ADVERTISEMENT

‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:23 IST
Last Updated 13 ಮೇ 2017, 10:23 IST

ಮೈಸೂರು: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದ್ದು, ಅದರ ರಕ್ಷಣೆ ಅಗತ್ಯ. ವಿದ್ಯಾರ್ಥಿಗಳು ಮತ್ತು ಯುವಕರು ಆ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಬೇಕು ಎಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಶುಕ್ರವಾರ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ದಯಾನಂದ ಎ.ಮಾನೆ ಮತ್ತು ಸಹಾಯಕ ಪ್ರಾಧ್ಯಾಪಕ ಸಿ.ಎಲ್‌.ಸೋಮಶೇಖರ್‌ ಅವರು ಬರೆದಿರುವ ‘ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾಮಾಜಿಕ ಕ್ರಾಂತಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಫುಲೆ ಅವರು ಸಮಾಜದ ಅತ್ಯಂತ ಕೆಳಸ್ತರದಿಂದ ಬಂದು ಸುಧಾರಣೆಗೆ ಪ್ರಯತ್ನಿಸಿದ ವ್ಯಕ್ತಿ. ಮಾನೆ ಮತ್ತು ಸೋಮಶೇಖರ್‌ ಅವರು ಫುಲೆ ಬಗ್ಗೆ ಪುಸ್ತಕ ಬರೆದು ಅವರ ಸಂದೇಶಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ADVERTISEMENT

ಫುಲೆ ಸುಮಾರು 30 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಅಸ್ಪೃಶ್ಯರು, ಹಿಂದುಳಿದವರು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ಕೆಲಸ ಮಾಡಿದ್ದಾರೆ ಎಂದರು.

ದೇಶದಲ್ಲಿ ಶೇ 42ರಷ್ಟು ಯುವಕರು ಇದ್ದಾರೆ. ಯುವ ಪೀಳಿಗೆಯು ಇತಿಹಾಸವನ್ನು ಮರೆತರೆ ಅಪಾಯವಿದೆ. ಬುದ್ಧ, ಅಂಬೇಡ್ಕರ್‌ ಮತ್ತು ಬಾಫುಲೆ ಅವರ ಚಿಂತನೆಗಳ ತಳಹದಿಯಲ್ಲಿ ದೇಶ ನಿರ್ಮಾಣವಾಗಬೇಕಿದೆ. ಆ ಕೆಲಸವನ್ನು ಯುವಕರು ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿ.ವಿ ಕೇವಲ ಶಿಕ್ಷಣ ಕೇಂದ್ರವಲ್ಲ. ಇದು ಸಾಮಾಜಿಕ ಚಳವಳಿಯ ಕೇಂದ್ರವಾಗಿದೆ. ಯಾವುದೇ ಗುಂಪು, ಜಾತಿ, ಧರ್ಮದ ಹಂಗಿಗೆ ಸಿಲುಕದೆ ಫ್ಯಾಸಿಸ್ಟ್‌ ಶಕ್ತಿಗಳ ಕಣ್ಣು ತೆರೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೀತಿ ಶ್ರೀಮಂಧರಕುಮಾರ್‌ ಪುಸ್ತಕದ ಕುರಿತು ಮಾತನಾಡಿದರು. ರಾಜಶೇಖರ ಕೋಟಿ, ವಿ.ವಿ ಸಿಂಡಿಕೇಟ್‌ ಸದಸ್ಯರಾದ ಎಂ.ಎಸ್‌. ಎಸ್‌.ಕುಮಾರ್‌, ಪ್ರೊ.ನಂಜುಂಡಯ್ಯ, ಪ್ರೊ.ಕುಮಾರ್, ಲಯನ್‌ ರಮೇಶ ಮತ್ತು ಮೊಹಮ್ಮದ್‌ ಅಬ್ದುಲ್‌ ಸಲಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.