ADVERTISEMENT

ಭೂಸ್ವಾಧೀನ ಮಾಡುವುದು ರಾಜ್ಯದ ಕೆಲಸ– ಜಯಂತ್ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:36 IST
Last Updated 21 ಸೆಪ್ಟೆಂಬರ್ 2017, 6:36 IST
ಮೈಸೂರಿನಿಂದ ಚೆನ್ನೈಗೆ ಸಂಪರ್ಕ ಬೆಸೆಯುವ ಟ್ರೂ ಜೆಟ್ ವಿಮಾನಯಾನ ಸೇವೆಗೆ ಸಚಿವ ಜಯಂತ್ ಸಿನ್ಹಾ ಬುಧವಾರ ಹಸಿರು ನಿಶಾನೆ ತೋರಿದರು. ಉಪಮೇಯರ್ ರತ್ನಾ ಲಕ್ಷ್ಮಣ, ಸಂಸದ ಪ್ರತಾಪಸಿಂಹ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಟ್ರೂಜೆಟ್ ವಿಮಾನಯಾನ ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಇದ್ದಾರೆ
ಮೈಸೂರಿನಿಂದ ಚೆನ್ನೈಗೆ ಸಂಪರ್ಕ ಬೆಸೆಯುವ ಟ್ರೂ ಜೆಟ್ ವಿಮಾನಯಾನ ಸೇವೆಗೆ ಸಚಿವ ಜಯಂತ್ ಸಿನ್ಹಾ ಬುಧವಾರ ಹಸಿರು ನಿಶಾನೆ ತೋರಿದರು. ಉಪಮೇಯರ್ ರತ್ನಾ ಲಕ್ಷ್ಮಣ, ಸಂಸದ ಪ್ರತಾಪಸಿಂಹ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಟ್ರೂಜೆಟ್ ವಿಮಾನಯಾನ ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಇದ್ದಾರೆ   

ಮೈಸೂರು: ರಾಜ್ಯ ಸರ್ಕಾರ ಭೂಸ್ವಾಧೀನಪಡಿಸಿಕೊಂಡು ಜಮೀನು ನೀಡಿದರೆ ಇಲ್ಲಿನ ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮೈಸೂರು– ಚೆನ್ನೈ ವಿಮಾನಯಾನ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರನ್ ವೇ ವಿಸ್ತರಿಸದೆ ದೊಡ್ಡ ದೊಡ್ಡ ವಿಮಾನಗಳು ಇಲ್ಲಿ ಇಳಿಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಭೂಸ್ವಾಧೀನದ್ದೇ ದೊಡ್ಡ ಸಮಸ್ಯೆ. ರಾಜ್ಯ ಸರ್ಕಾರ ಈ ಕುರಿತು ಆಸಕ್ತಿ ವಹಿಸಿ ಕೂಡಲೇ ಭೂಸ್ವಾಧೀನಪಡಿಸಿಕೊಂಡು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ನೀಡಿದರೆ ರನ್‌ವೇ ವಿಸ್ತರಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಸಾಗುವುದಕ್ಕೆ ಅಂಡರ್‌ಪಾಸ್ ನಿರ್ಮಿಸಲಾಗುವುದು. ಅದಕ್ಕೂ ಮೊದಲು ರಾಜ್ಯ ಸರ್ಕಾರ ಭೂಸ್ವಾಧೀನದತ್ತ ಗಮನಹರಿಸಬೇಕಿದೆ’ ಎಂದು ಹೇಳಿದರು.

ರಾಜ್ಯದ ಇನ್ನುಳಿದ ನಗರಗಳಲ್ಲೂ ಇದೇ ಸಮಸ್ಯೆ ಇದೆ. ಅಲ್ಲೂ ಅಗತ್ಯ ಪ್ರಮಾಣದಷ್ಟು ಭೂಮಿಯನ್ನು ರಾಜ್ಯ ನೀಡಿದರೆ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

ADVERTISEMENT

ಇಲ್ಲೂ ಉತ್ತರಪ್ರದೇಶದ ಫಲಿತಾಂಶ: ‘ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ಉತ್ತರಪ್ರದೇಶ ರೀತಿಯಲ್ಲಿ ಫಲಿತಾಂಶವೇ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರ ವಿಕಾಸದ ರಾಜನೀತಿ ಜನರ ವಿಶ್ವಾಸದ ರಾಜನೀತಿಯಾಗಿ ಬದಲಾಗಿದೆ. ಇದಕ್ಕೆ ಹಲವು ರಾಜ್ಯಗಳ ಚುನಾವಣಾ ಫಲಿತಾಂಶವೇ ಕೈಗನ್ನಡಿ. ಇದೂ ರಾಜ್ಯದಲ್ಲೂ ಹೊರಹೊಮ್ಮುವುದರಲ್ಲಿ ಅನುಮಾನ ಇಲ್ಲ’ ಎಂದು ಹೇಳಿದರು.

ದನ ಮೇಯಿಸಲು ಆಗದ ವಿಮಾನ ನಿಲ್ದಾಣ!
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪಸಿಂಹ, ‘ಹಿಂದೆ ಈ ವಿಮಾನ ನಿಲ್ದಾಣ ದನ ಮೇಯಿಸಲೂ ಸಾಧ್ಯವಾಗದಂತಹ ಸ್ಥಿತಿಯಲ್ಲಿತ್ತು. ಈಗ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಿಂದ ವಿಮಾನಯಾನ ಸೇವೆ ಆರಂಭವಾಗಿದೆ. ಇದರಿಂದ ಜನರಿಗೆ ನಾನು ಮುಖ ತೋರಿಸಲು ಸಾಧ್ಯವಾಯಿತು’ ಎಂದರು.

‘ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡುತ್ತಾರೆ. ಉಳಿದಂತೆ, ಅವರು ಮೈಸೂರಿನ ಅಭಿವೃದ್ಧಿಗೆ ಶ್ರಮಿಸುತ್ತಾರೆ’ ಎಂದು ಶ್ಲಾಘಿಸಿದರು.

ಟ್ರೂಜೆಟ್ ವಿಮಾನಯಾನ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್, ವಿಮಾನಯಾನ ಸಚಿವಾಲಯದ ದಕ್ಷಿಣದ ವಲಯದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ್, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್‌ಕುಮಾರ್, ಮೇಯರ್ ಎಂ.ಜೆ.ರವಿಕುಮಾರ್ ಇದ್ದರು.

ಬಿಎಸ್‌ಎನ್‌ಎಲ್‌ನಿಂದ 5ಜಿ ಸೇವೆ: ವಿಮಾನ ನಿಲ್ದಾಣದಲ್ಲಿ ಬಿಎಸ್‌ಎನ್‌ಎಲ್‌ 5ಜಿ ವೈಫೈ ಸೇವೆಯನ್ನು ಆರಂಭಿಸಿದೆ. ಮೊದಲ 30 ನಿಮಿಷ ಸಂಪೂರ್ಣ ಉಚಿತ ಇರಲಿದೆ. ಇದರ ವೇಗ 2 ಎಂಬಿಪಿಎಸ್‌ನಿಂದ 4 ಎಂಬಿಪಿಎಸ್‌ವರೆಗೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.