ADVERTISEMENT

ಯುಜಿಸಿ ಮಾನ್ಯತೆಗಾಗಿ ಅಂತಿಮ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:09 IST
Last Updated 14 ಸೆಪ್ಟೆಂಬರ್ 2017, 9:09 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ (ಕೆಎಸ್‌ಒಯು) ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಗಿಟ್ಟಿಸಲು ಅಂತಿಮ ಹಂತದ ಸಿದ್ಧತೆ ಆರಂಭವಾಗಿದೆ. ಆ.15ರಿಂದಲೇ ಭರದ ಸಿದ್ಧತೆ ನಡೆದಿದ್ದು, ಬುಧವಾರ ಜರುಗಿದ ಶೈಕ್ಷಣಿಕ ಸಿಬ್ಬಂದಿ ಹಾಗೂ ಪಠ್ಯಕ್ರಮ ಮಂಡಳಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

2018–19ನೇ ಸಾಲಿಗೆ ಕೆಎಸ್‌ಒಯುಗೆ ಯುಜಿಸಿ ಮಾನ್ಯತೆ ಸಿಗಬೇಕಿದ್ದು, ಇದಕ್ಕಾಗಿ ಯುಜಿಸಿಯ 2017ರ ನಿಯಮಾವಳಿಗಳ ಅನುಸಾರ ವಾಗಿ ನಿಯಮಾವಳಿ ರೂಪಿಸಲಾಯಿತು. ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಸಿಬ್ಬಂದಿ ಸಭೆಯಲ್ಲಿ ವಿ.ವಿಯ ಒಟ್ಟು 35 ಕೋರ್ಸ್‌ಗಳಿಗೆ ‘ಯೋಜನಾ ಪ್ರಸ್ತಾವ ವರದಿ’ ಹಾಗೂ ವಿವಿಧ ಶುಲ್ಕ ಸ್ವೀಕಾರಕ್ಕೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಿ ಒಪ್ಪಿಗೆ ಪಡೆಯಲಾಯಿತು.

‘ಪ್ರವೇಶ ಪತ್ರಿಕೆ ಶುಲ್ಕ, ನೋಂದಣಿ, ಪರೀಕ್ಷೆ, ಪ್ರಮಾಣಪತ್ರ ಸೇರಿದಂತೆ ವಿವಿಧ ಶುಲ್ಕ ಸ್ವೀಕಾರ ಸಂಬಂಧ ನಿಯಮಾವಳಿಗಳು ಇರಲಿಲ್ಲ. ಯುಜಿಸಿ ಹೊಸ ನಿಯಮಗಳ ಪ್ರಕಾರ, ಹೊಸ ನಿಯಮಾವಳಿ ರೂಪಿಸಿ ಶೈಕ್ಷಣಿಕ ಸಿಬ್ಬಂದಿ ಸಭೆ ಹಾಗೂ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು. ಅಲ್ಲದೇ, ರಾಜ್ಯ ಸರ್ಕಾರದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿ, ಒಪ್ಪಿಗೆ ಪಡೆಯಬೇಕು ಎಂದಿದೆ. ಅದರಂತೆ ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು’ ಎಂದು ಪ್ರೊ.ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಂತರ ನಡೆದ ಪಠ್ಯಕ್ರಮ ಮಂಡಳಿ ಸಭೆಯಲ್ಲಿ ಒಟ್ಟು 35 ವಿವಿಧ ಕೋರ್ಸ್‌ಗಳಿಗೆ ‘ಯೋಜನಾ ಪ್ರಸ್ತಾವ ವರದಿ’ಗಳಿಗೆ (ಪಿಪಿಆರ್‌) ಅನುಮೋದನೆ ಪಡೆಯಲಾಯಿತು. ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಈ ವರದಿ ಸಿದ್ಧಪಡಿಸಿ ಯುಜಿಸಿಗೆ ಸಲ್ಲಿಸುವುದು ಕಡ್ಡಾಯ.

ನೇಮಕಾತಿ: ಯುಜಿಸಿ ಹೊಸ ನಿಯಮಾವಳಿಗಳ ಪ್ರಕಾರ ಸಂದರ್ಶಕ ಪ್ರಾಧ್ಯಾಪಕರ ನೇಮಕ ಆಗಬೇಕಿದ್ದು, ಇದಕ್ಕಾಗಿ ಪ್ರಸ್ತಾವ ಮಂಡಿಸಲಾಯಿತು. ಇದನ್ನು ರಾಜ್ಯಪಾಲರಿಗೆ ಸಲ್ಲಿಸಬೇಕಿದ್ದು, ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿವೆ ಎಂದು ಹೇಳಿದರು.

ಇಂದು ಸಿಂಡಿಕೇಟ್ ಸಭೆ: ಅಂತಿಮ ಒಪ್ಪಿಗೆಗಾಗಿ ಸೆ. 14ರಂದು ಸಿಂಡಿಕೇಟ್‌ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲ ಪ್ರಸ್ತಾವಗಳಿಗೆ ಅನುಮೋದನೆ ಪಡೆಯಲಾಗುತ್ತದೆ.
‘ಸೆ. 23ರ ಒಳಗೆ ನಾವು ಯುಜಿಸಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನದವರೆಗೂ ಕಾಯುವುದಿಲ್ಲ. ಮುಂಚಿತವಾಗಿಯೇ ಅರ್ಜಿ ಸಲ್ಲಿಸುತ್ತೇವೆ. ಈ ಕುರಿತು ಸಿದ್ಧತೆಗೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು. ಕುಲಸಚಿವ ಡಾ.ಕೆ.ಜಿ.ಚಂದ್ರ ಶೇಖರ್‌, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ.ಸುರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.