ADVERTISEMENT

ಬರ– ಬವಣೆ; ಕಂಕಣಭಾಗ್ಯಕ್ಕೂ ಕಂಟಕ

ಜಯಪುರ ಹೋಬಳಿಯಲ್ಲಿ ಬದುಕು ದುಸ್ತರ; ಕುರಿಗಳಿಗೂ ಬಿತ್ತು ಬರದ ‘ಬರೆ’

ಗಣೇಶ ಅಮಿನಗಡ
Published 15 ಫೆಬ್ರುವರಿ 2017, 11:49 IST
Last Updated 15 ಫೆಬ್ರುವರಿ 2017, 11:49 IST
ಮೈಸೂರು ತಾಲ್ಲೂಕಿನ ಜಯಪುರ ಬಳಿ ಮೇವಿಲ್ಲದೆ ತರಗು ಮೇಯುತ್ತಿರುವ ಕುರಿಗಳು
ಮೈಸೂರು ತಾಲ್ಲೂಕಿನ ಜಯಪುರ ಬಳಿ ಮೇವಿಲ್ಲದೆ ತರಗು ಮೇಯುತ್ತಿರುವ ಕುರಿಗಳು   

ಮೈಸೂರು: ಬೀಳುಬಿದ್ದ ಜಮೀನಿನಲ್ಲಿ ತರಗು ಮೇಯುವ ಕುರಿಗಳು,  ಸರಿಯಾಗಿ ಮೇವು ಸಿಗದೆ ಸೊರಗಿದ ಕುರಿಗಳನ್ನು ಕೇವಲ ₹ 2–3 ಸಾವಿರಕ್ಕೆ ಮಾರುವ ಸ್ಥಿತಿ. ಮುಂಚೆ ಕನಿಷ್ಠ ₹ 7  ಸಾವಿರಕ್ಕೆ ಕಡಿಮೆ ಇಲ್ಲದಂತೆ ಮಾರಾಟ­ವಾಗುತ್ತಿದ್ದವು. ಹೀಗಾಗಿ, ಮಾರಲಾಗದೆ ಹೇಗೋ ಮೇಯಿಸಿಕೊಂಡು ಮನೆಗೆ ಕರೆದೊಯ್ಯುವ ಸ್ಥಿತಿ...ಇದು ಜಯಪುರ ಹೋಬಳಿಯಲ್ಲಿ ಮಂಗಳವಾರ ಕಂಡ ದೃಶ್ಯ.

ಸತತ 3 ವರ್ಷಗಳಿಂದ ಮಳೆ ಬೀಳದ ಪರಿಣಾಮ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ‘ಗೌರಿ ಹುಣ್ಣಿಮೆಯಿಂದ ಕುರಿಗಳು ಸರಿಯಾಗಿ ಮೇಯ್ದಿಲ್ಲ, ಸೊರಗಿವೆ. ಮಾರೋಣವೆಂದರೆ ಸರಿಯಾದ ಬೆಲೆ ಬರಲ್ಲ. ಅದ್ಕೆ ಸಂಜ ಗಂಟ ಏನೋ ಮೇಯಿಸಿಕೊಂಡು ಮನೆಗೋಯ್ತೀವಿ’ ಎಂದು 20 ಕುರಿಗಳನ್ನು ಮೇಯಿಸುತ್ತಿದ್ದ ಜಯಪುರದ ಮಾದೇವ ನಾಯ್ಕ ಹೇಳಿದರು.

ಇನ್ನೊಂದು ಗದ್ದೆಯಲ್ಲಿ ತನ್ನ 25 ಕುರಿ ಮೇಯಿಸುತ್ತಿದ್ದ ಪುಟ್ಟಮಾದಮ್ಮ, ‘ಜಮೀನಿನಲ್ಲಿನ ಕಡ್ಡಿ ತಿಂತವೆ. 4 ಹಸುಗಳಿದ್ದು ಹೇಗೋ ಮೇವು ಹೊಂದಸ್ತೀವಿ. ಕುರಿಗಳನ್ನು ಮೇಯಿಸೋದೆ ಕಷ್ಟ. 4 ಹೆಣ್ಣುಮಕ್ಕಳ ಮದುವೆ ಮಾಡಿದೆ. ಕೊನೆಯ ಮಗಳ ಮದುವೆ ಮಾಡೋಣವೆಂದರೆ ಬರಗಾಲ. ಮುಂದೂಡಿದ್ದೇವೆ’ ಎಂದು ಬೇಸರದಿಂದ ತಿಳಿಸಿದರು.

‘1966ರಲ್ಲಿ ಇಂಥದ್ದೇ ಬರಗಾಲ ನೋಡಿದ್ದೆವು. ಈಗ ಹುಲ್ಲಾದರೂ ಸಿಗುತ್ತೆ, ಆಗ ಹುಲ್ಲೂ ಸಿಗುತ್ತಿರಲಿಲ್ಲ. ಈಚಿನ ವರ್ಷಗಳಲ್ಲಿ ರೈತರೆಲ್ಲ ಕೊಳವೆ ಬಾವಿಗೆ ಮೊರೆ ಹೋಗಿದ್ದಾರೆ. ಆದ್ರೆ ಮಳೆಗಾಲಯಾಗದೆ ಎಲ್ಲ ಬತ್ತಿವೆ. ನಮ್ಮ 20 ಎಕರೆಯಲ್ಲಿ ಏನೂ ಬೆಳೆದಿಲ್ಲ. 4 ಕೊಳವೆ ಬಾವಿ ಹಾಕಿಸಿದ್ರೂ ಪ್ರಯೋಜನವಾಗಿಲ್ಲ. 8–9 ಸಾವಿರ ಸಿಲ್ವರ್‌, 200 ತೇಗದ ಮರ ಇವೆ. ಅವು ಕೂಡಾ ಮಳೆಯಾಗದೆ ಸರಿಯಾಗಿ ಬೆಳೆದಿಲ್ಲ. 70 ಕುರಿಗಳಿವೆ. ಹೇಗೋ ಜೀವನ ಮಾಡ್ತಿದ್ದೀವಿ’ ಎಂದು 78 ವರ್ಷದ ಮಾವಿನಹಳ್ಳಿಯ ಜಿ.ಸಿದ್ದೇಗೌಡ ವ್ಯಥೆಯಿಂದ ಹೇಳಿದರು.

ಜಯಪುರದ ಮೇವು ಬ್ಯಾಂಕ್‌ ಮಂಗಳವಾರ ಮಧ್ಯಾಹ್ನ ತೆರೆದಿರಲಿಲ್ಲ. ಹೀಗಾಗಿ ಕೆಲ ರೈತರು ವಾಪಸು ತೆರಳುವುದು ಸಾಮಾನ್ಯವಾಗಿತ್ತು. ಇದರ ಹಿಂದೆಯೇ ಮನೆಯಿರುವ ಜಡೆಕಟ್ಟೆ ಮಹದೇಶ್ವರ ದೇವಸ್ಥಾನದ ಅರ್ಚಕ ಮಹದೇವಪ್ಪ, ‘ವಾರಕ್ಕೊಮ್ಮೆ ಮೇವು ಸಿಗಬೇಕು. ಆದ್ರೆ 15 ದಿನಗಳಿಗೊಮ್ಮೆ ಕೊಡ್ತಾರೆ. ಸಮಾಧಾನದವೆಂದರೆ 100 ರೂಪಾಯಿಗೆ 10 ಕಂತೆ ಕೊಡುತ್ತಿದ್ದರು. ಈಚೆಗೆ 15 ಕೊಡ್ತಾರೆ’ ಎಂದರು.

‘ಕೆಲ ವರ್ಷ ಅಷ್ಟೆ, ಹಸು ಸಿಗಲ್ಲ. ಕಸಾಯಿಖಾನೆಗೇ ಕಳಿಸೋದು ಬಾಕಿ. ನಮ್ಮತ್ರ 8 ಹಸುಗಳಿದ್ದವು. ಈಗ ಉಳಿದಿರೋದು ಒಂದೇ. ಮೇವಿಲ್ಲ. ನೀರಿಲ್ಲ. 8 ಹಸುಗಳನ್ನು ಹೇಗೆ ಸಾಕೋದು ಎಂದು ಗೊತ್ತಾಗದೆ ಮಾರಿದ್ವಿ’ ಎನ್ನುವುದು ಮಹದೇವಪ್ಪ ಅವರ ನೋವಿನ ನುಡಿ.
‘ಜಯಪುರದ ಸುತ್ತಮುತ್ತ ಈಗ 800ರಿಂದ 1 ಸಾವಿರ ಅಡಿ ಕೊರೆಸಿದ್ರೂ ನೀರು ಸಿಗುತ್ತಿಲ್ಲ. ಮೇವು ಕೊಂಡ್ರೆ ಸಣ್ಣ ಕಂತೆ ಕೊಡ್ತಾರೆ. ಇಷ್ಟವಾದ್ರೆ ತಗೊ, ಕಷ್ಟವಾದ್ರೆ ಬಿಡು ಅಂತಾರೆ’ ಎನ್ನುವ ಅಳಲು ಪರಮೇಶ್ ಅವರದು.

ಜಯಪುರದಿಂದ ಕಾಡನಳ್ಳಿ ಗ್ರಾಮಕ್ಕೆ ನಡೆದು ಹೊರಟಿದ್ದ ನಾಗಣ್ಣೇಗೌಡ, ಮಳೆಯಾದಾಗ ರಾಗಿ, ಭತ್ತ, ಜೋಳ, ತೊಗರಿ ಬೆಳೆದು ಆರ್‌ಎಂಸಿಗೆ ಮಾರತಿದ್ವಿ. 2 ವರ್ಷಗಳಿಂದ ಏನೂ ಬೆಳೆದಿಲ್ಲ. ಮಾರೋದೆಲ್ಲಿ ಬಂತು? ಊಟ ಮಾಡೋಕೆ ಯೋಚ್ನೆಯಾಗ್ತಿದೆ. 3 ವರ್ಷದ ಹಿಂದೆ ಬಟ್ಟೆ ಹೊಲಿಸಿದ್ವಿ. ಮತ್ತೆ ಹೊಲಿಸಿಲ್ಲ ಎಂದು ದುಃಖ ತೋಡಿಕೊಂಡರು. ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದ ಸಿದ್ದೇಗೌಡ, ಮೂವರು ಹೆಣ್ಣುಮಕ್ಕಳಲ್ಲಿ ಇಬ್ರ ಮದುವೆ ಮಾಡಿದ್ವಿ. ಕೊನೆ ಮಗಳ ಮದುವೆ ಮಾಡಬೇಕಿದೆ. ಬರಗಾಲ ಕಾರಣ ಮದುವೆ ಮಾಡದೆ ಸುಮ್ನೆ ಕುಂತೀವಿ ಎಂದರು.

ಅಂತರ್ಜಲ ಕುಸಿತ

ಮೈಸೂರು: ಮಳೆಯಾದರೆ ಮಾತ್ರ ಅಂತರ್ಜಲ ಮರುಪೂರಣ ಆಗುತ್ತದೆ. ನೀರಾವರಿ ಪ್ರದೇಶಗಳಲ್ಲಿ ಕಾಲುವೆಗಳ ಮೂಲಕ ನೀರು ಹಾಯಿಸುವುದರಿಂದ ಅಂತರ್ಜಲ ಮರುಪೂರಣ ಆಗುತ್ತದೆ. ಆದರೆ, ಜಯಪುರ ಹೋಬಳಿಯಲ್ಲಿ ನೀರಾವರಿ ಪ್ರಮಾಣ ತೀರಾ ಕಡಿಮೆ. ಕೆರೆಗಳು ಬತ್ತಿವೆ. ಮಳೆ ಆಗಿಲ್ಲ. ಆದರೆ, ಅಂತರ್ಜಲ ಬಳಕೆ ಹೆಚ್ಚಾಗಿದೆ. ಇದರ ಪರಿಣಾಮ ವರ್ಷದಿಂದ ವರ್ಷಕ್ಕೆ ಅಂತರ್ಜಲ ತೀವ್ರ ಕುಸಿತ ಕಂಡಿದೆ ಎನ್ನುತ್ತವೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.