ADVERTISEMENT

ಮುಂಗಾರು ವಿಫಲ; ರೈತರಲ್ಲಿ ಆತಂಕ

ಕೆ.ಎಸ್.ಗಿರೀಶ್
Published 23 ಜೂನ್ 2017, 8:59 IST
Last Updated 23 ಜೂನ್ 2017, 8:59 IST
ಮುಂಗಾರು ವಿಫಲ; ರೈತರಲ್ಲಿ ಆತಂಕ
ಮುಂಗಾರು ವಿಫಲ; ರೈತರಲ್ಲಿ ಆತಂಕ   

ಮೈಸೂರು: ಮುಂಗಾರು ಮಳೆ ಕಳೆದ ಎರಡು ವರ್ಷದ ಹಾಗೆ ಈ ವರ್ಷವೂ ಜಿಲ್ಲೆಯಲ್ಲಿ ವಿಫಲವಾಗಿದೆ. ಮುಂಗಾರು ಪೂರ್ವದಲ್ಲಿ ಅಬ್ಬರಿಸಿದ ಮಳೆಯಿಂದ ಖುಷಿಯಾದ ರೈತರು ಹೆಸರು, ಉದ್ದು, ಅಲಸಂದೆ, ತೊಗರಿ, ಜೋಳ... ಹೀಗೆ ಹಲವು ಬೆಳೆಗಳನ್ನು ಬಿತ್ತನೆ ಮಾಡಿದರು. ಆದರೆ, ಮುಂಗಾರು ಪ್ರವೇಶದ ನಂತರ ಮೋಡ ಮುಸುಕಿದ ವಾತಾವರಣ ಬಿಟ್ಟರೆ ಜಿಲ್ಲೆಯ ಎಲ್ಲೂ ಮಳೆಯಾಗಿಲ್ಲ.

ಜೂನ್ 18ರವರೆಗೆ ಜಿಲ್ಲೆಯಲ್ಲಿ 61.9 ಮಿ.ಮೀ ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ಬಂದಿರುವುದು ಕೇವಲ 25.7 ಮಿ.ಮೀ ಮಾತ್ರ. 36.2 ಮಿ.ಮೀನಷ್ಟು ಮಳೆ ಕೊರತೆ ಎದುರಾಗಿದೆ.

ಲೆಕ್ಕದಲ್ಲಿ ಹೆಚ್ಚು ಮಳೆ: ವಾರ್ಷಿಕ ಮಳೆಯ ಲೆಕ್ಕಾಚಾರ ತೆಗೆದುಕೊಂಡರೆ ಇಲ್ಲಿಯವರೆಗೆ ಸುರಿಯಬೇಕಿದ್ದ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿದೆ ಎಂಬ ಅಂಶ ಸಿಗುತ್ತದೆ. ಬಿದ್ದಿರುವ ಮಳೆ ಎಲ್ಲವೂ ಮುಂಗಾರುಪೂರ್ವದಲ್ಲಿ ಬಂದಿರುವುದೇ ಆಗಿದೆ. ಮುಂಗಾರು ಪ್ರವೇಶದ ನಂತರ ಮೋಡಗಳು ಬಂದರೂ ಮಳೆ ಸುರಿಯಲಿಲ್ಲ. ಜಿಲ್ಲೆಯ 7 ತಾಲ್ಲೂಕುಗಳ ಪೈಕಿ 6ರಲ್ಲಿ ಶೇ 50ಕ್ಕಿಂತ ಹೆಚ್ಚಿನ ಮಳೆ ಕೊರತೆಯಾಗಿದೆ.

ADVERTISEMENT

ಆತಂಕದಲ್ಲಿ ರೈತರು: ಮುಂಗಾರು ಪೂರ್ವದ ಅಬ್ಬರವನ್ನು ನಂಬಿದ ರೈತರು ಶೇ 55ಕ್ಕಿಂತಲೂ ಹೆಚ್ಚಿನ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಸಿದರು. ಹೆಚ್ಚಾಗಿ ಉದ್ದು ಬೆಳೆಯನ್ನು ರೈತರು ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆ 9,170 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬಿತ್ತನೆಯಾಗಬಹುದು ಎಂದು ಅಂದಾಜಿಸಿತ್ತು.

ಆದರೆ, ಬಿತ್ತನೆ ನಡೆದಿದ್ದು 13,179 ಹೆಕ್ಟೇರ್ ಪ್ರದೇಶದಲ್ಲಿ. ಇದೇ ರೀತಿ ಮುಸುಕಿನಜೋಳ 32,542 ಹೆಕ್ಟೇರ್, ಹತ್ತಿ 46,743, ಜೋಳ 5,481, ರಾಗಿ 2,677, ಅಲಸಂದೆ 30,991, ಹೆಸರು 6,724, ಇತರೆ ಬೆಳೆಗಳನ್ನು 13,117 ಹಾಗೂ ಹೊಗೆಸೊಪ್ಪು 70,807 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಈ ಎಲ್ಲ ಬೆಳೆಗಳಿಗೂ ಜೂನ್‌ ತಿಂಗಳಿನಲ್ಲಿ ಸಾಕಾಗುವಷ್ಟು ಮಳೆ ಬಂದಿಲ್ಲ. ನಂಜನಗೂಡು ಹೋಬಳಿಯಲ್ಲಿ ಶೇ 83ರಷ್ಟು ಮಳೆ ಕೊರತೆಯಾಗಿದೆ. ಇಲ್ಲಿ ಮಳೆಯಾಶ್ರಿತದಲ್ಲಿ ಬಿತ್ತನೆ ಮಾಡಿರುವ ಬೆಳೆ ಬಾಡಲು ಆರಂಭಿಸಿದೆ. ದೊಡ್ಡ ಕವಲಂದೆ ಶೇ 86ರಷ್ಟು ಮಳೆ ಕೊರತೆ ಎದುರಾಗಿದೆ.

ಜಿಲ್ಲೆಯ ಐದಾರು ಹೋಬಳಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಹೋಬಳಿಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಳೆ ಕೊರತೆ ಆಗಿದೆ. ಹಲವು ಹೋಬಳಿಗಳಲ್ಲಿ ಶೇ 30ರಷ್ಟು ಮಾತ್ರ ಮಳೆ ಬಂದಿದೆ.

ದಿಕ್ಕು ಬದಲಿಸಿದ ಮೋಡಗಳು!
ಮುಂಗಾರು ಮಾರುತಗಳು ಹೊತ್ತು ತರುವ ಮಳೆ ಮೋಡಗಳು ಈ ಬಾರಿ ದಿಕ್ಕು ಬದಲಿಸಿರುವುದು ಉಪಗ್ರಹ ಚಿತ್ರಗಳಿಂದ ವೇದ್ಯವಾಗಿದೆ. ಬಂಗಾಳಕೊಲ್ಲಿಯಲ್ಲಿ ಮೋಡಗಳು ದಟ್ಟವಾಗಿ ಸಾಂದ್ರಿತಗೊಂಡು ತಟಸ್ಥವಾಗಿ ನಿಂತಿವೆ.

ಇದರಿಂದ ಅರಬ್ಬಿ ಸಮುದ್ರದ ಕಡೆಯಿಂದ ಬರುವ ಮಳೆ ಮೋಡಗಳು ರಾಜ್ಯದ ದಕ್ಷಿಣ ಒಳನಾಡು ಹಾಗೂ ತಮಿಳುನಾಡಿನ ಕಡೆಗೆ ಬಾರದೇ ಉತ್ತರ ಕರ್ನಾಟಕ, ಮಹಾರಾಷ್ಟ್ರದ ಕಡೆಗೆ ದಿಕ್ಕು ಬದಲಿಸಿವೆ.

ಇದರಿಂದ ಹೆಚ್ಚು ಮಳೆ ಆ ಭಾಗದಲ್ಲಿ ಸುರಿಯುತ್ತಿದೆ. ಜೂನ್ 27ರವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಬಂಗಾಳಕೊಲ್ಲಿಯಲ್ಲಿರುವ ಮೋಡಗಳು ಚದುರಿದರೆ ಮುಂಗಾರು ಮಾರುತ ಸರಾಗವಾಗಿ ದಕ್ಷಿಣ ಒಳನಾಡಿನ ಕಡೆಗೆ ಬರುವ ನಿರೀಕ್ಷೆ ಇದೆ ಎಂದು ನಾಗನಹಳ್ಳಿ ಭಾರತೀಯ ಹವಾಮಾನ ಇಲಾಖೆಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ. ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.