ADVERTISEMENT

ಮುಖ್ಯಮಂತ್ರಿ ಪಾತ್ರವೂ ಇದೆ: ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:21 IST
Last Updated 17 ಮಾರ್ಚ್ 2018, 9:21 IST
ಶ್ರೀನಿವಾಸ ಪ್ರಸಾದ್‌
ಶ್ರೀನಿವಾಸ ಪ್ರಸಾದ್‌   

ಮೈಸೂರು: ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮುಖ್ಯಮಂತ್ರಿ ಬಲಗೈ ಬಂಟ. ಲೋಕೋಪಯೋಗಿ ಇಲಾಖೆ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಪಾತ್ರವೇ ಹೆಚ್ಚು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಶುಕ್ರವಾರ ಇಲ್ಲಿ ಆರೋಪಿಸಿದರು.

ಮುಖ್ಯಮಂತ್ರಿ ಬೆಂಬಲ, ಆಶೀರ್ವಾದ ಇಲ್ಲದೆ ಲೋಕೋಪ ಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಮಹದೇವಪ್ಪ 10 ಪರ್ಸೆಂಟ್ ಹಾಗೂ ಸಿದ್ದರಾಮಯ್ಯ 90 ಪರ್ಸೆಂಟ್ ಕಮಿಷನ್ ಪಡೆಯು ತ್ತಾರೆ ಎಂದು ಟೀಕಿಸಿದರು.

ಸಂಸದ ವೀರಪ್ಪ ಮೊಯಿಲಿ ಮಾಡಿರುವ ಟ್ವೀಟ್‌ ನಲ್ಲಿ ಸತ್ಯವಿದೆ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ಈ ಟ್ವೀಟ್‌ಗೆ ಉತ್ತರಿಸಬೇಕು. ಜನರು ಎಲ್ಲವನ್ನು ನೋಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ADVERTISEMENT

ಮಹದೇವಪ್ಪ ಅವರು ಲೂಟಿ ಮಾಡುವುದರಲ್ಲಿ ದಾಖಲೆ ನಿರ್ಮಿಸಿ ದ್ದಾರೆ. ಯಾರಿಗೂ ಗೊತ್ತಾಗದಂತೆ ಸಾವಿರಾರು ಕೋಟಿ ರೂಪಾಯಿ ನುಂಗಿಹಾಕಿದ್ದಾರೆ ಎಂದು ಟೀಕಿಸಿದರು.

‘ದುಡ್ಡಿನ ರಾಜಕೀಯವನ್ನು ಕಾಂಗ್ರೆಸ್‌ ಬಗೆಹರಿಸಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರ ಜತೆ ಸಂಬಂಧ ಹೊಂದಿರುವ ಲೋಕೋಪ ಯೋಗಿ ಸಚಿವರು ಮುಂಬರುವ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಗಳನ್ನು ನಿರ್ಧರಿಸಲಾಗದು’ ಎಂದು ಮೊಯಿಲಿ ಗುರುವಾರ ರಾತ್ರಿ ‘ಟ್ವೀಟ್‌’ ಮಾಡಿ ಬಳಿಕ ಅಳಿಸಿ ಹಾಕಿದ್ದರು.

ಸಿಎಂ ಕಾಲೆಳೆದ ಪ್ರತಾಪಸಿಂಹ: ಸಂಸದ ಪ್ರತಾಪಸಿಂಹ ಅವರು ಮೊಯಿಲಿ ಅವರ ‘ಟ್ವೀಟ್‌’ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಈಗ ಗೊತ್ತಾಯ್ತಾ, ಅವರು ‘ಸಿದ್ದರಾಮಯ್ಯ’ ಅಲ್ಲ ‘ಸೀದಾ ರುಪಯ್ಯಾ’ ಅಂತ ಮೋದೀಜಿ ಯಾಕೆ ಹೇಳಿದ್ರು ಅಂತ? ಎಂದು ‘ಟ್ವೀಟ್‌’ ಮಾಡಿದ್ದಾರೆ.

ಮೊಯಿಲಿ ಟ್ವೀಟ್‌ನಿಂದ ಆಗಿರುವ ಮುಜುಗರ ತಪ್ಪಿಸಿಕೊಳ್ಳಲು ಸರ್ಕಾರವು ಕಾವೇರಿ ವಿಷಯಕ್ಕೆ ಸಂಬಂಧಿಸಿದ ಸಭೆಯನ್ನೇ ಮುಂದೂಡಿದೆ ಎಂದು ವ್ಯಂಗ್ಯವಾಡಿದ್ದಾರೆ.

‘ಟ್ವೀಟ್‌ ನೋಡಿ ಸಂತಸವಾಯಿತು’
ಮೊಯಿಲಿ ಅವರ ‘ಟ್ವೀಟ್‌’ ನೋಡಿ ಸಂತಸವಾಯಿತು. ಅವರು ನಿಜವನ್ನೇ ಹೇಳಿದ್ದಾರೆ. ಕಾಂಗ್ರೆಸ್‌ನವರು ಎಲ್ಲವನ್ನೂ ಮಾರಾಟ ಮಾಡಿ ಈಗ ಟಿಕೆಟ್‌ ಮಾರಾಟಕ್ಕೆ ಮುಂದಾಗಿರುವುದು ರಾಜ್ಯದ ದುರ್ದೈವ ಎಂದು ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಪ್ರತಿಕ್ರಿಯಿಸಿದ್ದಾರೆ.

ಮಹದೇವಪ್ಪ ಅವರು ಮುಖ್ಯಮಂತ್ರಿಗೆ ಖಜಾನೆಯಿದ್ದಂತೆ. ಈಗ ಟಿಕೆಟ್‌ ಮಾರಾಟ ಮಾಡಿ ಖಜಾನೆ ತುಂಬಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.