ADVERTISEMENT

ರಂಗಭೂಮಿ ಇತಿಹಾಸ ಬಿಚ್ಚಿಟ್ಟ ಪ್ರದರ್ಶನ

ನೇಸರ ಕಾಡನಕುಪ್ಪೆ
Published 16 ಜನವರಿ 2017, 6:29 IST
Last Updated 16 ಜನವರಿ 2017, 6:29 IST

ಮೈಸೂರು: ಮೈಸೂರು ಸಂಸ್ಥಾನವು ಕಲೆ– ಸಂಸ್ಕೃತಿ ಚಟುವಟಿಕೆಗಳಿಗೆ ಪೋಷಣೆ ನೀಡಿದ್ದು ಬಹುತೇಕರಿಗೆ ತಿಳಿದೇ ಇದೆ. ಮಹಾರಾಜರ ಕಾಲದಲ್ಲಿ ನಾಟಕಕಾರರು, ಸಂಗೀತಕಾರರು, ಸಾಹಿತಿಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಿ ಪೋಷಿಸಲಾಗಿತ್ತು. ಈ ಕುರಿತಂತೆ ಐತಿಹಾಸಿಕ ದಾಖಲೆಗಳನ್ನು ವೀಕ್ಷಿಸುವ ಅವಕಾಶ ಬಹುತೇಕರಿಗೆ ಸಿಗುವುದೇ ಇಲ್ಲ. ಅಂಥದ್ದೊಂದು ಅವಕಾಶ ಇದೀಗ ಇಲ್ಲಿ ಲಭ್ಯವಿದೆ.

ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಅಂತರರಾಷ್ಟ್ರೀಯ ಬಹು ಭಾಷಾ ನಾಟಕೋತ್ಸವದಲ್ಲಿ ಪತ್ರಾಗಾರ ಇಲಾಖೆಯು ಚಾರಿತ್ರಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನವನ್ನು ಇಲ್ಲಿನ ಲಂಕೇಶ್‌ ಗ್ಯಾಲರಿಯಲ್ಲಿ ಪ್ರದರ್ಶಿಸಿದೆ. ಕಲಾಪೋಷಣೆಯ ಇತಿಹಾಸದ ಸಮಗ್ರ ಚಿತ್ರಣ ಕಲಾಸಕ್ತರಿಗಾಗಿ ಇಲ್ಲಿ ಮುಕ್ತವಾಗಿದೆ.

ಪ್ರದರ್ಶನದಲ್ಲಿ ಏನೇನಿದೆ?:  ಒಟ್ಟಾರೆ ಯಾಗಿ ಮೈಸೂರು ವಿಭಾಗಕ್ಕೆ ಸೇರಿದಂತೆ ನಾಟಕ ಕ್ಷೇತ್ರದ ಚಾರಿತ್ರಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಇಲ್ಲಿದೆ. 1906ರಿಂದ 1934ರ ಅವಧಿಯ ನಡುವೆ ನಡೆದಿರುವ ವಿವಿಧ ಪತ್ರ ವ್ಯವಹಾರ, ದಾಖಲೆಗಳು ಸೇರಿದಂತೆ ಒಟ್ಟು 36 ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೈಸೂರಿನ ಮಹಾರಾಜರು ನೀಡುತ್ತಿದ್ದ ಕಲಾಪೋಷಣೆ, ನಾಟಕಕಾರರಿಗಾಗಿ ಸೃಷ್ಟಿಗೊಂಡ ಕೆಲವು ಸಂಘಟನೆಗಳು, ದೇಶ–ವಿದೇಶಗಳ ನಾಟಕಕಾರರ ಪತ್ರಗಳು ಇಲ್ಲಿರುವುದು ವಿಶೇಷ.

ಆರಂಭದಲ್ಲೇ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ವತಿಯಿಂದ ಕಲಾವಿದರಿಗೆ ನೀಡಿರುವ ಹಣಕಾಸು ನೆರವಿನ ಬಗೆಗಿನ ಪತ್ರ (1907) ಗಮನಸೆಳೆಯುತ್ತದೆ. ಇದರ ಜತೆಗೆ ವೆಂಡೆವಲ್ಲಿ ಪ್ರದರ್ಶನಕ್ಕೆ ಮನವಿಯನ್ನು ಪರಿಗಣಿಸುವಂತೆ ಸಿಸಿಲ್‌ ಗ್ರೀನ್‌ ಕಲಾವಿದರು ಮಹಾರಾಜರ ಕಾರ್ಯದರ್ಶಿಗೆ ಬರೆದಿರುವ ಮನವಿ ಪತ್ರ (1928), ಸ್ಮಿಡ್ ಮತ್ತು ತಂಡದವರಿಂದ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದ ವಿವರ (1934), ಅರಮನೆ ಕಲಾವಿದ ಕೆ.ಕೇಶವಯ್ಯ ಅವರು ಮರಾಮತ್‌ ಮೋಖ್ತೇಸರ ಅವರಿಗೆ ಸಲ್ಲಿಸದ ಮನವಿ ಪತ್ರ (1913), ಬರೋಡಾದ ಸಂಗೀತಗಾರ ಫಯಾಜ್‌ ಖಾನ್‌ ಅವರಿಗೆ ದಸರಾ ಸಂದರ್ಭದಲ್ಲಿ ನೀಡಿದ ಉಡುಗೊರೆಗಳ ಬಗ್ಗೆ ದರ್ಬಾರ್‌ ಬಕ್ಷಿ ಎಸ್‌.ಲಿಂಗರಾಜು ಅರಸ್‌ ಅವರು ಬರೆದ ಪತ್ರ (1930), ಕಲಾವಿದ ಕೆ.ಕೇಶವಯ್ಯ ಅವರು ಚಿತ್ರಿಸಿದ ಚಿತ್ರಗಳ ಪಟ್ಟಿ (1910) ಮುಖ್ಯವಾಗಿ ಗಮನಸೆಳೆಯುತ್ತವೆ.

ಅಂತೆಯೇ, ಅಂಬಾವಿಲಾಸ ಅರಮನೆಯಲ್ಲಿ ಕಲಾವಿದ ವೆಂಕಟಪ್ಪ ಅವರು ತಂಗಲು ವ್ಯವಸ್ಥೆ ಮಾಡಿರುವ ಬಗ್ಗೆ ಟಿ.ತಂಬೂಚೆಟ್ಟಿ ಅವರು ಬರೆದ ಟಿಪ್ಪಣಿ (1917), ಚಿತ್ರಕಲಾವಿದ ರಾಜಾ ರವಿವರ್ಮ ಅವರ ಪತ್ರ (1905), ಕಲಾವಿದ ಕೆ.ಕೇಶವಯ್ಯ ಅವರ ದಿನಚರಿ ಬಗ್ಗೆ ಮರಾಮತ್‌ ಮುಖ್ತೇಸರ ಅವರ ಟಿಪ್ಪಣಿ (1913), ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾದಲ್ಲಿ ಖಾಲಿ ಇರುವ ಕಲಾವಿದರ ಹುದ್ದೆಗಳನ್ನು ಭರ್ತಿ ಮಾಡಲು ಬರೆದ ಪತ್ರ (1916), ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ರದ್ದುಪಡಿಸುವ ಬಗ್ಗೆ ಮೆಮೊ (1914) ಸೇರಿದಂತೆ ಅನೇಕ ಇತರ ದಾಖಲೆಗಳಿವೆ.

ಮೈಸೂರು ಅರಮನೆ ಸೇರಿದಂತೆ ಮಹಾರಾಜರ ಆಶ್ರಯದ ಅನೇಕ ಸಭಾಂಗಣಗಳಲ್ಲಿ ನಾಟಕಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳು ನಡೆಯುತ್ತಿದ್ದವು. ಅವನ್ನು ಈಗಾಗಲೇ ಪತ್ರಾಗಾರ ಇಲಾಖೆಯು ದಾಖಲಿಸಿದೆ. ಆ ದಾಖಲೆಗಳ ಪ್ರತಿಗಳನ್ನು ನಾಟಕೋತ್ಸವದಲ್ಲಿ ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ ಎಂದು ವಿಭಾಗೀಯ ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಟಕ ಕಲಾವಿದರು ಅಂದಿನ ಕಾಲದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಅವುಗಳಿಗೆ ಮಹಾರಾಜರ ಕಾಲದಲ್ಲಿ ಸೂಕ್ತ ಸ್ಪಂದನೆಯೂ ಸಿಕ್ಕಿದೆ. ಈ ಸಂಬಂಧಿತ ದಾಖಲೆಗಳೂ ಈ ಪ್ರದರ್ಶನದಲ್ಲಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.