ADVERTISEMENT

ಭತ್ತದ ಕಣಜದಲ್ಲಿ ಮೊಳಗಿದ ಕನ್ನಡ ಡಿಂಡಿಮ

ಅಂಗಡಿ, ಮಳಿಗೆಗಳಲ್ಲಿ ಕನ್ನಡ ಧ್ವಜಗಳ ಹಾರಾಟ, ಅನುರಣಿಸಿದ ಕನ್ನಡ ಘೋಷಣೆ , ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 9:10 IST
Last Updated 18 ಫೆಬ್ರುವರಿ 2017, 9:10 IST
ಕೆ.ಆರ್.ನಗರ: ನಗರದ ಬೀದಿಗಳಲ್ಲಿ ಶುಕ್ರವಾರ ಎಲ್ಲೆಲ್ಲೂ ಸಾಹಿತ್ಯ ಹಾಗೂ ಸಂಸ್ಕೃತಿಯ ಸಿಂಚನ. ಕಟ್ಟಡ, ಅಂಗಡಿ, ಮಳಿಗೆಗಳಲ್ಲಿ ಕನ್ನಡ ಧ್ವಜದ ಹಾರಾಟ. ಶಾಲಾ–ಕಾಲೇಜುಗಳ ಮಕ್ಕಳಲ್ಲಿ ಅದೇನೊ ಉತ್ಸುಕತೆ. ಊರಿನ ಜನರಲ್ಲಿ ಕನ್ನಡ ಜಾತ್ರೆಯ ಭಾವನೆ. 
 
ಇದಕ್ಕೆ ವೇದಿಕೆ ಆಗಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಜಿಲ್ಲಾ ಘಟಕ ಆಯೋಜಿಸಿರುವ ಮೂರು ದಿನಗಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ. ಅದಕ್ಕಾಗಿ ಸಿದ್ಧಪಡಿಸಿರುವ ರಾಜಕುಮಾರ್‌ ಬಾನಂಗಳ ಬಯಲು ರಂಗಮಂದಿರದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಉರಿ ಬಿಸಿಲಿನ ವಾತಾವರಣದಲ್ಲೂ ಕನ್ನಡದ ಘೋಷಣೆ ಅನುರಣಿಸುತ್ತಿತ್ತು. 
 
ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರಮುಖ ಬೀದಿಗಳಲ್ಲಿ ಸಂಭ್ರಮ. ರಾಷ್ಟ್ರ, ನಾಡು ಮತ್ತು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಶಾಸಕ ಸಾ.ರಾ.ಮಹೇಶ್, ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್ ಹಾಗೂ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ.ರಾಜಣ್ಣ ಅವರು ಧ್ವಜಾರೋಹಣ ಮಾಡಿದರು.
 
ಸಂಭ್ರಮದ ಮೆರವಣಿಗೆ:  ಕೃಷ್ಣರಾಜೇಂದ್ರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನಕ್ಕೆ ತೆರಳಿದ ಗಣ್ಯರು, ಭುವನೇ ಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
 
ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಅನಂತ ರಾಮು ಅವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಅವರ ಅಕ್ಕ ಪಕ್ಕದಲ್ಲಿ ವೈ.ಡಿ.ರಾಜಣ್ಣ ಹಾಗೂ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿಂಡಿಮ ಶಂಕರ್‌ ಕುಳಿತಿದ್ದರು. ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು, ವಿದ್ಯಾರ್ಥಿ ಗಳು, ಶಿಕ್ಷಕರು, ಸಾರ್ವಜನಿಕರು, ಮುಖಂಡರು ಭಾಗವಹಿಸಿದ್ದರು.
 
ಜಾನಪದ ಕಲಾ ತಂಡಗಳಾದ ವೀರಭದ್ರ ಕುಣಿತ, ಡೊಳ್ಳು ಕುಣಿತ, ಕೋಲಾಟ, ತಮಟೆ ವಾದ್ಯ ಗಮನ ಸೆಳೆದವು. ಪಟ್ಟಣದ ವೃತ್ತಗಳು ಸೇರಿದಂತೆ ಅಲ್ಲಲ್ಲಿ ಹಸಿರು ತಳಿರು ತೋರಣ ಕಟ್ಟಲಾಗಿತ್ತು.  ಮೆರವಣಿಗೆಯು ಆವರಣದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ 11.30ರ ವೇಳೆಗೆ ವೇದಿಕೆ ತಲುಪಿತು. 
 
ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕ ಸುಧೀರ್‌ ಮತ್ತು ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್‌ ಅವರು ಸಮ್ಮೇಳನ ಉದ್ಘಾಟಿಸಿದರು. ಕಾಂಗ್ರೆಸ್‌ ಮುಖಂಡ ಎಚ್‌.ವಿಶ್ವನಾಥ್‌ ಅವರು ನಗಾರಿ ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
 
ಸಾ.ರಾ.ಮಹೇಶ್‌ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ತೋಟೇಗೌಡರ ‘ಜನಪ್ರಿಯ ರಾಮಾಯಣ’ ಕೃತಿಯನ್ನು ಪ್ರೊ.ಸಿ.ಪಿ.ಕೆ ಬಿಡುಗಡೆಗೊಳಿಸಿದರು. ನಿವೃತ್ತ ಶಿಕ್ಷಕ ವೈ.ಎಸ್‌.ಸುಬ್ರಹ್ಮಣ್ಯ ಅವರ ‘ಸಾಹಿತ್ಯ ವಿಚಾರ ತರಂಗಿಣಿ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್‌, ಉಪಾಧ್ಯಕ್ಷೆ ನಾಗಮ್ಮ ನಾಗರಾಜು, ಜಾನಪದ ವಿದ್ವಾಂಸ ಸ.ಚ.ಮಹದೇವ ನಾಯಕ, ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ರಾಜಶೇಖರ ಕದಂಬ, ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್‌, ಮಡ್ಡೀಕೆರೆ ಗೋಪಾಲ್‌ ಇದ್ದರು.  
 
ಮೊಸರನ್ನ, ಬಾತ್‌, ಮೈಸೂರು ಪಾಕ್‌...
ಸಮ್ಮೇಳನಕ್ಕೆ ಬಂದ ಕನ್ನಡಾಭಿಮಾನಿಗಳಿಗೆ ರೇಡಿಯೊ ಮೈದಾನದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಬಾತ್, ಮೊಸರನ್ನ, ಮೈಸೂರು ಪಾಕ್ ನೀಡಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಊಟ ಸವಿದರು.  ಗಣ್ಯವ್ಯಕ್ತಿಗಳಿಗಾಗಿ ಪಟ್ಟಣದ ಗುರುಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಕೂಡ ಬಾತ್, ಅನ್ನ ಸಾಂಬರ್, ಮೊಸರು ಬಜ್ಜಿ, ಹುಡಿಪಲ್ಯ, ಜಾಂಗೀರ್, ಹಪ್ಪಳ, ಉಪ್ಪಿನ ಕಾಯಿ, ಮೊಸರು ನೀಡಲಾಯಿತು.

ವೇದಿಕೆಯೊಳಕ್ಕೆ ನುಗ್ಗಿದ ದೂಳು...
ಸಮ್ಮೇಳನ ನಡೆಯುತ್ತಿರುವ ರಾಜಕುಮಾರ್‌ ಬಾನಂಗಳ ಬಯಲು ರಂಗಮಂದಿರದ ಆವರಣ ದೂಳುಮಯವಾಗಿದೆ. ನೀರು ಹಾಯಿಸದ ಕಾರಣ ಈ ಸಮಸ್ಯೆ ನಿರ್ಮಾಣವಾಗಿದೆ.
ಜೋರು ಗಾಳಿ ಬಂದಾಗ ದೂಳು ವೇದಿಕೆಯೊಳಗೆ ನುಗ್ಗುತ್ತಿತ್ತು. ಹೀಗಾಗಿ, ಸಭಿಕರು ಮತ್ತೊಂದು ದಿಕ್ಕಿಗೆ ತಿರುಗಿ ಕುಳಿತರು. ಕೆಲವರು ಮುಖವನ್ನು ಕರ್ಚೀಫ್‌ನಿಂದ ಮುಚ್ಚಿಕೊಂಡು ಕುಳಿತು ಭಾಷಣ ಕೇಳಿದರು. ಆಸ್ತಮಾ ಹಾಗೂ ಉಸಿರಾಟದ ತೊಂದರೆ ಇದ್ದವರು ಪರದಾಡಿದರು.
 
ಇದು ನಮ್ಮೂರ ಸಮ್ಮೇಳನ
* ನಮ್ಮೂರಲ್ಲಿ ಸಮ್ಮೇಳನ ನಡೆದಿದ್ದು ಖುಷಿ ನೀಡಿದೆ. ಸಾಹಿತಿಗಳಾದ ಪ್ರೊ.ಕೆ.ಅನಂತರಾಮು, ಪ್ರೊ.ಸಿ.ಪಿ.ಕೆ ಅವರನ್ನು ನೋಡಿಯೇ ಇರಲಿಲ್ಲ. ಇಂದು ಅವರನ್ನು ನೋಡಲು, ಭಾಷಣ ಕೇಳಲು ಅವಕಾಶ ಲಭಿಸಿತು
 -ಆರ್.ಚಂದನಾ, ವಿದ್ಯಾರ್ಥಿನಿ

ಪಾಲ್ಗೊಳ್ಳುವಿಕೆ ಹೆಚ್ಚಬೇಕಿತ್ತು
* 31 ವರ್ಗಗಳ ಬಳಿಕ ನಮ್ಮೂರಲ್ಲಿ ಸಮ್ಮೇಳನ ನಡೆಯುತ್ತಿದೆ. ಆದರೆ, ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ಹೆಚ್ಚು ಭಾಗಿಯಾಗದೆ ಇರುವುದು ಬೇಸರ ತರಿಸಿದೆ. ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಮಾಡಬೇಕಿತ್ತು                   
-ಜಿ.ರಮೇಶ್, ಮುಖ್ಯ ಶಿಕ್ಷಕ

ರೈತರಿಗೆ  ಉಪಯೋಗ ಇಲ್ಲ
* ಕೆ.ಆರ್‌.ನಗರ ತಾಲ್ಲೂಕು ಭತ್ತದ ಕಣಜ ಎಂದು ಮಾತು ಮಾತಿಗೂ ಹೇಳುತ್ತೇವೆ. ಆದರೆ, ಇಲ್ಲಿ ರೈತರಿಗೆ ಉಪಯೋಗವಾಗುವ ಒಂದು ಮಳಿಗೆಯೂ ಇಲ್ಲ
ಶಂಕರೇಗೌಡ, ರೈತ, ಮೂಡಲಕೊಪ್ಪಲು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.