇದಕ್ಕೆ ಉತ್ತರಿಸಿದ ನಿಗಮದ ಜಿಲ್ಲಾ ಅಧಿಕಾರಿ ಭಾರತಿ, ಕಳೆದ ವರ್ಷ ಮತ್ತು ಈ ವರ್ಷದಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಸಲು ಟೆಂಡರ್ ಕರೆಯಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ ಎಷ್ಟು ಜನ ನೋಂದಾಯಿತ ಎಸ್ಸಿ-ಎಸ್ಟಿ ಗುತ್ತಿಗೆದಾರರು ಇದ್ದಾರೆ ಎಂಬ ಮಾಹಿತಿ ಇಲ್ಲ ಎಂದರು.

ಪ್ರತ್ಯೇಕ ಕ್ರಿಯಾಯೋಜನೆ ರೂಪಿಸಿ: ಲೋಕೋಪಯೋಗಿ, ಜಲಸಂಪನ್ಮೂಲ, ಕಾಡಾ ಇಲಾಖೆಯಿಂದ ಎಸ್‌ಸಿಪಿ-ಟಿಎಸ್‌ ಪಿ ಅನುದಾನಕ್ಕೆ ತಕ್ಕಂತೆ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಬೇಕು. ಸರ್ಕಾರ ದಿಂದ ನಿಗದಿಪಡಿಸುವ ಅನುದಾನದಲ್ಲಿ ಪ್ರತ್ಯೇಕ ಹಣ ಮೀಸಲಿಟ್ಟು ಖರ್ಚು ಮಾಡಬೇಕು. ಹಾಗಾಗಿ, ಸಮರ್ಪಕ ಕ್ರಿಯಾ ಯೋಜನೆ ಇರಲಿ ಎಂದರು.

2017–18ನೇ ಸಾಲಿಗೆ 30 ಇಲಾಖೆ ಗಳಿಂದ ‘ಎಸ್‌ಸಿಪಿ’ ಅಡಿ ₹ 438.14 ಕೋಟಿ ಅನುದಾನ, ‘ಟಿಎಸ್‌ಪಿ’ ಅಡಿ ₹ 161.22 ಕೋಟಿ ಸೇರಿ ಒಟ್ಟು ₹ 599.36 ಕೋಟಿ  ಮೀಸಲಿಡಲಾಗಿದೆ. ಆಯಾ ಇಲಾಖಾ ಅನುದಾನಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿ ಶಾಸಕರ ಅಧ್ಯಕ್ಷತೆಯ ಸಭೆಯಲ್ಲಿ ಅನು ಮೋದನೆ ಪಡೆದುಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಪಾಲನಾ ಮತ್ತು ಸಂಗೋಪನಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದ್ರಪ್ಪ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಪರಶಿವ ಮೂರ್ತಿ, ಐಟಿಡಿಪಿ ಸಮನ್ವಯಾಧಿಕಾರಿ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.