ADVERTISEMENT

ಬದುಕಿನಲ್ಲೂ ಸ್ತ್ರೀವಾದ ಅನುಸರಿಸಬೇಕು

ವಿಜಯಾ ದಬ್ಬೆ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ತಾರಾನಾಥ್ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2015, 9:26 IST
Last Updated 23 ಡಿಸೆಂಬರ್ 2015, 9:26 IST

ಮೈಸೂರು: ‘ಕೇವಲ ಕೃತಿಗಳಲ್ಲಿ, ಭಾಷಣಗಳಲ್ಲಿ ಸ್ತ್ರೀವಾದ ಅನುಸರಿಸಿದರೆ ಸಾಲದು. ಬದುಕಿನಲ್ಲೂ ಸ್ತ್ರೀವಾದ ಅಳವಡಿಸಿಕೊಳ್ಳಬೇಕು. ಅದು ನೈಜ ಮಹಿಳಾವಾದ. ಇದಕ್ಕೆ ಪ್ರತಿರೂಪ ದಂತಿರುವವರು ಡಾ.ವಿಜಯಾ ದಬ್ಬೆ’ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎನ್‌.ಎಸ್‌. ತಾರಾನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕರ್ನಾಟಕ ದಲಿತ ಸಾಹಿತ್ಯ ಅಕಾಡೆಮಿಯು ಮಂಗಳವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಡಾ.ಎಸ್‌.ಡಿ. ಶಶಿಕಲಾ ಸಂಪಾದಿಸಿರುವ ಡಾ.ವಿಜಯಾ ದಬ್ಬೆ ಅವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘70–80ರ ದಶಕದಲ್ಲಿ ಹಲವು ಚಳವಳಿಗಳು ಹುಟ್ಟಿಕೊಂಡವು. ಅದರಲ್ಲಿ ಸ್ತ್ರೀವಾದವೂ ಒಂದು. ಮೈಸೂರು ಭಾಗದಲ್ಲಿ ಈ ಚಳವಳಿ ಹರಡಿದವರಲ್ಲಿ ವಿಜಯಾ ದಬ್ಬೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸಮಗ್ರ ಸಾಹಿತ್ಯ ಸಂಪುಟಗಳ ಮೂಲಕ ಮಹಿಳೆಯರ ಆಗುಹೋಗುಗಳು ಹಾಗೂ ಎದುರಿಸಿದ ಸಂಕಷ್ಟಗಳನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು.

‘ವಿಜಯಾ ದಬ್ಬೆ ಅವರು ಮಹಿಳಾ ಪರ ಭಾವನೆ, ಚಿಂತನೆಗಳನ್ನು ತಮ್ಮ ಒಡಲಲ್ಲಿ ಇರಿಸಿಕೊಂಡಿದ್ದಾರೆ. ಮಹಿಳಾ ಸಮ್ಮೇಳನ ಬೇಡ ಎಂದು ಹಿಂದೆ ಪ್ರತಿಭಟಿಸಿದ್ದವರು. ಎಲ್ಲಾ ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಸ್ಥಾನ ಇರಬೇಕು ಎಂಬುದು ಅವರ ವಾದ’ ಎಂದು ನೆನಪಿಸಿದರು.

‘ಪ್ರಾಚೀನ ಕನ್ನಡ ಸಾಹಿತ್ಯ ಚರಿತ್ರೆಯು ಪುರುಷ ಪ್ರಧಾನವಾಗಿದೆ. ಒಂಟಿ ಕಾಲಿನ ಹೆಜ್ಜೆ ಗುರುತುಗಳನ್ನು ಮಾತ್ರ ಕಾಣಬಹುದು. ಆದರೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪುರುಷ ಹಾಗೂ ಮಹಿಳೆಗೆ ಸಮನಾದ ಸ್ಥಾನ ಸಿಕ್ಕಿರುವುದನ್ನು ಗುರುತಿಸಬಹುದು. ಜೋಡಿ ಕಾಲಿನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ’ ಎಂದು ವಿಶ್ಲೇಷಿಸಿದರು.

ಲೇಖಕಿ ಶಶಿಕಲಾ ಮಾತನಾಡಿ, ‘ವಿಜಯಾ ದಬ್ಬೆ ಅವರ ಸಾಹಿತ್ಯ ಬಹಳಷ್ಟು ಜನರಿಗೆ ಅಲಭ್ಯವಾಗಿದೆ. ಅಲ್ಲದೆ, ತಲುಪದೇ ಇರುವ ಅವರ ಕೃತಿಗಳನ್ನು ಓದುಗರಿಗೆ ಮುಟ್ಟಿಸಲು ಈ ಕಾರ್ಯಕ್ಕೆ ಮುಂದಾದೆ. ಆಧುನಿಕ ಮಹಿಳಾ ಚಳವಳಿಯನ್ನು ಅಧ್ಯಯನ ಮಾಡುವವರು ವಿಜಯಾ ದಬ್ಬೆ ಅವರನ್ನು ಬಿಟ್ಟು ಮುಂದೆ ಹೆಜ್ಜೆ ಇಡಲು ಸಾಧ್ಯವೇ ಇಲ್ಲ’ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಆರ್‌. ರಾಮಕೃಷ್ಣ, ‘ಕನ್ನಡ ಸಾಹಿತ್ಯ ಕಂಡ ಅಪರೂಪದ ಲೇಖಕಿ ವಿಜಯಾ ದಬ್ಬೆ. ಅವರೊಬ್ಬ ಅಪೂರ್ಣ ಸ್ತ್ರೀವಾದಿ ಲೇಖಕಿ’ ಎಂದು ಹೇಳಿದರು. ಕನ್ನಡ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ನಾಗರಾಜು ತಲಕಾಡು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.