ADVERTISEMENT

ಮೊಟ್ಟೆ ಉತ್ಪಾದಕರಿಗೆ ತುಂಬದ ಹೊಟ್ಟೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 5:40 IST
Last Updated 12 ಏಪ್ರಿಲ್ 2017, 5:40 IST

ಮೈಸೂರು: ಕೋಳಿಮೊಟ್ಟೆ ಧಾರಣೆ ವರ್ಷದಲ್ಲೇ ಅತಿ ಕನಿಷ್ಠ ದರಕ್ಕೆ ಕುಸಿದಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯು ಒಂದು ಮೊಟ್ಟೆಗೆ ₹ 3.03ನ್ನು ನಿಗದಿಪಡಿಸಿದೆ. ಇದು ಮೊಟ್ಟೆಪ್ರಿಯರಿಗೆ ಅಪ್ಯಾಯಮಾನವಾಗಿ ಕಂಡರೆ, ಮೊಟ್ಟೆ ಉತ್ಪಾದಕರಿಗೆ ನಷ್ಟ ತರಿಸಿದೆ.

ಇಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಮೊಟ್ಟೆ ದರ ಕುಸಿತ ಕಂಡಿದೆ. ಅಹಮದಾಬಾದ್‌ನಲ್ಲಿ ಒಂದು ಮೊಟ್ಟೆ ₹ 3.31 ಇರುವುದೇ ಸದ್ಯದ ಅತಿ ಹೆಚ್ಚಿನ ದರ ಎನಿಸಿದೆ. ಇದರಿಂದ ಸಗಟಾಗಿ ಮೊಟ್ಟೆ ಮಾರಾಟ ಮಾಡುವ ಉತ್ಪಾದಕರಿಗೆ ನಷ್ಟ ಸಂಭವಿಸುತ್ತಿದೆ. ಆದರೆ, ನಗರದಲ್ಲಿ ಮೊಟ್ಟೆಯ ಚಿಲ್ಲರೆ ಧಾರಣೆ ಹೆಚ್ಚೇನೂ ಕಡಿಮೆಯಾಗಿಲ್ಲ.

ಏಕೆ ಹೀಗೆ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಅತ್ಯಂತ ಹೆಚ್ಚು ಬೆಳಕು ಇರುತ್ತದೆ. ಮೋಡ ಕವಿದ ವಾತಾವರಣ ಹಾಗೂ ಮಂಜು ಇರುವುದಿಲ್ಲ. ಜತೆಗೆ, ಬೇಗ ಬೆಳಕು ಮೂಡಿ, ಸಂಜೆ ಕತ್ತಲಾಗುವುದೂ ನಿಧಾನವಾಗುತ್ತದೆ. ಬೆಳಕು ಹೆಚ್ಚು ಇದ್ದಷ್ಟು ಕೋಳಿಗಳು ಹೆಚ್ಚಾಗಿ ಆಹಾರ ಸ್ವೀಕರಿಸಿ ಉತ್ಪಾದನೆಯನ್ನು ಹೆಚ್ಚು ಮಾಡುತ್ತವೆ. ಇದರ ಜತೆಗೆ, ಹಕ್ಕಿ ಜ್ವರ ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಇದರಿಂದ ಸಹಜವಾಗಿಯೇ ಉತ್ಪಾದನೆ ಹೆಚ್ಚಿದೆ. ಕಳೆದ ವರ್ಷವೂ ಏಪ್ರಿಲ್ ತಿಂಗಳಲ್ಲಿ ಮೊಟ್ಟೆ ದರ ಕುಸಿದಿತ್ತು. ಆದರೆ, ಇಷ್ಟು ಕನಿಷ್ಠ ದರಕ್ಕೆ ಕುಸಿದಿರಲಿಲ್ಲ.

ADVERTISEMENT

ಮೊಟ್ಟೆ ಹಾದಿಯಲ್ಲಿ ಕೋಳಿಮಾಂಸ: ಕೋಳಿಮೊಟ್ಟೆ ಧಾರಣೆ ಕುಸಿತದ ಜತೆಜತೆಗೆ ಕೋಳಿಮಾಂಸದ ಧಾರಣೆಯೂ ಕುಸಿದಿದೆ. ಕೋಳಿಮಾಂಸದ ಉತ್ಪಾದನೆಯೂ  ಬೇಸಿಗೆಯಲ್ಲಿ ಹೆಚ್ಚಾಗುವುದರಿಂದ ದರ ಕುಸಿತ ಕಂಡಿದೆ. ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಹಾಗೂ ಬ್ರೀಡರ್ಸ್ ಅಸೋಸಿಯೇಷನ್‌ನ ಫಾರಂ ಕೋಳಿ ದರ ಕೆ.ಜಿ.ಗೆ ₹ 70ರಿಂದ ₹ 62ಕ್ಕೆ ಹಾಗೂ ಕರ್ಲ್ ಬರ್ಡ್ ದರ ₹ 105ರಿಂದ 90ಕ್ಕೆ ಕಡಿಮೆಯಾಗಿದೆ.

ನಿಯಂತ್ರಣಕ್ಕೆ ಸಿಗದ ತರಕಾರಿ ಬೆಲೆಗಳು:  ತರಕಾರಿ ಬೆಲೆಗಳ ಏರುಗತಿಗೆ ಯಾವುದೇ ಕಡಿವಾಣ ಈ ವಾರವೂ ಬಿದ್ದಿಲ್ಲ. ಇದ್ದುದರಲೇ ಕಡಿಮೆ ದರಕ್ಕೆ ಸಿಗುತ್ತಿದ್ದ ಕ್ಯಾರೆಟ್ ದರ ಸಹ ಈ ಬಾರಿ ಹೆಚ್ಚಾಗಿದೆ. ಸೋಮವಾರ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇದರ ಸಗಟು ಧಾರಣೆ ಕೆ.ಜಿ.ಗೆ ₹ 41ಕ್ಕೆ ಮುಟ್ಟಿತ್ತು. ಹೆಚ್ಚಾಗಿ ತಮಿಳುನಾಡಿನಿಂದ ಇಲ್ಲಿನ ಮಾರುಕಟ್ಟೆಗೆ ಕ್ಯಾರೆಟ್ ಪೂರೈಕೆಯಾಗುತ್ತಿದೆ. ಈಗ ಎರಡು ವಾರಗಳಿಂದ ಕ್ಯಾರೆಟ್‌ ಇಲ್ಲಿಗೆ ಆವಕವಾಗುವ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸರಾಸರಿ ಒಂದು ದಿನಕ್ಕೆ 60ರಿಂದ 70 ಕ್ವಿಂಟಲ್ ಬಂದರೆ ಬೆಲೆ ನಿಯಂತ್ರಣದಲ್ಲಿರುತ್ತದೆ. ಆದರೆ, 15 ದಿನಗಳಿಂದ 40 ಕ್ವಿಂಟಲ್‌ಗೆ ಕಡಿಮೆ ಯಾಗಿದೆ. ಇದರಿಂದ ಬೆಲೆ ಏರುತ್ತಿದೆ.

ಬೀನ್ಸ್ ದರವೂ ಏರಿಕೆಯಲ್ಲೇ ಸಾಗಿದೆ. ಕಳೆದೆರಡು ವಾರಗಳಿಂದ ಕೆ.ಜಿ.ಗೆ ಸಗಟು ಧಾರಣೆ ₹ 59ರಷ್ಟಿದ್ದ ಇದರ ದರ ಈಗ ₹ 52ರಷ್ಟಿದೆ.ಉಳಿದಂತೆ, ಹಸಿರುಮೆಣಸಿನಕಾಯಿ ಕೆ.ಜಿ.ಗೆ ₹ 29, ದಪ್ಪಮೆಣಸಿನಕಾಯಿ₹ 26.50, ಎಲೆಕೋಸು ₹ 12.50, ಬದನೆಕಾಯಿ ₹ 24, ನುಗ್ಗೆಕಾಯಿ ₹ 11 ಹಾಗೂ ಬೀಟ್ರೂಟ್ ₹ 24ರಲ್ಲಿ ಮಾರಾಟವಾಗುತ್ತಿದೆ. ತರಕಾರಿ ಬೆಳೆದ ಬೆಳೆಗಾರರಿಗೆ ಒಳ್ಳೆಯ ದರ ಸಿಗುತ್ತಿದ್ದರೂ ಇಳುವರಿ ಮಾತ್ರ ತೀರಾ ಕುಸಿದಿರುವುದರಿಂದ ಬೆಳೆಗಾರರಿಗೆ ಒಳ್ಳೆಯ ಲಾಭ ಬರುತ್ತಿಲ್ಲ.

ಮಾವು ಆವಕ; ಬೆಲೆ ದುಬಾರಿ: ವಿವಿಧ ಜಾತಿಗೆ ಸೇರಿದ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ವಿಶೇಷವಾಗಿ ಹೈಬ್ರಿಡ್ ತಳಿಯ ಮಾವು ಬಂದಿದೆ. ಇದರ ಬೆಲೆಯೂ ಹೆಚ್ಚಿದ್ದು, ರುಚಿಯೂ ಕಡಿಮೆ ಇರುವುದರಿಂದ ಗ್ರಾಹಕರನ್ನು ಆಕರ್ಷಿಸುವಲ್ಲಿ ಇವು ವಿಫಲವಾಗಿವೆ. ಇನ್ನೊಂದೆರಡು ವಾರದಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾವು ಬರುವನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.