ADVERTISEMENT

ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ನೀಡಲ್ಲ

​ಪ್ರಜಾವಾಣಿ ವಾರ್ತೆ
Published 29 ಮೇ 2017, 7:11 IST
Last Updated 29 ಮೇ 2017, 7:11 IST
ಸೋಮೇಶ್ವರ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಸಾ.ರಾ.ಮಹೇಶ್ ಭಾನುವಾರ ಚಾಲನೆ ನೀಡಿದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ
ಸೋಮೇಶ್ವರ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಸಾ.ರಾ.ಮಹೇಶ್ ಭಾನುವಾರ ಚಾಲನೆ ನೀಡಿದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ   

ಸಾಲಿಗ್ರಾಮ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿ ಸಮ್ಮಿಶ್ರ ಸರ್ಕಾರ ರಚಿಸುವಂತಹ ಪರಿಸ್ಥಿತಿ ಎದುರಾದರೆ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ನೀಡುವುದಿಲ್ಲ. ಜನರ ಬಳಿಗೆ ಮತ್ತೆ ಹೋಗುತ್ತೇನೆಯೇ ಹೊರತು ಉಸಿರು ಕಟ್ಟುವ ರಾಜ ಕಾರಣಕ್ಕೆ ಮತ್ತೊಮ್ಮೆ ಕೈ ಹಾಕುವುದಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿಯ ಹಳಿಯೂರು ಗ್ರಾಮದಲ್ಲಿ ಭಾನುವಾರ ಸೋಮೇಶ್ವರ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡೂ ರಾಷ್ಟ್ರೀಯ ಪಕ್ಷಗಳ ಕೆಲವು ರಾಜಕಾರಣಿಗಳಿಗೆ ನನ್ನನ್ನು ಜೈಲಿಗೆ ಕಳುಹಿಸುವ ಆಸೆ ಉಂಟಾಗಿದೆ. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಆ ರಾಜಕಾರಣಿಗಳ ಷಡ್ಯಂತ್ರಕ್ಕೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಮುಂದಿನ ಚುನಾವಣೆ ಯಲ್ಲಿ ಮತದಾರರು ಜೆಡಿಎಸ್‌ಗೆ ಆಶೀರ್ವಾದ ಮಾಡುವುದು ಖಚಿತ ಎಂಬುದು ಅರಿತ ಕೆಲವು ರಾಜಕಾರಣಿ ಗಳು ಕುತಂತ್ರ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಇಲ್ಲಿವ ರೆಗೂ ತೀರ್ಮಾನವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿದ್ದು, ಈ ವಿಷಯವಾಗಿ ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ವರಿಷ್ಠರು ಶೀಘ್ರದಲ್ಲಿಯೇ ಮಾತುಕತೆ ನಡೆಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಮಾಯಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರು ವುದು ನಿಂತಿಲ್ಲ. ರೈತರು ಆತ್ಮಹತ್ಯೆ ಹಾದಿ ಹಿಡಿಯಬಾರದು. ಮುಂದಿನ ದಿನಗಳಲ್ಲಿ ರೈತ ಪರ ಕೆಲಸ ಮಾಡುವ ಸರ್ಕಾರ ಅಸ್ಥಿತ್ವಕ್ಕೆ ಬರುತ್ತದೆ. ಜೆಡಿಎಸ್ ಅಧಿಕಾರಕ್ಕೆ ಬರುತ್ತಿದಂತೆಯೇ ಶಾಸಕ ಸಾ.ರಾ.ಮಹೇಶ್ ಅವರ ಕನಸಿನಂತೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

‘ಉತ್ತರ ಕರ್ನಾಟಕದಿಂದ ಸ್ಪರ್ಧಿಸು ವಂತೆ ಪಕ್ಷದ ಕಾರ್ಯಕರ್ತರು ಒತ್ತಡ ತರುತ್ತಿದ್ದಾರೆ. ನಾನು ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದರು.
ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾ ಕೀರ್ತಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಮತಾ, ಡಿ.ಎಸ್. ಜಗದೀಶ್, ದ್ವಾರಕೀಶ್, ಎಚ್.ಕೆ.ಮಧುಚಂದ್ರ, ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಹಳಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಹೊಸೂರು ಕೀರ್ತಿ, ಕೃಷ್ಣಮೂರ್ತಿ, ಎಚ್.ಆರ್.ಮಹೇಶ್‌, ಎಚ್.ಎಂ.ಮಹದೇವ್, ಪ್ರಭಾಕರ್ ಹಾಜರಿದ್ದರು.

* *

ಎಚ್.ವಿಶ್ವನಾಥ್ ಅವರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾಗುವುದು ಖಚಿತ. ಅಂತಿಮ ಸುತ್ತಿನ ಮಾತುಕತೆ ನಡೆದ ನಂತರ ಸೇರ್ಪಡೆ ದಿನಾಂಕ ಪ್ರಕಟಿಸಲಾಗುವುದು
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.