ADVERTISEMENT

ಮೈಸೂರಿನಲ್ಲಿ ಹಾಕಿ ಅಕಾಡೆಮಿ

ವಿವಿಧ ಜಿಲ್ಲೆಗಳಲ್ಲಿ ಸದ್ಯದಲ್ಲೇ ತಲೆ ಎತ್ತಲಿವೆ ಆರು ಕ್ರೀಡಾ ಅಕಾಡೆಮಿ

ಕೆ.ಓಂಕಾರ ಮೂರ್ತಿ
Published 8 ಫೆಬ್ರುವರಿ 2017, 7:58 IST
Last Updated 8 ಫೆಬ್ರುವರಿ 2017, 7:58 IST
ಮೈಸೂರಿನ ಚಾಮುಂಡಿ ವಿಹಾರದಲ್ಲಿರುವ ಹಾಕಿ ಕ್ರೀಡಾಂಗಣ
ಮೈಸೂರಿನ ಚಾಮುಂಡಿ ವಿಹಾರದಲ್ಲಿರುವ ಹಾಕಿ ಕ್ರೀಡಾಂಗಣ   

ಮೈಸೂರು: ರಾಜ್ಯದಲ್ಲಿ ಕ್ರೀಡೆಯನ್ನು ವೃತ್ತಿಪರ ವಾಗಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಆರು ಅಕಾಡೆಮಿ ತೆರೆಯಲು ಕ್ರೀಡಾ ಇಲಾಖೆಯು ಮುಂದಾಗಿದ್ದು, ಸದ್ಯದಲ್ಲೇ ಮೈಸೂರಿನಲ್ಲಿ ಹಾಕಿ ಅಕಾಡೆಮಿ ತಲೆ ಎತ್ತಲಿದೆ.

ಉಡುಪಿಯಲ್ಲಿ ಅಥ್ಲೆಟಿಕ್ಸ್‌, ವಿಜಯಪುರದಲ್ಲಿ ಸೈಕ್ಲಿಂಗ್‌, ಬಳ್ಳಾರಿ ಯಲ್ಲಿ ಫುಟ್‌ಬಾಲ್‌, ಕಲಬುರ್ಗಿಯಲ್ಲಿ ವಾಲಿಬಾಲ್‌ ಹಾಗೂ ಬೆಳಗಾವಿಯಲ್ಲಿ ಕುಸ್ತಿ ಅಕಾಡೆಮಿ ನಿರ್ಮಿಸುವ ನಿಟ್ಟಿನಲ್ಲಿ ಹಣಕಾಸು ಇಲಾಖೆಗೆ ₹ 4 ಕೋಟಿ ಮೊತ್ತದ ಪ್ರಸ್ತಾವ ಕಳುಹಿಸಲಾಗಿದೆ.

‘ಈಗಿರುವ ಕ್ರೀಡಾ ಹಾಸ್ಟೆಲ್‌ಗಳನ್ನೇ ಅಕಾಡೆಮಿಗಳಾಗಿ ಪರಿವರ್ತಿಸಲಾಗು ವುದು. ಈ ಸಂಬಂಧ ಸಮಗ್ರ ಯೋಜನೆ ರೂಪಿಸಿದ್ದು, ಅನುದಾನಕ್ಕಾಗಿ ಹಣಕಾಸು ಇಲಾಖೆಯ ಒಪ್ಪಿಗೆಯನ್ನು ನಿರೀಕ್ಷಿಸಲಾ ಗುತ್ತಿದೆ’ ಎಂದು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್‌ ಅಗರವಾಲ್‌ ‘ಪ್ರಜಾವಾಣಿ’ ತಿಳಿಸಿದರು.

‘ಪ್ರತಿ ಕ್ರೀಡೆಯಲ್ಲಿ ಉದಯೋನ್ಮುಖ 150 ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಲಾಗುವುದು. ವಾಸ್ತವ್ಯ ಹಾಗೂ ತರಬೇತಿ ಜೊತೆಗೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದರು.

ರಾಜ್ಯದ ವಯೋಮಿತಿಯ ಹಾಕಿ ಆಟಗಾರರನ್ನೆಲ್ಲಾ ಮೈಸೂರಿನ ಅಕಾಡೆಮಿಯಲ್ಲಿ ಸೇರಿಸಿ ಒಂದೇ ಕಡೆ ತರಬೇತಿ ನೀಡಲಾಗುತ್ತದೆ. ಒಬ್ಬ ಮುಖ್ಯ ಕೋಚ್‌, ಸಹಾಯಕ ಕೋಚ್‌, ಫಿಜಿಯೊ ಥೆರಪಿ, ಜಿಮ್‌ ತರಬೇತುದಾರರನ್ನು ನೇಮಿಸಲಾಗುತ್ತದೆ. ಪೌಷ್ಟಿಕ ಆಹಾರ ಹಾಗೂ ಇತರ ಸೌಲಭ್ಯ ಒದಗಿಸಲಾಗು ತ್ತದೆ. ಈ ಯೋಜನೆಯು ಒಂದು ವರ್ಷ ದಲ್ಲಿ ಕಾರ್ಯಗತವಾಗಲಿದೆ.

ಸಿಂಥೆಟಿಕ್‌ ಟರ್ಫ್‌: ಚಾಮುಂಡಿ ವಿಹಾರ ಕ್ರೀಡಾ ಸಂಕೀರ್ಣದಲ್ಲಿ ರಾಜ್ಯದಲ್ಲೇ ಅತ್ಯುನ್ನತ ಎನ್ನಬಹುದಾದ ಸಿಂಥೆಟಿಕ್‌ ಟರ್ಫ್‌ ಕ್ರೀಡಾಂಗಣವಿದೆ. ₹ 2.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟರ್ಫ್‌ ಅಂಗಳವನ್ನು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ವಹಿಸುತ್ತಿದೆ.

‘ಮೈಸೂರು ವಲಯದಲ್ಲಿ ಮಡಿಕೇರಿ ಹಾಗೂ ಪೊನ್ನಂಪೇಟೆ ಹೊರತುಪಡಿಸಿ ದರೆ ಮತ್ತೆಲ್ಲೂ ಟರ್ಫ್‌ ಕ್ರೀಡಾಂಗಣ ಇಲ್ಲ. ಹೀಗಾಗಿ, ನಗರದಲ್ಲಿ ಅಕಾಡೆಮಿ ನಿರ್ಮಿಸಲು ಕ್ರೀಡಾ ಇಲಾಖೆ ಮುಂದಾಗಿದೆ. ಹಾಕಿ ಕಣಜ ಎನಿಸಿರುವ ಕೊಡಗು ಜಿಲ್ಲೆಗೂ ಇದು ಸಮೀಪವಿದೆ’ ಎಂದು ಕ್ರೀಡಾ ಇಲಾಖೆಯ ಹಾಕಿ ಕೋಚ್‌ ವಿಜಯಕೃಷ್ಣ ತಿಳಿಸಿದರು.

‘ಅಕಾಡೆಮಿ ರೂಪುರೇಷೆ ಬಗ್ಗೆ ನಮಗೂ ಸರಿಯಾದ ಮಾಹಿತಿ ಇಲ್ಲ. ಈಗಿರುವ ಕ್ರೀಡಾ ಹಾಸ್ಟೆಲ್‌ ಯಾವ ರೂಪದಲ್ಲಿರಲಿದೆ? ಇಲ್ಲಿ ಕೇವಲ ಹಾಕಿ ಆಟಗಾರರು ಮಾತ್ರ ಇರುತ್ತಾರಾ? ಬೆಂಗಳೂರಿನಲ್ಲಿರುವ ಹಾಸ್ಟೆಲ್‌ನ ಹಾಕಿ ಆಟಗಾರರೂ ಇಲ್ಲಿಗೆ ಬರುತ್ತಾರಾ ಎಂಬಿತ್ಯಾದಿ ಗೊಂದಲಗಳಿವೆ’ ಎಂದರು.

*
ಭಾರತ ಕ್ರೀಡಾ ಪ್ರಾಧಿಕಾರದ ಮಾದರಿಯಲ್ಲಿ ಕಾರ್ಯನಿರ್ವಹಿ ಸಲಿದೆ. ವಾಸ್ತವ್ಯ, ತರಬೇತಿ ಜೊತೆಗೆ ಶಿಕ್ಷಣಕ್ಕೂ ಅವಕಾಶವಿದೆ. ಒಂದು ವರ್ಷದಲ್ಲಿ ಕಾರ್ಯಗತವಾಗಲಿದೆ.
-ಅನುಪಮ್‌ ಅಗರವಾಲ್‌,
ನಿರ್ದೇಶಕ, ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT