ADVERTISEMENT

ಬಿರುಗಾಳಿ, ಮಳೆಗೆ ಮರಗಳು ಧರೆಗೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 9:26 IST
Last Updated 11 ಏಪ್ರಿಲ್ 2017, 9:26 IST
ಬಿರುಗಾಳಿ, ಮಳೆಗೆ ಮರಗಳು ಧರೆಗೆ
ಬಿರುಗಾಳಿ, ಮಳೆಗೆ ಮರಗಳು ಧರೆಗೆ   

ಮೈಸೂರು: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಗುಡುಗು ಹಾಗೂ ಬಿರುಗಾಳಿ ಸಹಿತದ ಮಳೆಗೆ ವಿವಿಧ ಬಡಾವಣೆಯ ಹತ್ತಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.

ಏಕಾಏಕಿ ಸುರಿದ ಮಳೆಗೆ ಚರಂಡಿಗಳು ಕಟ್ಟಿಕೊಂಡು ರಸ್ತೆಯಲ್ಲಿ ನೀರು ಹರಿಯಿತು. ಕೆ.ಆರ್‌.ವೃತ್ತದ ಸುತ್ತ ಮೊಣಕಾಲುದ್ದ ನಿಂತಿದ್ದ ನೀರಿನಲ್ಲಿಯೇ ವಾಹನ ಹಾಗೂ ಪಾದಚಾರಿಗಳು ಸಂಚರಿಸಿದರು. ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾತ್ರಿ 8 ಗಂಟೆಗೆ ಶುರುವಾದ ಮಳೆ ಸುಮಾರು 20 ನಿಮಿಷ ಎಡೆಬಿಡದೇ ಸುರಿಯಿತು. ಬಿರುಸಿನ ಮಳೆಗೆ ಎಲ್ಲೆಡೆ ಚರಂಡಿಗಳು ತುಂಬಿ ಹರಿದವು. ಮಳೆ ಜೊತೆಗೆ ಬೀಸಿದ ಬಿರುಗಾಳಿ ಹಲವು ಮರಗಳನ್ನು ಧರೆಗೆ ಉರುಳಿಸಿತು.

ADVERTISEMENT

ಬನ್ನಿಮಂಟಪದ ಕೂಲ್‌ ಕಾರ್ನಾರ್‌, ಹುಡ್ಕೊ ಕಾಲೊನಿ ರಸ್ತೆ, ಎಲ್‌ಐಸಿ ವೃತ್ತ, ಕೆಸರೆಯ ಕುರಿಮಂಡಿ, ರಾಜೀವನಗರದ ಕುವೆಂಪು ರಸ್ತೆ, ನಾಯ್ಡುನಗರದ ಮುಖ್ಯರಸ್ತೆ, ಯಾದವಗಿರಿಯ ಪರಮ ಹಂಸ ರಸ್ತೆಯಲ್ಲಿ ಮರಗಳು ರಸ್ತೆಗೆ ಉರುಳಿದವು. ಬನ್ನಿಮಂಟಪದ ಹುಡ್ಕೊ ಕಾಲೊನಿ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ಕಾರಿನ ಮೇಲೆ ಮರ ಬಿದ್ದು ಜಖಂಗೊಂಡಿದೆ.

ಕಲ್ಯಾಣಗಿರಿಯ ಅಜೀಜ್‌ ಸೇಠ್‌ ನಗರದ ಬೀಡಿ ಕಾರ್ಮಿಕರ ಕಾಲೊನಿಯ ಆಸ್ಪತ್ರೆಯ ಸಮೀಪ ಮರದ ಕೊಂಬೆ ಯೊಂದು ಮುರಿದು ಬಿದ್ದಿದೆ. ಇದರಿಂದ ಎರಡು ಮನೆಗಳಿಗೆ ಹಾನಿಯುಂಟಾ ಗಿದ್ದು, ಆಟೊ ಜಖಂಗೊಂಡಿದೆ. ರಾಜಕುಮಾರ ರಸ್ತೆಯಲ್ಲಿ ಮರವೊಂದು ಬುಡಸಮೇತ ಉರುಳಿದ್ದು, ವಿದ್ಯುತ್‌ ತಂತಿ ತುಂಡರಿಸಿವೆ. ಸಮೀಪದಲ್ಲಿ ಕಂಬಗಳೂ ನೆಲಕಚ್ಚಿವೆ. ಮಂಚೇಗೌಡನ ಕೊಪ್ಪಲು ಶಾಲೆಯ ಹಿಂಭಾಗದ ರಸ್ತೆಯಲ್ಲಿಯೂ ಮರದ ಕೊಂಬೆ ವಿದ್ಯುತ್‌್ ತಂತಿಯ ಮೇಲೆ ಬಿದ್ದಿವೆ. ಪಾಲಿಕೆಯ ‘ಅಭಯ’ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ, ಕೊಂಬೆ ತೆರವು ಕಾರ್ಯಾಚರಣೆ ನಡೆಸಿದರು.

ಸಾತಗಳ್ಳಿಯಲ್ಲಿ ಉರುಳಿದ ನಾಲ್ಕು ತೆಂಗಿನ ಮರಗಳ ಪೈಕಿ ಒಂದು ಮನೆ ಮೇಲೆ ಬಿದ್ದ ಪರಿಣಾಮ ಹೆಂಚುಗಳು ಪುಡಿಯಾಗಿವೆ. ಅಗ್ರಹಾರದ ಸಯ್ಯಾಜಿರಾವ್‌ ರಸ್ತೆಯ ಸೆಂಥಿಲ್‌ ಟೆಕ್ಸ್‌ಟೈಲ್‌ ಮುಂಭಾಗದಲ್ಲಿ ಭಾರಿ ಗಾತ್ರದ ಕೊಂಬೆಯೊಂದು ರಸ್ತೆಗೆ ಬಿದ್ದಿದೆ. ಇದರಿಂದ ಸುಮಾರು ಒಂದು ಗಂಟೆ ಸಂಚಾರ ಸಮಸ್ಯೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.