ADVERTISEMENT

ಬಾಲ್ಯವಿವಾಹ; 2ನೇ ಸ್ಥಾನದಲ್ಲಿ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 8:50 IST
Last Updated 15 ಮೇ 2017, 8:50 IST
ಬಾಲ್ಯವಿವಾಹ; 2ನೇ ಸ್ಥಾನದಲ್ಲಿ ಜಿಲ್ಲೆ
ಬಾಲ್ಯವಿವಾಹ; 2ನೇ ಸ್ಥಾನದಲ್ಲಿ ಜಿಲ್ಲೆ   
ಕೆ.ಆರ್.ನಗರ: ಬಾಲ್ಯ ವಿವಾಹದಲ್ಲಿ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಇಲಾಖೆಯ ತಾಲ್ಲೂಕು ಶಿಕ್ಷಣಾಧಿಕಾರಿ ರೇಖಾ ವಿಷಾದ ವ್ಯಕ್ತಪಡಿಸಿದರು.
 
ಪಟ್ಟಣದ ಗುರುಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ಬಾಲ್ಯ ವಿವಾಹ ನಿಷೇಧ ಕುರಿತು ಈಚೆಗೆ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
 
‘ಬಾಲ್ಯವಿವಾಹ ತಡೆಯಲು ಎಷ್ಟೇ ಕಾರ್ಯಕ್ರಮ ಹಾಕಿಕೊಂಡರೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಹದಿಹರೆಯದ ಹೆಣ್ಣು ಮಕ್ಕಳು ಗರ್ಭ ಧರಿಸುವುದರಲ್ಲಿ ಮೊದಲ ಸ್ಥಾನದಲ್ಲಿ  ಚಾಮರಾಜನಗರ ಜಿಲ್ಲೆ (ಶೇ 13.8), ಎರಡನೇ ಸ್ಥಾನದಲ್ಲಿ ಮೈಸೂರು ಜಿಲ್ಲೆ (ಶೇ 10.3), ಕೊನೆ ಸ್ಥಾನದಲ್ಲಿ ಉಡುಪಿ (ಶೇ 2.3)  ಇದೆ’ ಎಂದು ಹೇಳಿದರು.
 
‘18 ವರ್ಷ ಒಳಗಿನ ಹೆಣ್ಣುಮಕ್ಕಳು ತಾಯಿಯಾದರೆ ಆ ತಾಯಿಗೆ ಶಿಶು ಆರೈಕೆ ಮಾಡುವ ವಿಧಾನವೇ ಗೊತ್ತಿರುವುದಿಲ್ಲ. ತಾಯಿ ಮಾನಸಿಕವಾಗಿಯೂ ಬೆಳವಣಿಗೆ ಆಗಿರುವುದಿಲ್ಲ. ಇದರಿಂದ ಶಿಶು ಮರಣವೂ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
 
‘ಗರ್ಭ ಧರಿಸುವ ತಾಯಿಗೆ ಕನಿಷ್ಠ 21 ವರ್ಷ ಆಗಿರಬೇಕು. ಇಲ್ಲದೇ ಹೋದಲ್ಲಿ ಸರ್ಕಾರದ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ, ಬಾಲ್ಯವಿವಾಹ ತಡೆಯಬೇಕಾಗಿದೆ. ಇದು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಆ ಮಹಿಳೆಗೆ ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವಂತೆ ಅಥವಾ ಚುಚ್ಚುಮದ್ದು ಬಳಕೆ ಮಾಡುವಂತೆ ಮನವೊಲಿಸಬೇಕು. ಇದರಿಂದ ತಾಯಿ ಮತ್ತು ಶಿಶು ಮರಣ ತಡೆದಂತಾಗುತ್ತದೆ’ ಎಂದರು.
 
ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್, ಸಂಪನ್ಮೂಲ ವ್ಯಕ್ತಿ ಪೂರ್ಣಿಮಾ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಾಯತ್ರಿ ಹಂಡಿ, ಮೇಲ್ವಿ ಚಾರಕಿ ಶೋಭಾ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.