ADVERTISEMENT

ಬಾಲಕನೂ, ಕುರಿಮರಿ ಮೇಲಿನ ಪ್ರೀತಿಯೂ...

ಸಿನಿಮೋತ್ಸವದಲ್ಲಿ ಇಥಿಯೋಪಿಯಾದ ‘ಲ್ಯಾಂಬ್‌’ ಚಲನಚಿತ್ರ ಪ್ರದರ್ಶನ

ಎಂ.ಮಹೇಶ
Published 5 ಫೆಬ್ರುವರಿ 2016, 8:42 IST
Last Updated 5 ಫೆಬ್ರುವರಿ 2016, 8:42 IST

ಮೈಸೂರು:   ತನ್ನ ಜೀವದ ಗೆಳೆಯನಂತಿರುವ ಕುರಿಮರಿಯನ್ನು ಹಬ್ಬದ ನೆಪದಲ್ಲಿ ಕೊಂದು ತಿನ್ನಲು ಆ ಬಾಲಕ ಬಿಡುತ್ತಾನೆಯೇ?!
– ಹೀಗೊಂದು ವಿಶಿಷ್ಟ ಎಳೆಯಲ್ಲಿ ಮೂಡಿ ಬಂದಿರುವ ಇಥಿಯೋಪಿಯಾದ ಸಿನಿಮಾ, ಬುಡಕಟ್ಟು ಜನರ ಸಂಸ್ಕೃತಿ ಪರಿಚಯಿಸುವುದರೊಂದಿಗೆ ಮಕ್ಕಳಿಗೆ ಪ್ರಾಣಿಗಳ ಮೇಲಿರುವ ಪ್ರೀತಿಯನ್ನು ‘ಚಿತ್ರಿಸಿ’ಕೊಟ್ಟಿತು.

ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರ ಅಕಾಡೆಮಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಮಾಲ್‌ ಆಫ್‌ ಮೈಸೂರು–ಐನಾಕ್ಸ್ ಚಿತ್ರಮಂದಿರದಲ್ಲಿ ನಡೆದ ‘8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ದ ಕೊನೆಯ ದಿನವಾದ ಗುರುವಾರ ಪ್ರದರ್ಶನಗೊಂಡ ಇಥಿಯೋಪಿಯಾ ಭಾಷೆಯ ಈ ಸಿನಿಮಾ, ಸಾಕುಪ್ರಾಣಿಗಳೊಂದಿಗೆ ಇಟ್ಟುಕೊಳ್ಳುವ ಪ್ರೀತಿಯ ತೀವ್ರತೆ ‘ಕಟ್ಟಿ’ ಕೊಟ್ಟಿತು. ಕುರಿ ಉಳಿಸಲು ಆ ಹುಡುಗ ಅನುಭವಿಸುವ ನೋವು ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿದವು.

ಇಥಿಯೋಪಿಯಾದ ಬಾಲಕ ಇಫ್ರಾಯಿಂ ಈ ಕತೆಯ ನಾಯಕ. ಹಾಡಿಯಲ್ಲಿರುವ ಆತನಿಗೆ ಕುರಿಮರಿ ಎಂದರೆ ಪ್ರಾಣ. ‘ಚೀಮು’ ಎಂದು ಹೆಸರಿಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತಾಯಿ ತೀರಿಕೊಂಡ ನಂತರ ತಂದೆ ನಿರ್ಧಾರದಂತೆ ದೂರದ ಬಂಧುಗಳೊಂದಿಗೆ ಇರಲು ಒಪ್ಪಿಕೊಳ್ಳುತ್ತಾನೆ. ದೂರದ ಗುಡ್ಡದ ಮೇಲಿರುವ ಬಂಧುಗಳ ಮನೆಯಲ್ಲಿ ಬಾಲಕನನ್ನು ಬಿಟ್ಟು, ಮಳೆಗಾಲ ಆರಂಭವಾದ ನಂತರ ಬರುವುದಾಗಿ ಹೇಳಿ ನಗರಕ್ಕೆ ಕೆಲಸ ಅರಸಿ ಹೋಗುತ್ತಾನೆ ತಂದೆ. ಪೋಷಕರಿಂದ ದೂರವಾದ ಆ ಬಾಲಕ ಬಂಧುಗಳೊಂದಿಗೆ ಹೇಗೆ ಇರಬೇಕಾಗುತ್ತದೆ ಎನ್ನುವುದು ಸಿನಿಮಾದ ಸಾರ.

ಆತನ ಬಂಧುಗಳದ್ದು ಕೂಡ ಕೃಷಿಯನ್ನೇ ನಂಬಿ ಬದುತ್ತಿರುವ ಬಡ ಕುಟುಂಬ. ಬಾಲಕ ನಮ್ಮೊಡನಿದ್ದರೆ ಏನಾದರೂ ಕೆಲಸಕ್ಕೆ ಸಹಾಯವಾಗಬಹುದು ಎಂಬ ಲೆಕ್ಕಾಚಾರ ಚಿಕ್ಕಪ್ಪನದು. ಆ ಬಾಲಕನಿಗೆ ಅಡುಗೆ ಹಾಗೂ ಮನೆ ಕೆಲಸ ಮಾಡುವುದರಲ್ಲಿ ಆಸಕ್ತಿ. ಮನೆಯಲ್ಲಿರುವ ಅಜ್ಜಿ ಹಾಗೂ ಚಿಕ್ಕಮ್ಮನಿಗೆ ಈತನ ಬಗ್ಗೆ ಕೊಂಚ ಪ್ರೀತಿ. ಆದರೆ, ಚಿಕ್ಕಪ್ಪನಿಗೆ, ತನ್ನೊಂದಿಗೆ ಹೊಲದಲ್ಲಿ ಕೆಲಸ ಮಾಡಲೆನ್ನುವ ಬಯಕೆ. ಬಾರುಕೋಲು ಕೊಟ್ಟು ಹೊಲಕ್ಕಿಳಿಸುತ್ತಾನೆ. ಅವನಿಗಿಂತಲೂ ಮೂರುಪಟ್ಟು ಉದ್ದವಿರುವ ಬಾರುಕೋಲನ್ನು ಎತ್ತಿ ಎತ್ತುಗಳಿಗೆ ಹೊಡೆಯುವುದು ಇಫ್ರಾಯಿಂಗೆ ಆಗುವುದಿಲ್ಲ. ಬಾರುಕೋಲು ಚಿಕ್ಕಪ್ಪನಿಗೇ ಬಡಿಯುತ್ತದೆ. ಇದರಿಂದ ಕೋಪಗೊಂಡ ಆತ ಬೈಯ್ದು ಹೊಲದಿಂದ ಕಳುಹಿಸಿಬಿಡುತ್ತಾನೆ.

ಇದರಿಂದ ಬೇಸರಗೊಂಡ ಬಾಲಕ ಕುರಿಮರಿಯೊಂದಿಗೆ ಬೆಟ್ಟದ ತುದಿಗೆ ಹೋಗಿ ಕಣ್ಣೀರು ಹಾಕುತ್ತಾನೆ. ತಾಯಿ–ತಂದೆ ಜೊತೆ ಆಡುತ್ತಿರುವಂತೆ ಕನಸು. ಮತ್ತಷ್ಟು ದುಃಖಕ್ಕೆ ಒಳಗಾಗುವ ಆತ, ಬಂಧುಗಳ ಮನೆಗೆ ವಾಪಸಾಗುತ್ತಾನೆ.

ಮುಂಬರುವ ಹಬ್ಬಕ್ಕಾಗಿ ಬಲಿ ಕೊಡಲು ಕುರಿ ತ್ಯಾಗ ಮಾಡುವಂತೆ ಚಿಕ್ಕಪ್ಪ ಬಾಲಕನಿಗೆ ತಿಳಿಸುತ್ತಾನೆ. ಕುರಿ ಕೊಂದು ಮಾಂಸ ತಿನ್ನುವ ಬಗ್ಗೆ ಮನೆಯವರೊಂದಿಗೆ ಲೆಕ್ಕ ಹಾಕುತ್ತಿರುತ್ತಾನೆ. ಇದನ್ನು ತಿಳಿದು ಬಾಲಕ ಮತ್ತಷ್ಟು ಆಘಾತಕ್ಕೊಳಗಾಗುತ್ತಾನೆ. ಗುಡ್ಡ ಇಳಿದು ಹೋಗಿ ತಮ್ಮೂರಿಗೆ ಹೋಗಲು ಎಷ್ಟು ಹಣ ಬೇಕಾಗುತ್ತದೆ ಎಂದು ವಿಚಾರಿಸಿಕೊಳ್ಳುತ್ತಾನೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಇಲ್ಲಿಂದ ಹೋಗಿಬಿಡಬೇಕು. ಕುರಿ ಹಾಗೂ ತನಗೆ ಸ್ವಾತಂತ್ರ್ಯ ಸಿಗುವಂತಾಗಬೇಕು ಎನ್ನುವುದು ಆತನ ಕನಸು.

ಹಣ ಪಡೆಯುವುದು ಹೇಗೆ? ಸಂತೆಯಲ್ಲಿ ಕೆಲಸ ಮಾಡಲು ಸ್ಥಳೀಯ ಹುಡುಗರು ಬಿಡುವುದಿಲ್ಲ. ಕೊನೆಗೆ, ತಾನಿದ್ದ ಮನೆ ಪಕ್ಕದಲ್ಲಿ ಕೋಳಿ ಕದ್ದು ಮಾರಿ ಬಂದ ಹಣದಿಂದ ಸಮೋಸಕ್ಕೆ ಬೇಕಾಗುವ ಪದಾರ್ಥ ಖರೀದಿಸುತ್ತಾನೆ.

‘ಸಂತೆಯಲ್ಲಿ ಸಮೋಸ ಮಾರುತ್ತೇನೆ. ನಾನೇ ಸಿದ್ಧಮಾಡಿಕೊಳ್ಳುತ್ತೇನೆ’ ಎಂದು ಅಜ್ಜಿ, ಚಿಕ್ಕಮ್ಮನನ್ನು ಒಪ್ಪಿಸುತ್ತಾನೆ. ಆತ ಸಿದ್ಧಪಡಿಸಿದ ಸಮೋಸಕ್ಕೆ ಇವರಿಬ್ಬರೂ ಮನಸೋಲುತ್ತಾರೆ. ಸಮೋಸ ಬೇಯಿಸುತ್ತಾ ಕುಳಿತಿದ್ದ ಇಫ್ರಾಯಿಂನನ್ನು ಚಿಕ್ಕಪ್ಪ ಮತ್ತೆ ಹೀಯಾಳಿಸುತ್ತಾರೆ. ದೊಣ್ಣೆಯಿಂದ ತಿವಿಯುತ್ತಾರೆ. ಇನ್ನೊಮ್ಮೆ ಅಡುಗೆ ಮಾಡುವುದನ್ನು ನೋಡಬಾರದು ಎಂದು ಆಜ್ಞೆ ಮಾಡುತ್ತಾನೆ.

ಆದರೆ, ಚಿಕ್ಕಮ್ಮನ ನೆರವಿನಿಂದ ಸಮೋಸ ಬೇಯಿಸಿ ನಿತ್ಯವೂ ಸಂತೆಯಲ್ಲಿ ಮಾರುತ್ತಾನೆ. ಹಣವೇನೋ ಬರುತ್ತದೆ. ಸಂತೆಯ ಹುಡುಗರು ಥಳಿಸಿ ಹಣ ಕಸಿದುಕೊಂಡು ಬಿಡುತ್ತಾರೆ. ಆದರೆ, ಕುರಿಮರಿ ಉಳಿಸಿಕೊಳ್ಳಲೇಬೇಕು, ಊರಿಗೆ ಹೋಗಲೇಬೇಕು ಎಂದು ಸಮೋಸ ಮಾರುವುದನ್ನು ನಿಲ್ಲಿಸುವುದಿಲ್ಲ. ಬಂದ ಹಣದಲ್ಲಿ ಒಂದಷ್ಟನ್ನು ಚಿಕ್ಕಮ್ಮನಿಗೂ ಕೊಟ್ಟು ಕೊಂಚ ಉಳಿಸುತ್ತಾ ಹೋಗುತ್ತಾನೆ.

ಸಂತೆಯಲ್ಲಿ ಕುರಿ ಮಾರುತ್ತಿದ್ದ ಒಬ್ಬನಿಗೆ, ದಿನಕ್ಕೆ ಇಷ್ಟೆಂದು ಹಣ ನಿಗದಿ ಮಾಡಿ ಕುರಿ ನೋಡಿಕೊಳ್ಳಲು ಕೊಟ್ಟುಬರುತ್ತಾನೆ. ಇದಕ್ಕೆ ಚಿಕ್ಕಪ್ಪನ ಮಗಳೂ ಸಹಕರಿಸುತ್ತಾಳೆ. ಕುರಿ ಕಳುವಾಯಿತು ಎಂದು ಮನೆಯಲ್ಲಿ ಹೇಳಿ, ಚಿಕ್ಕಪ್ಪನಿಂದ ಒದೆ ತಿನ್ನುತ್ತಾನೆ. ನೋವಿನಲ್ಲೂ, ಕುರಿ ಉಳಿಸಿದೆನಲ್ಲಾ ಎನ್ನುವ ಸಮಾಧಾನ ಆತನದು. ಸಂತೆಯಲ್ಲಿ ಸಮೋಸ ಮಾರುವಾಗ, ವ್ಯಕ್ತಿಯೊಬ್ಬ ತನ್ನ ಕುರಿಗೆ ಹೊಡೆಯುವುದನ್ನು ಕಂಡು ಆತನ ಮೇಲೆರಗುತ್ತಾನೆ. ಕುರಿಮರಿ ಇಲ್ಲಿರುವುದು ಬೇಡ ಎಂದು ನಿರ್ಧರಿಸುತ್ತಾನೆ.

ಅದೇ ದಿನ ಆತನ ಚಿಕ್ಕಪ್ಪನ ಮಗಳು, ಮನೆಯವರ ಕಣ್ತಪ್ಪಿಸಿ ಸ್ನೇಹಿತನೊಂದಿಗೆ ನಗರಕ್ಕೆ ಹೊರಡುತ್ತಾಳೆ. ಅದೇ ಲಾರಿಯಲ್ಲಿ ಆತನೂ ಕದ್ದು ಕೂರುತ್ತಾನೆ. ಒಂದಷ್ಟು ದೂರ ಸಾಗಿದ ನಂತರ ಕುರಿಮರಿ ಕೂಗುವುದರ ಮೂಲಕ ಇಫ್ರಾಯಿಂ ಇರುವುದನ್ನು ತಿಳಿದ ಚಾಲಕ ಆತನನ್ನು ಲಾರಿಯಿಂದ ಇಳಿಸಿಬಿಡುತ್ತಾನೆ. ಅನಿವಾರ್ಯವಾಗಿ ಆತ ಬಂಧುಗಳ ಮನೆಗೇ ಹೋಗಬೇಕಾಗುತ್ತದೆ.

ಕುರಿಮರಿ ಕರೆದೊಯ್ಯುವಂತಿಲ್ಲ. ಅಲ್ಲಿ ಕುರಿ ಮೇಯಿಸುತ್ತಿದ್ದ ಬಾಲಕಿಗೆ ಒಪ್ಪಿಸುತ್ತಾನೆ. ಬಸ್‌ ಛಾರ್ಜ್‌ಗೆ ಹಣ ಹೊಂದಿಸುತ್ತಿದ್ದಾನೆ. ಒಮ್ಮೆ ‘ಚೀಮು’ ನೋಡಿಕೊಂಡು ಬರಲು ಹೋಗುತ್ತಾನೆ. ಆದರೆ, ಇತರ ಕುರಿಮರಿಗಳೊಂದಿಗೆ ಪಳಗಿದ್ದ ಚೀಮು ಈತನೊಂದಿಗೆ ಬರಲು ಹಿಂದೇಟು ಹಾಕುತ್ತದೆ. ‘ಚೀಮು’ ಚೆನ್ನಾಗಿರಲೆಂದು ಕುರಿಮರಿಯನ್ನು ಆ ಬಾಲಕಿಯೊಂದಿಗೇ ಬಿಡುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.