ADVERTISEMENT

ಮೃಗಾಲಯ ಪ್ರವೇಶಕ್ಕೆ ಒಪ್ಪಿಗೆ ಸಾಧ್ಯತೆ

ಪಕ್ಷಿಗಳ ಎರಡನೇ ಮಾದರಿಯೂ ನೆಗೆಟಿವ್‌; ಹಕ್ಕಿಜ್ವರದ (ಎಚ್‌5ಎನ್‌8 ವೈರಾಣು) ಭಯವಿಲ್ಲ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:23 IST
Last Updated 31 ಜನವರಿ 2017, 7:23 IST
ಮೃಗಾಲಯ ಪ್ರವೇಶಕ್ಕೆ ಒಪ್ಪಿಗೆ ಸಾಧ್ಯತೆ
ಮೃಗಾಲಯ ಪ್ರವೇಶಕ್ಕೆ ಒಪ್ಪಿಗೆ ಸಾಧ್ಯತೆ   

ಮೈಸೂರು: ಹಕ್ಕಿಜ್ವರ (ಎಚ್‌5ಎನ್‌8 ವೈರಾಣು) ಸಂಬಂಧ ಎರಡನೇ ಕಂತಿನಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಪಕ್ಷಿಗಳ ಮಾದರಿ ವರದಿಯೂ ‘ನೆಗೆಟಿವ್‌’ ಬಂದಿದ್ದು ಒಂದೆರಡು ದಿನಗಳಲ್ಲಿ ಚಾಮರಾಜೇಂದ್ರ ಮೃಗಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆ ಇದೆ.

‘ಎರಡು ಹಂತಗಳಲ್ಲಿ ಕಳುಹಿಸಿದ್ದ ಪಕ್ಷಿಗಳ ರಕ್ತ ಹಾಗೂ ಹಿಕ್ಕೆಯ ಮಾದರಿಯಲ್ಲಿ ನೆಗೆಟಿವ್‌ ಫಲಿತಾಂಶ ಬಂದಿದೆ. ಮೃಗಾಲಯಕ್ಕೆ ಪ್ರವೇಶ ಕಲ್ಪಿಸುವ ಬಗ್ಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಪತ್ರ ಬಂದಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೃಗಾಲಯವು ಹಕ್ಕಿಜ್ವರದಿಂದ ಮುಕ್ತವಾಗಿದೆ ಎಂದು ಪಶುವೈದ್ಯಕೀಯ ಇಲಾಖೆಯ ನಿರ್ದೇಶಕರು ಪ್ರಮಾಣೀಕರಿಸಬೇಕು. ಬಳಿಕ ಅರಣ್ಯ ಇಲಾಖೆ ಕಾರ್ಯದರ್ಶಿಯವರು ಮೃಗಾಲಯವನ್ನು ತೆರೆಯಲು ಅನುಮತಿ ನೀಡಲಿದ್ದಾರೆ. ಈ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ  ಮುಗಿಯಲಿದೆ’ ಎಂದರು.

ಜ. 13ರಂದು ಮೊದಲ ಹಂತದಲ್ಲಿ ಎಲ್ಲಾ ಪಕ್ಷಿಗಳ ರಕ್ತ ಹಾಗೂ ಹಿಕ್ಕೆ ಮಾದರಿಯನ್ನು ಭೋಪಾಲ್‌ನಲ್ಲಿರುವ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈ ಸೆಕ್ಯೂರಿಟಿ ಎನಿಮಲ್‌ ಡಿಸೀಸಸ್‌’ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜೊತೆಗೆ ಮೃಗಾಲಯದಲ್ಲಿನ ಇತರ ವಸ್ತುಗಳ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದು ನೆಗೆಟಿವ್‌ ಎಂದು 27ರಂದು ಫಲಿತಾಂಶ ಬಂದಿತ್ತು.

ಎರಡನೇ ಕಂತಿನಲ್ಲಿ ಜ. 25ರಂದು ಪಕ್ಷಿಗಳ ಮಾದರಿಯನ್ನು ಶೇಖರಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಫಲಿತಾಂಶ ಸೋಮವಾರ ಸಂಜೆ ಮೃಗಾಲಯದ ಅಧಿಕಾರಿಗಳ ಕೈ ಸೇರಿದೆ. ಕೇರಳದಿಂದ ವಲಸೆ ಬಂದ ಪೆಲಿಕಾನ್‌ ಹಾಗೂ ಬಾತುಕೋಳಿ ಸಾವನ್ನಪ್ಪಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಜ. 4ರಂದು ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.