ADVERTISEMENT

ಬರಹ ಮಾರುಕಟ್ಟೆ ಸರಕಾಗದಿರಲಿ

​ಪ್ರಜಾವಾಣಿ ವಾರ್ತೆ
Published 29 ಮೇ 2017, 7:00 IST
Last Updated 29 ಮೇ 2017, 7:00 IST

ಮೈಸೂರು: ‘ಬರಹ ಮಾರುಕಟ್ಟೆಯ ಸರಕಾಗಬೇಕು ಎಂಬ ಬಯಕೆ ನನಗಿಲ್ಲ. ಏಕಾಂತದಲ್ಲಿ ಕುಳಿತು ತೋಚಿದ್ದನ್ನು ಬರೆದಿದ್ದೇನೆ.  ಇದೆಲ್ಲವೂ ಪ್ರಕಟವಾಗ­ಬೇಕು ಎಂಬ ಹಪಹಪಿ ಕೂಡ ಇಲ್ಲ. ನನ್ನದು ಬರಹವೇ ಬದುಕು...’

ಬದುಕು ಮತ್ತು ಬರಹದ ಕುರಿತು ಹೀಗೆ ಮಾತನಾಡಿದವರು ಲೇಖಕಿ ನೇಮಿಚಂದ್ರ. ಕುವೆಂಪುನಗರದ ಕಲಾಸುರುಚಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಹಿತ್ಯ ಚಾವಡಿ–93’ ಇದಕ್ಕೆ ವೇದಿಕೆ ಒದಗಿಸಿತು. ಪ್ರಾಧ್ಯಾಪಕಿಯರಾದ ಸುಷ್ಮಾ ಹಾಗೂ ಗಿರಿಜಾದೇವಿ ಲೇಖಕಿಯೊಂದಿಗೆ ಎರಡು ಗಂಟೆ ಸಂವಾದ ನಡೆಸಿದರು.

1999ರಲ್ಲಿ ಗೆಳತಿ ಅಗಲಿದಾಗ ಕಥೆಯೊಂದು ಹುಟ್ಟಿಕೊಂಡಿತು. 2008ರಲ್ಲಿ ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟದ ಬಳಿಕ ಮತ್ತೊಂದು ಕಥೆ ಬರೆದೆ. ಈ ಎಂಟು ವರ್ಷದ ಅವಧಿಯಲ್ಲಿ ಕಾದಂಬರಿ ಬರೆಯುವಲ್ಲಿ ಮಗ್ನಳಾಗಿದ್ದೆ. ಹೀಗಾಗಿ, ಕಥಾ ಸಾಹಿತ್ಯದ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಚೌಕಟ್ಟು ಹಾಕಿಕೊಂಡು ಏನನ್ನೂ ಬರೆಯಲಿಲ್ಲ. ಹೀಗಾಗಿ, 9 ವರ್ಷದ ಬಾಲಕಿಯಿಂದ 90ರ ವೃದ್ಧೆಯೂ ನನ್ನ ಸಾಹಿತ್ಯದ ಓದುಗರಾಗಿದ್ದಾರೆ ಎಂದು ಉಪನ್ಯಾಸಕಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ADVERTISEMENT

ಪ್ರಾಥಮಿಕ ಶಿಕ್ಷಣ ತುಮಕೂರಿನ ಸರ್ಕಾರಿ ಶಾಲೆಯಲ್ಲಿ ಮುಗಿಯಿತು. ಹೆಣ್ಣುಮಕ್ಕಳಿಗೆ ಗೃಹ ವಿಜ್ಞಾನ, ರೇಷ್ಮೆ ಬಟ್ಟೆ ತೊಳೆಯುವ ಬಗೆಯನ್ನು ಕಲಿಸಿದರೆ, ಬಾಲಕರಿಗೆ ಖಗೋಳ ವಿಜ್ಞಾನ ಹೇಳಿಕೊಡುತ್ತಿದ್ದರು. 8ನೇ ತರಗತಿಗೆ ಮೈಸೂರು ಸೇರಿದೆ.

ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತಳಾದೆ. ಬಾಲಕಿಯರಿಗೆ ‘ತಾಯಿ ಮತ್ತು ಮಗು’ ಹಾಗೂ ‘ಅಡುಗೆ ಪುಸ್ತಕ’, ಹುಡಗರಿಗೆ ವಿಜ್ಞಾನದ ಪುಸ್ತಕ ಬಹುಮಾನವಾಗಿ ನೀಡಿದರು. ಹೆಣ್ಣುಮಕ್ಕಳನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಈ ಘಟನೆಗಳು ಅರ್ಥಪಡಿಸಿದವು ಎಂದರು.

ಪ್ರಾಧ್ಯಾಪಕರಾಗಿದ್ದ ತಂದೆ ಬಟ್ಟೆಗಿಂತ ಪುಸ್ತಕಕ್ಕೆ ಹೆಚ್ಚು ಹಣ ಹಾಕುತ್ತಿದ್ದರು. ಪುಸ್ತಕಗಳೇ ನನ್ನೊಳಗಿನ ಲೇಖಕಿಗೆ ಸ್ಪಷ್ಟ ರೂಪ ನೀಡಿದವು. ಕೆಲಸದ ಒತ್ತಡದ ನಡುವೆಯೂ ಮಧ್ಯರಾತ್ರಿ ಕುಳಿತು ಬರೆಯುವುದು ರೂಢಿಯಾಯಿತು. ಕಡಿಮೆ ನಿದ್ದೆ ಮಾಡಿದರೆ ಏನಾದರೂ ಸಾಧಿಸಲು ಸಾಧ್ಯ ಎಂದು ಹಾಸ್ಯ ಚಟಾಕಿ ಹಾರಿಸಿದರು.

ರಜೆ ಕಳೆಯಲು ವಿದೇಶಕ್ಕೆ ಪ್ರವಾಸ ಹೋಗುವಷ್ಟು ಆರ್ಥಿಕ ಸ್ಥಿತಿ ನನಗೆ ಇರಲಿಲ್ಲ. ಮಹಿಳಾ ವಿಜ್ಞಾನಿಗಳು, ಸಾಧಕಿಯರನ್ನು ಹುಡುಕಿಕೊಂಡು ಪ್ರವಾಸಕ್ಕೆ ಹೋಗುತ್ತಿದ್ದೆ. ಕ್ರೌರ್ಯವೇ ತುಂಬಿರುವ, ಸಂಬಂಧವನ್ನೂ ಮಾರುಕಟ್ಟೆಯ ಸರಕಾಗಿಸಿರುವ ಅಮೆರಿಕಕ್ಕಿಂತ ಪೆರು ಆಪ್ತವೆನಿಸಿತು. ಭಾಷೆಯೇ ಅರ್ಥವಾಗದ ಜಾಗದಲ್ಲಿ ಭಾವನೆಗಳು ವಿನಿಮಯಗೊಂಡವು ಎಂದು ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.