ADVERTISEMENT

ಮಹಾರಾಣಿಗೆ ‘ಲೀಡ್‌ ಕಾಲೇಜು’ ಪಟ್ಟ

ಕೆ.ಓಂಕಾರ ಮೂರ್ತಿ
Published 27 ಮೇ 2017, 5:34 IST
Last Updated 27 ಮೇ 2017, 5:34 IST
ಮಹಾರಾಣಿ ಕಲಾ ಕಾಲೇಜಿನ ಸಾಂದರ್ಭಿಕ ಚಿತ್ರ
ಮಹಾರಾಣಿ ಕಲಾ ಕಾಲೇಜಿನ ಸಾಂದರ್ಭಿಕ ಚಿತ್ರ   

ಮೈಸೂರು: ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳ ಸಮಗ್ರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯು ಮಹಾರಾಣಿ ಮಹಿಳಾ ಸರ್ಕಾರಿ ಕಲಾ ಕಾಲೇಜಿಗೆ ‘ಲೀಡ್‌ ಕಾಲೇಜು’ ಜವಾಬ್ದಾರಿ ನೀಡಿದೆ.

ಜಿಲ್ಲೆಗೊಂದು ‘ಮಾರ್ಗದರ್ಶಿ ಬ್ಯಾಂಕ್‌’ ಇರುವಂತೆ ಈ ಲೀಡ್‌ (ಪ್ರವರ್ತಕ) ಕಾಲೇಜು ಕಾರ್ಯನಿರ್ವಹಿಸಲಿದೆ. ಈ ಕಾಲೇಜಿನ ಪ್ರಾಂಶುಪಾಲರು ಉಳಿದೆಲ್ಲಾ ಕಾಲೇಜುಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಇಲಾಖೆಯ ಶೈಕ್ಷಣಿಕ ಕಾರ್ಯಗಳನ್ನು ಸಂಯೋಜಿಸಬೇಕು. ಮುಂದಿನ ಮೂರು ವರ್ಷಗಳವರೆಗೆ ಕಾಲೇಜುಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮಾರ್ಗದರ್ಶನ ನೀಡಬೇಕು.

‘ಪ್ರತಿ ಜಿಲ್ಲೆಯಲ್ಲಿ ಲೀಡ್‌ ಕಾಲೇಜು ಗುರುತಿಸಲಾಗಿದೆ. ಹಾಗೆಯೇ, ಜಿಲ್ಲೆಯಲ್ಲಿ ಮಹಾರಾಣಿ ಕಾಲೇಜಿಗೆ ಈ ಅವಕಾಶ ನೀಡಲಾಗಿದೆ. ಗುಣಮಟ್ಟ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಉಳಿದ ಕಾಲೇಜುಗಳಿಗೆ ಮಾದರಿಯಾಗಿರಬೇಕು. ಶೈಕ್ಷಣಿಕ ಪ್ರಗತಿ ಬಗ್ಗೆ ಇಲಾಖೆಗೆ ಮಾಹಿತಿ ನೀಡುತ್ತಿರಬೇಕು’ ಎಂದು ಇಲಾಖೆ ಮೈಸೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಎಂ.ಕೆ.ಉಮಾನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿಚಾರ ಸಂಕಿರಣ, ಸಮ್ಮೇಳನ, ಸಭೆ, ತರಬೇತಿ ಕಾರ್ಯಕ್ರಮಗಳಿಗೆ ಮಾರ್ಗದರ್ಶಿ ಕಾಲೇಜು ತನ್ನ ಆವರಣ, ಸಭಾಂಗಣ, ಕೊಠಡಿಯನ್ನು ಒದಗಿಸಬೇಕು. ನಾಗರಿಕ ಸೇವಾ ಪರೀಕ್ಷೆಗಳ ಮೂಲಕ ಆಡಳಿತಾತ್ಮಕ ಸೇವೆಗಳ ನೇಮಕಾತಿ ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕೂಡ ಈ ಕಾಲೇಜಿನ ಹೊಣೆಗಾರಿಕೆ ಆಗಿರುತ್ತದೆ.

ಜತೆಗೆ, ಯುಜಿಸಿ, ನ್ಯಾಕ್‌, ರೂಸಾ ಹಾಗೂ ಇಲಾಖೆಯು ಆಗಿಂದಾಗ್ಗೆ ವಹಿಸುವ ಯೋಜನೆಗಳನ್ನು ಜಿಲ್ಲಾಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಅಧ್ಯಾಪಕರ ಸಮಿತಿಯೊಂದನ್ನು ರಚಿಸಿಕೊಳ್ಳಬೇಕು.‘ಜಿಲ್ಲೆಯ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಸೇವಾಕೇಂದ್ರವಾಗಿ ಕಾರ್ಯನಿರ್ವಹಿಸುವಂತೆ ಅಧಿಸೂಚನೆ ಬಂದಿದೆ.

ಜವಾಬ್ದಾರಿಗಳ   ಪಟ್ಟಿಯೊಂದನ್ನು ನೀಡಿದ್ದಾರೆ. ಪ್ರಾಂಶುಪಾಲರ ಸಭೆ, ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು, ಆಡಳಿತ ಮಂಡಳಿ ಪ್ರತಿನಿಧಿಗಳಿಗೆ ಒಂದರಿಂದ ಮೂರು ದಿನಗಳ ಅವಧಿಯ ತರಬೇತಿ ಕಾರ್ಯಕ್ರಮ ಆಯೋಜಿಸಲು ಸೂಚನೆ ಬಂದಿದೆ’ ಎಂದು ಮಹಾರಾಣಿ ಕಲಾ ಕಾಲೇಜು ಪ್ರಾಂಶುಪಾಲ ಬಿ.ಟಿ.ವಿಜಯ್‌ ಮಾಹಿತಿ ನೀಡಿದರು.

ಲೀಡ್‌ ಮಾನ್ಯತೆ
ಕಾಲೇಜು ಶಿಕ್ಷಣ ಇಲಾಖೆಯ ಎಲ್ಲಾ ಮಾನದಂಡಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯ ಹಾಗೂ ಉತ್ತಮ ಶೈಕ್ಷಣಿಕ ಕಲಿಕಾ ವಾತಾವರಣ ಹೊಂದಿರುವುದರಿಂದ ‘ಲೀಡ್‌ ಕಾಲೇಜು’ ಆಗಿ ಮಹಾರಾಣಿ ಕಲಾ ಕಾಲೇಜನ್ನು ಆಯ್ಕೆ ಮಾಡಲಾಗಿದೆ.

ಈ ಕಾಲೇಜಿನಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದಾರೆ. ಬಿ.ಎ ಪದವಿ, 8 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಬೋಧಿಸಲಾಗುತ್ತಿದೆ. 85 ಉಪನ್ಯಾಸಕರು ಇಲ್ಲಿದ್ದು, ನ್ಯಾಕ್‌ ‘ಬಿ’ ದರ್ಜೆ ಮಾನ್ಯತೆ ಹೊಂದಿದೆ.

* * 

ಜಿಲ್ಲೆಯ ಪದವಿ ಕಾಲೇಜುಗಳ ಬಗ್ಗೆ ಇಲಾಖೆ ತುರ್ತು ಮಾಹಿತಿ ಕೋರಿದಾಗ ಲೀಡ್‌ ಕಾಲೇಜು ಒದಗಿಸಬೇಕು. ಮಾರ್ಗದರ್ಶನ ನೀಡುತ್ತಾ ನಾಯಕನಂತೆ ಕಾರ್ಯನಿರ್ವಹಿಸಬೇಕು
ಎಂ.ಕೆ.ಉಮಾನಾಥ್‌
ನಿರ್ದೇಶಕ, ಮೈಸೂರು ಪ್ರಾದೇಶಿಕ ಕಚೇರಿ

* * 

ಹೆಮ್ಮೆಯ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ. ಸದ್ಯದಲ್ಲೇ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಸಲಹೆ ಪಡೆಯುತ್ತೇನೆ, ಕೆಲ ಸೂಚನೆ ನೀಡಲಾಗುವುದು
ಬಿ.ಟಿ.ವಿಜಯ್‌
ಪ್ರಾಂಶುಪಾಲ, ಮಹಾರಾಣಿ ಕಲಾ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.