ADVERTISEMENT

ಪಾಲಿಕೆ ಅವಲಂಬಿಸದ ಜಲಸ್ವಾವಲಂಬಿ

ನಿವಾಸದಲ್ಲಿ ಮಳೆ ನೀರು ಸಂಗ್ರಹ

ಜಿ.ಬಿ.ನಾಗರಾಜ್
Published 22 ಮಾರ್ಚ್ 2017, 10:14 IST
Last Updated 22 ಮಾರ್ಚ್ 2017, 10:14 IST
ಮಳೆ ನೀರು ಶುದ್ಧೀಕರಣ ಘಟಕ
ಮಳೆ ನೀರು ಶುದ್ಧೀಕರಣ ಘಟಕ   

ಮೈಸೂರು: ನೀರು ಪೂರೈಕೆಯಲ್ಲಿ ಎರಡು ದಿನ ವ್ಯತ್ಯಯ ಉಂಟಾದರೆ ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ವರ್ಷದಲ್ಲಿ ನಾಲ್ಕು ತಿಂಗಳು ಮಹಾನಗರ ಪಾಲಿಕೆಯ ನೀರನ್ನು ಪಡೆಯುವುದೇ ಇಲ್ಲ. ಮಳೆ ನೀರು ಸಂಗ್ರಹ ಇವರನ್ನು ‘ಜಲ ಸ್ವಾವಲಂಬಿ’ಯನ್ನಾಗಿ ಮಾಡಿದೆ.

ವಿದ್ಯಾರಣ್ಯಪುರಂನ 2ನೇ ಮುಖ್ಯ ರಸ್ತೆಯ ನಿವಾಸಿ ಎಸ್‌.ನಾಗರಾಜು ನೀರಿನ ಸ್ವಾವಲಂಬನೆ ಸಾಧಿಸಿದವರು. ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಯಾಗಿರುವ ಇವರು, ಮೂರು ವರ್ಷ ಗಳಿಂದ ಮಳೆ ನೀರು ಸಂಗ್ರಹಿಸುತ್ತಿದ್ದಾರೆ. ಈ ಮೂಲಕ ಜೀವಜಲ ಸಂರಕ್ಷಣೆಯಲ್ಲಿ ತೊಡಗಿ ಕೊಂಡಿದ್ದಾರೆ.

ನಾಲ್ವರು ಸದಸ್ಯರಿರುವ ನಾಗರಾಜು ಅವರ ಕುಟುಂಬ ನಿತ್ಯ 800ರಿಂದ 1,000 ಲೀಟರ್‌ ನೀರು ಬಳಕೆ ಮಾಡುತ್ತದೆ. ಕುಡಿಯಲು, ಅಡುಗೆ ಮಾಡಲು, ಪಾತ್ರೆ ತೊಳೆಯಲು, ಸ್ನಾನ ಹಾಗೂ ಕೈತೋಟಕ್ಕೆ ಪಾಲಿಕೆ ಸರಬರಾಜು ಮಾಡುವ ನೀರಿನ ಮೇಲೆಯೇ ಈ ಕುಟುಂಬ ಅವಲಂಬನೆಯಾಗಿತ್ತು. ನೀರಿನ ಮಿತವ್ಯಯದ ಬಗೆಗಿನ ಕಾಳಜಿ ಮಳೆನೀರು ಸಂಗ್ರಹಕ್ಕೆ ಇವರನ್ನು ಪ್ರೇರೇಪಿಸಿದೆ.

‘ಸ್ನೇಹಿತರ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದಾಗ ಮಳೆನೀರು ಸಂಗ್ರಹದ ಬಗ್ಗೆ ತಿಳಿಯಿತು. ಹೊಸ ಮನೆ ಗಳಲ್ಲಾದರೆ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಿಸಿಕೊಳ್ಳ ಬಹುದು. ಆದರೆ, ನಮ್ಮದು 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮನೆ.

ಹೀಗಾಗಿ, ನ್ಯಾಷನಲ್‌ ಎಂಜಿನಿಯರಿಂಗ್‌ ಕಾಲೇಜಿನ (ಎನ್‌ಐಇ) ಪ್ರಾಧ್ಯಾಪಕ ಪ್ರೊ.ಎಸ್‌. ಶ್ಯಾಮಸುಂದರ್‌ ಅವರನ್ನು ಸಂಪರ್ಕಿಸಿದೆ. ಮನೆಗೆ ಭೇಟಿ ನೀಡಿದ ಅವರು, ಕಟ್ಟಡಕ್ಕೆ ಯಾವುದೇ ಧಕ್ಕೆ ಆಗದಂತೆ ಮಳೆನೀರು ಸಂಗ್ರಹಕ್ಕೆ ಅಗತ್ಯವಿರುವ ವಿನ್ಯಾಸ ಬದಲಿಸುವು ದಾಗಿ ಭರವಸೆ ನೀಡಿದರು’ ಎಂದು ನಾಗರಾಜು ‘ಪ್ರಜಾವಾಣಿ’ ಜೊತೆ ಅನುಭವ ಹಂಚಿಕೊಂಡರು.

ಮನೆಯ ಮಹಡಿ ಕೂಡ ಮಳೆ ನೀರು ಸಂಗ್ರಹಕ್ಕೆ ಪೂರಕವಾಗಿದೆ. ಕಟ್ಟಡದ ನೀರನ್ನು ಎರಡು ಕಡೆ ಹರಿದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಳವೆಯನ್ನು ಮನೆಯ ಸಂಪ್‌ಗೆ ಹಾಗೂ ಮತ್ತೊಂದು ಕೊಳವೆಯನ್ನು ಸುಮಾರು 13 ಅಡಿಯ ತೆರೆದ ಬಾವಿಗೆ ಸಂಪರ್ಕ ಕಲ್ಪಿಸಲಾಗಿದೆ. ಸಂಪ್‌ಗೆ ಬಿದ್ದ ನೀರನ್ನು ಮನೆಗೆ ಉಪಯೋಗಿಸಲಾ ಗುತ್ತಿದೆ. ತೆರೆದ ಬಾವಿಗೆ ಬಿದ್ದ ನೀರು ಅಂತರ್ಜಲ ವೃದ್ಧಿಗೆ ನೆರವಾಗಿದೆ. ಬರಗಾಲದಲ್ಲೂ ಈ ಬಾವಿ ಬತ್ತಿಲ್ಲ.

ಮಳೆಗಾಲ ಸಮೀಪಿಸುತ್ತಿದ್ದಂತೆ ಮಹಡಿಯನ್ನು ಶುಚಿ ಗೊಳಿಸಲಾಗುತ್ತದೆ. ಎಲೆ, ಮಣ್ಣು ಬೀಳದಂತೆ ನೋಡಿ ಕೊಳ್ಳಲಾಗುತ್ತದೆ. ಮಹಡಿಯಿಂದ ಬರುವ ನೀರನ್ನು ಶುದ್ಧೀ ಕರಿಸುವ ವ್ಯವಸ್ಥೆ ಬಾವಿ ಹಾಗೂ ಸಂಪ್‌ ಬಳಿ ಇವೆ. ಎರಡು ಹಂತದಲ್ಲಿ ನೀರು ಶುದ್ಧಗೊಂಡು ಸಂಗ್ರಹವಾಗುತ್ತದೆ. ಬಾವಿಯ ನೀರನ್ನು ಕೈತೋಟಕ್ಕೆ ಬಳಸಲಾಗುತ್ತಿದೆ.

‘ಮಳೆಗಾಲ ಆರಂಭವಾಗುತ್ತಿದ್ದಂತೆ ಪಾಲಿಕೆಯ ಸಂಪ ರ್ಕದ ಕೊಳವೆಯ ವಾಲ್‌ ಸ್ಥಗಿತಗೊಳಿಸುತ್ತೇವೆ. ಗೃಹ ಬಳ ಕೆಗೆ ಮಳೆ ನೀರನ್ನೇ ಬಳಸುತ್ತೇವೆ. 5 ಸಾವಿರ ಲೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಸಂಪ್‌ ಒಮ್ಮೆ ಭರ್ತಿಯಾದರೆ ಒಂದು ವಾರ ಬಳಸಬಹುದು. ಹೀಗಾಗಿ, ಮಳೆಗಾಲದಲ್ಲಿ ಪಾಲಿಕೆ ನೀರು ಬಳಸುವುದಿಲ್ಲ’ ಎಂದು ಹೇಳುತ್ತಾರೆ ನಾಗರಾಜು.

ಶುಲ್ಕ ರಿಯಾಯಿತಿ ಅಗತ್ಯ
ಸೋಲಾರ್‌ ಅಳವಡಿಸಿ ಕೊಂಡರೆ ವಿದ್ಯುತ್‌ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಆದರೆ, ಮಳೆನೀರು ಸಂಗ್ರಹ ವ್ಯವಸ್ಥೆ ಕಲ್ಪಿಸಿಕೊಂಡರೆ ಇಂತಹ ಯಾವುದೇ ಸೌಲಭ್ಯಗಳಿಲ್ಲ ಎಂದು ನಾಗರಾಜು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ತಿಂಗಳಿಗೆ ಕನಿಷ್ಠ 30 ಸಾವಿರ ಲೀಟರ್‌ ನೀರಿಗೆ ಶುಲ್ಕ ಪಾವತಿಸಲೇಬೇಕು. ವರ್ಷದ 4 ತಿಂಗಳು ಮಳೆನೀರು ಬಳಕೆ ಮಾಡಿದರೂ ಪಾಲಿಕೆಗೆ ನೀರಿನ ಶುಲ್ಕ ಪಾವತಿಸಬೇಕು. ಈ ಶುಲ್ಕದಲ್ಲಿ ರಿಯಾಯಿತಿ ಕಲ್ಪಿಸಿದರೆ ಪ್ರೋತ್ಸಾಹ ಸಿಗುತ್ತದೆ. ಇಲ್ಲವಾದರೆ ಆಸಕ್ತಿ ತೋರುವುದು ಕಡಿಮೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.