ADVERTISEMENT

ಪ್ರವಾಸಿಗರನ್ನು ಸೆಳೆಯಲು ಶತ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 8:53 IST
Last Updated 11 ಸೆಪ್ಟೆಂಬರ್ 2017, 8:53 IST
ಮೈಸೂರಿನ ಅಂಬಾವಿಲಾಸ ಅರಮನೆ ವೀಕ್ಷಣೆಗೆ ಭಾನುವಾರ ಬಂದಿದ್ದ ಪ್ರವಾಸಿಗರು
ಮೈಸೂರಿನ ಅಂಬಾವಿಲಾಸ ಅರಮನೆ ವೀಕ್ಷಣೆಗೆ ಭಾನುವಾರ ಬಂದಿದ್ದ ಪ್ರವಾಸಿಗರು   

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಪ್ರವಾಸೋದ್ಯಮದ ನಿರೀಕ್ಷೆಗಳು ಗರಿಗೆದರಿವೆ. ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ, ಹೋಟೆಲ್‌ ಉದ್ಯಮ ಹಾಗೂ ಟ್ರಾವೆಲ್‌ ಏಜೆನ್ಸಿಗಳು ಕಸರತ್ತು ನಡೆಸುತ್ತಿವೆ.

ನಿರೀಕ್ಷೆಯಷ್ಟು ಮಳೆ ಸುರಿಯದಿದ್ದರೂ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯ ಸ್ವರೂಪ ಪಡೆದಿಲ್ಲ. ಹೀಗಾಗಿ, ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗೆ ಆತಿಥ್ಯ ನೀಡಲು ಹೋಟೆಲುಗಳು ಸಜ್ಜಾಗಿವೆ. ತಮಿಳುನಾಡಿಗೆ ನೀರು ಹರಿಸುವಂತೆ 2016ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರಿಂದ ಪ್ರತಿಭಟನೆಯ ಕಾವು ಹೆಚ್ಚಿ, ನಾಡಹಬ್ಬದ ಮೇಲೆ ಕರಿನೆರಳು ಚೆಲ್ಲಿತ್ತು. ಇದರಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು.

ಈ ಬಾರಿ ಸೆ.21ರಿಂದ 30ರವರೆಗೆ  ನಡೆಯುವ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ಯುವ ದಸರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರವಾಸಿಗರನ್ನು ಆಕರ್ಷಿಸಲಿವೆ. ಸಾರಿಗೆ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳಿಗೆ ವಾಹನ ವ್ಯವಸ್ಥೆ ಮಾಡುತ್ತಿದೆ. ‘ಹೆಲಿಕಾಪ್ಟರ್‌ ಜಾಲಿ ರೈಡ್‌’, ‘ಸುವರ್ಣ ರಥ’ ಆಕರ್ಷಣೆಯನ್ನು ಹೆಚ್ಚಿಸಲಿವೆ. ನಾಡಹಬ್ಬದ ಕುರಿತು ಹೊರ ರಾಜ್ಯದಲ್ಲಿಯೂ ಪ್ರಚಾರ ನಡೆಯುತ್ತಿದೆ.

ADVERTISEMENT

ಹೋಟೆಲ್‌, ಮಾಲ್ ಹಾಗೂ ಟ್ರಾವೆಲ್‌ ಏಜೆನ್ಸಿಗಳು ಪ್ರವಾಸಿಗರಿಗೆ ವಿಶೇಷ ಕೊಡುಗೆ ನೀಡುತ್ತಿವೆ. ನವರಾತ್ರಿಯಲ್ಲಿ ಪ್ರವಾಸಿಗರನ್ನು ಹಿಡಿದಿಡುವ ಉದ್ದೇಶದಿಂದ ಪ್ಯಾಕೇಜ್‌ ಟೂರು ಆಯೋಜಿಸುತ್ತಿವೆ. ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವವರಿಗೆ ರಿಯಾಯಿತಿ ದರ ಘೋಷಣೆ ಮಾಡಿವೆ. ಸಾಮಾಜಿಕ ಜಾಲತಾಣಗಳಾದ ‘ಫೇಸ್‌ಬುಕ್’, ‘ಟ್ವಿಟರ್‌’, ‘ವಾಟ್ಸ್‌ಆ್ಯಪ್‌’ ಹಾಗೂ ‘ಇನ್‌ಸ್ಟಾಗ್ರಾಂ’ ಮೂಲಕ ವ್ಯಾಪಕ ಪ್ರಚಾರ ಕೈಗೊಂಡಿವೆ.

‘ದಸರಾ ಮಹೋತ್ಸವದ ಸಂದರ್ಭದಲ್ಲಿ ಉದ್ಯಮ ಗರಿಬಿಚ್ಚುತ್ತದೆ. ಹೋಟೆಲ್‌, ಟ್ರಾವೆಲ್‌ ಏಜೆನ್ಸಿ ಹಾಗೂ ಮಾಲ್‌ಗಳ ವಹಿವಾಟು ಹೆಚ್ಚುತ್ತದೆ. ಬರ ಪರಿಸ್ಥಿತಿ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಳೆದ ದಸರಾ ಮಹೋತ್ಸವದಲ್ಲಿ ನಿರೀಕ್ಷಿಸಿದಷ್ಟು ವಹಿವಾಟು ನಡೆದಿರಲಿಲ್ಲ. ಈ ಬಾರಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದು, ಶೇ 30ರಷ್ಟು ಕೊಠಡಿಗಳನ್ನು ಪ್ರವಾಸಿಗರು ಈಗಾಗಲೇ ಕಾಯ್ದಿರಿಸಿದ್ದಾರೆ. ಸೆ.20ರ ವೇಳೆಗೆ ಶೇ 70ರಷ್ಟು ಕೊಠಡಿಗಳು ಭರ್ತಿಯಾಗುವ ನಿರೀಕ್ಷೆ ಇದೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

24 ತಾರಾ ಹೋಟೆಲುಗಳೂ ಸೇರಿ ಒಟ್ಟು 302 ಹೋಟೆಲುಗಳು ಜಿಲ್ಲೆಯಲ್ಲಿವೆ. 165 ರೆಸ್ಟೊರೆಂಟ್‌ಗಳಿದ್ದು, ಸುಮಾರು 6,500 ಕೊಠಡಿಗಳು ಬಾಡಿಗೆಗೆ ಲಭ್ಯ ಇವೆ. ಜಂಬೂಸವಾರಿ ಸಾಗುವ ಸಯ್ಯಾಜಿರಾವ್‌ ರಸ್ತೆಯಲ್ಲಿಯೇ 25 ಹೋಟೆಲುಗಳಿದ್ದು, ಇಲ್ಲಿಯ ಕೊಠಡಿಗಳಿಗೆ ಭಾರಿ ಬೇಡಿಕೆ ಬಂದಿದೆ. ದಸರಾ ಸಂದರ್ಭದಲ್ಲಿ ನೀಡುತ್ತಿದ್ದ ವಿಶೇಷ ‘ಥಾಲಿ’ ಹಾಗೂ ಸಾಂಪ್ರದಾಯಿಕ ಭೋಜನ ಈ ಬಾರಿ ಲಭ್ಯವಾಗಲಿದೆ. ಕೆಲ ಹೋಟೆಲ್‌ ಮಾಲೀಕರು ಊಟ ಹಾಗೂ ತಿಂಡಿಯಲ್ಲಿ ರಿಯಾಯಿತಿ ಘೋಷಿಸಿದ್ದಾರೆ.

ಸೆ.27ರಂದು ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ’ ಅಂಗವಾಗಿ ‘ತೆರೆದ ರಸ್ತೆ ಹಬ್ಬ’ ನಡೆಸಲು ಪ್ರವಾಸೋದ್ಯಮ ಇಲಾಖೆ ಸಿದ್ಧವಾಗಿದೆ. ಈ ಕುರಿತು ಟ್ರಾವೆಲ್‌ ಏಜೆನ್ಸಿ ಮಾಲೀಕರು ಹಾಗೂ ವ್ಯಾಪಾರಸ್ಥರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ದೇವರಾಜ ಅರಸು ರಸ್ತೆಯಲ್ಲಿ ಖರೀದಿ, ಸ್ಕೇಟಿಂಗ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಇದರ ಉದ್ದೇಶ.

ದೀಪಾಲಂಕಾರದ ಬೆಳಕಿನಲ್ಲಿ ಅರಮನೆಯ ಸೊಬಗನ್ನು ಸವಿಯಲು ಇಚ್ಛಿಸುವವರಿಗಾಗಿ ‘ತೆರೆದ ಜೀಪ್‌ ಸಂಚಾರ’ವೂ ಆರಂಭವಾಗುತ್ತಿದೆ. ಚಾಮುಂಡಿಬೆಟ್ಟ, ಅಂಬಾವಿಲಾಸ ಅರಮನೆ, ಸಯ್ಯಾಜಿರಾವ್‌ ರಸ್ತೆ, ರಾಜಮಾರ್ಗ ಹಾಗೂ ವಿವಿಧ ರಸ್ತೆಗಳಲ್ಲಿ 2 ಗಂಟೆ ಸಂಚಾರಿಸಬಹುದು. ಆರು ಆಸನ ವ್ಯವಸ್ಥೆ ಇರುವ ಜೀಪುಗಳು ಸೆ.17ರಿಂದ ರಸ್ತೆಗೆ ಇಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.