ADVERTISEMENT

ಮೈಸೂರು ‘ಆರೋಗ್ಯ ನಗರಿ’ ಆಗಲಿ

ಸಾರ್ವಜನಿಕರಿಂದ ಸೂರ್ಯನಮಸ್ಕಾರ; ಪಾಲಿಕೆ ಆಯುಕ್ತ ಜಗದೀಶ್ ಆಶಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:51 IST
Last Updated 6 ಫೆಬ್ರುವರಿ 2017, 5:51 IST

ಮೈಸೂರು: ನಗರದ ಹೃದಯ ಭಾಗಕ್ಕೆ ಭಾನುವಾರ ಬೆಳಿಗ್ಗೆ ನೂರಾರು ವಾಹನಗಳು ಲಗ್ಗೆ ಇಟ್ಟವು. ಅಲ್ಲಲ್ಲಿ ತಮ್ಮ ವಾಹನ ನಿಲ್ಲಿಸಿದ ಸಾರ್ವಜನಿಕರು ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣ ಸೇರಿದರು.

ರಥಸಪ್ತಮಿ ಪ್ರಯುಕ್ತ ಇಲ್ಲಿನ ಮೈಸೂರು ಯೋಗ ಒಕ್ಕೂಟದಿಂದ ಏರ್ಪಡಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ 500ಕ್ಕೂ ಹೆಚ್ಚು ಮಂದಿ ಇಲ್ಲಿಗೆ ಬಂದಿದ್ದರು.

ಸೂರ್ಯನಮಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಆಯುಕ್ತ ಜಿ.ಜಗದೀಶ್, ‘ಮೈಸೂರು ಸ್ವಚ್ಛನಗರಿ ಎಂಬ ಮಾನ್ಯತೆಯನ್ನು ಸತತ ಎರಡು ಬಾರಿ ಗಳಿಸಿದೆ. ಹಾಗೆಯೇ, ‘ಆರೋಗ್ಯ ನಗರಿ’ ಎಂಬ ಹೆಸರನ್ನೂ ಗಳಿಸುವಂತಾ ಗಬೇಕು. ಇದಕ್ಕೆ ಯೋಗ ಪೂರಕ’ ಎಂದರು.

ಪ್ರೊ.ಭಾಷ್ಯಂ ಸ್ವಾಮೀಜಿ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಲೇಂದ್ರ ಕುಮಾರ್, ಜಿಎಸ್ಎಸ್ ಯೋಗ ಫೌಂಡೇಷನ್‌ನ ಶ್ರೀಹರಿ, ಪತಂಜಲಿ ಯೋಗ ಕೇಂದ್ರದ ಸತ್ಯನಾರಾಯಣ, ಯೋಗಗುರುಗಳಾದ ಎ.ಎಸ್.ಚಂದ್ರ ಶೇಖರ್, ಎನ್.ಎಸ್. ಶಿವಪ್ರಕಾಶ್ ಇತರರು ಭಾಗವಹಿಸಿದ್ದರು.

ಯೋಗ ಚಾಂಪಿಯನ್‌ಷಿಪ್: ಗುರು ಸಾಯಿ ಯೋಗ ಫೌಂಡೇಷನ್ ತನ್ನ 6ನೇ ವಾರ್ಷಿಕೋತ್ಸವ ಪ್ರಯುಕ್ತ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಯೋಗ ಚಾಂಪಿಯನ್‌ ಷಿಪ್‌ನಲ್ಲಿ 400ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್, ಮೈಸೂರು ಯೋಗ ಅಸೋಸಿಯೇಷನ್ ಮತ್ತು ಮೈಸೂರು ಯೋಗ ಒಕ್ಕೂಟ ಸೇರಿದಂತೆ ಹಲವು ಸಂಘ, ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಿವಿಧ ವಯೋಮಿತಿಯವರಿಗೆ ಪ್ರತ್ಯೇಕ ಸ್ಪರ್ಧೆಗಳಿದ್ದವು.

ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ಡಾ.ಪಿ. ಕೃಷ್ಣಯ್ಯ, ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್. ಕುಮಾರ್, ಯೋಗ ಗುರುಗಳಾದ ಜಿ.ವೆಂಕಟೇಶ್, ಎಸ್. ಪ್ರಕಾಶ್, ಡಾ.ಪಿ.ಎಂ.ಗಣೇಶ್ ಇತರರು ಭಾಗವಹಿಸಿದ್ದರು.

ಆರೋಗ್ಯಕ್ಕಾಗಿ ಓಟ: ಸರ್ವೋದಯ ಟ್ರಸ್ಟ್ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆ ವತಿಯಿಂದ ‘ನಮ್ಮ ಮೈಸೂರು’ ಹಾಗೂ ‘ಆರೋಗ್ಯಕ್ಕಾಗಿ ಓಟ’ ಕಾರ್ಯ ಕ್ರಮಕ್ಕೆ ಓವೆಲ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.