ADVERTISEMENT

ಮಂಗಲ ಗೋಶಾಲೆಗೆ ಶಾಸಕರ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:38 IST
Last Updated 2 ಜನವರಿ 2017, 11:38 IST

ಚಾಮರಾಜನಗರ: ತಾಲ್ಲೂಕಿನ ಮಂಗಲ ಗ್ರಾಮದಲ್ಲಿನ ಗೋಶಾಲೆಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ  ಶನಿವಾರ ಭೇಟಿ ನೀಡಿದರು. ಗ್ರಾಮದಲ್ಲಿ 20 ದಿನಗಳ ಹಿಂದೆ ಪ್ರಾರಂಭಿಸಲಾಗಿರುವ ಗೋಶಾಲೆಯಲ್ಲಿ ಸಮರ್ಪಕವಾಗಿ ಜಾನುವಾರುಗಳಿಗೆ ಮೇವು ಮತ್ತು ನೀರನ್ನು ಪೂರೈಸಲಾಗುತ್ತಿದೆಯೇ ಎಂದು ಅವರು ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಹಾಗಾಗಿ, ತಾಲ್ಲೂಕು ಕೇಂದ್ರದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯು ಕಳೆದ ಐದು ವರ್ಷಗಳಿಂದ ನಿರಂತರ ಬರಗಾಲ ಎದುರಿಸುತ್ತಿದೆ. ಬರ ಎದುರಿಸಲು ಜಿಲ್ಲಾಡಳಿತ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ 4 ತಾಲ್ಲೂಕು ಕೇಂದ್ರಗಳಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ ಎಂದರು.

ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಪ್ರಾರಂಭಿಸಿರುವ ಗೋಶಾಲೆ ಜಿಲ್ಲೆಯಲ್ಲಿ ದೊಡ್ಡದಾಗಿದೆ. ಇಲ್ಲಿಗೆ ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚಿನ ಜಾನುವಾರುಗಳನ್ನು ಕರೆತರುತ್ತಿದ್ದಾರೆ. ಹಾಗಾಗಿ, ಜಾನುವಾರುಗಳಿಗೆ ಸಮರ್ಪಕವಾಗಿ ಮೇವು, ಕುಡಿಯುವ ನೀರು, ಜೋಳದ ಕಡ್ಡಿ ಹಾಗೂ ಔಷಧಿ ನೀಡಲು  ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾದರೆ ಅಗತ್ಯಕ್ಕೆ ಅನುಗುಣವಾಗಿ ಗೋಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುದು ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತರು, ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.