ADVERTISEMENT

ಮಕ್ಕಳಲ್ಲಿ ದೇಶಭಕ್ತಿ, ಸದ್ಗುಣ ಬೆಳೆಸಿ

ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷ ಡಾ.ಕೆ.ಅನಂತರಾಮು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 7:38 IST
Last Updated 20 ಫೆಬ್ರುವರಿ 2017, 7:38 IST

ಕೆ.ಆರ್.ನಗರ: ಮಕ್ಕಳ ಹೃದಯದಲ್ಲಿ ದೇಶ ಭಕ್ತಿ, ಸದ್ಗುಣ ಬೆಳೆಸಬೇಕಾಗಿದೆ ಎಂದು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಅನಂತ ರಾಮು ಸಲಹೆ ನೀಡಿದರು.

ಪಟ್ಟಣದ ಡಾ.ರಾಜ್ ಕುಮಾರ್ ಬಾನಂಗಳ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ದಲ್ಲಿ ಅವರು ಮಾತನಾಡಿದರು.

ಮೂರು ದಿನ ನಡೆದ ಸಮ್ಮೇಳನ ಅಚ್ಚುಕಟ್ಟಾಗಿ, ಯಾವುದಕ್ಕೂ ಕೊರತೆ ಇಲ್ಲದಂತೆ ಯಶಸ್ವಿಯಾಗಿ ನಡೆದಿದೆ. ಕೃಷ್ಣರಾಜನಗರದಲ್ಲಿ ನಡೆದ ಈ ಸಮ್ಮೇಳನ ಇತಿಹಾಸ, ಇದು ಸ್ವರ್ಣಾಕ್ಷರ ದಲ್ಲಿ ಬರೆದಿಡುವಂತಹದ್ದು ಎಂದರು.

ಕವಿಗೋಷ್ಠಿ, ಚುಟುಕು ಕವಿಗೋಷ್ಠಿ ಎಲ್ಲವೂ ಚೆನ್ನಾಗಿಯೇ ನಡೆದಿದೆ. ಸಮ್ಮೇ ಳನಕ್ಕೆ ಬಂದಿದ್ದ ಡಾ.ಸಿ.ಪಿ. ಕೃಷ್ಣಕುಮಾರ್ ಅವರಂಥ ಸಾಹಿತಿಗಳ ಸಾಹಿತ್ಯ ಅಸ್ಮರಣೀಯವಾದುದು. ‘ಮುಪ್ಪಿನಲ್ಲಿ ರೋಗಗಳು ಬರುವುದು ಸಹಜ, ಒಂದು ವೇಳೆ ಮುಪ್ಪಿನಲ್ಲಿ ರೋಗ ಬರದೇ ಇದ್ದರೇ ಮುಪ್ಪೇ ಒಂದು ರೋಗ’ ಎಂಬ ಅವರ ಚುಟುಕು ಸಾಹಿತ್ಯ ಚೆನ್ನಾಗಿದೆ. ಇಲ್ಲಿ ವಾಚಿಸಿದ ಎಲ್ಲ ಸಾಹಿತಿಗಳ ಲೇಖನಗಳ ಬಗ್ಗೆ ಆಯೋಜಕರು ಸ್ಮರಣ ಸಂಚಿಕೆ ಹೊರ ತರಬೇಕು ಎಂದರು.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸಾಧಕರಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಶಾಸಕ ಸಾ.ರಾ.ಮಹೇಶ್ ಮಾತನಾಡಿದರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಕಾಂಗ್ರೆಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್, ಎ.ಎಸ್. ಚನ್ನಬಸಪ್ಪ, ನವನಗರ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜಿ.ಪಂ ಸದಸ್ಯ ಡಿ.ರವಿಶಂಕರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ. ರಾಜಣ್ಣ, ಕಾರ್ಯದರ್ಶಿ ಕೆ.ಎಸ್. ನಾಗರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಡಿಂಡಿಮ ಶಂಕರ್, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ಇತರರು ಇದ್ದರು.

ಸಂಜೆ 4 ಗಂಟೆಗೆ ಪ್ರಾರಂಭವಾಗ ಬೇಕಿದ್ದ ಕಾರ್ಯಕ್ರಮ 7.20ಕ್ಕೆ ಪ್ರಾರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.