ADVERTISEMENT

ವೈದ್ಯರ ನಿರ್ಲಕ್ಷ್ಯ; ₹ 10 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:45 IST
Last Updated 18 ಸೆಪ್ಟೆಂಬರ್ 2017, 8:45 IST

ಮೈಸೂರು: ವೈದ್ಯಕೀಯ ನಿರ್ಲಕ್ಷ್ಯ ತೋರಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಪರಿಣಾಮ ಸಂತ್ರಸ್ತರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡುವಂತೆ ನಾಲ್ವರು ವೈದ್ಯರು ಹಾಗೂ ಆಸ್ಪತ್ರೆಗೆ ಸೂಚಿಸಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.

ಯಾದವಗಿರಿಯ ವಿಕ್ರಂ ಜೀವ್‌ ಆಸ್ಪತ್ರೆ ಹಾಗೂ ವೈದ್ಯರಾದ ಡಾ.ನಿತ್ಯಾನಂದ ರಾವ್‌, ಡಾ.ಎಂ.ಎಸ್‌.ಸಂತೋಷಕುಮಾರ್‌, ಡಾ.ಗುರುರಾಜ್‌ ಹಾಗೂ ಡಾ.ನಿತಿನ್‌ ಅವರು ತಲಾ ₹ 2 ಲಕ್ಷ ಪಾವತಿಸುವಂತೆ ತಾಕೀತು ಮಾಡಿದೆ. ದೂರು ದಾಖಲಾದ ದಿನದಿಂದ ಶೇ 6ರ ಬಡ್ಡಿ ದರದಲ್ಲಿ ದಂಡದ ಮೊತ್ತವನ್ನು ನೀಡುವಂತೆಯೂ ಸೂಚಿಸಿದೆ.

‘ಹೆಬ್ಬಾಳದ ನಿವಾಸಿ ಗೀತಾ ಎಂಬುವರ ತಾಯಿ ನಿಂಗಮ್ಮ ಮಂಡಿನೋವಿನಿಂದ ಬಳಲುತ್ತಿದ್ದರು. 2010ರ ಏ.12ರಂದು ಇವರನ್ನು ವಿಕ್ರಂ ಜೀವ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಮಂಡಿನೋವಿನಿಂದ ಮುಕ್ತಿ ಪಡೆಯಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು’ ಎಂದು ದೂರುದಾರರ ಪರ ವಕೀಲ ವಿಶ್ವನಾಥ್‌ ತಿಳಿಸಿದ್ದಾರೆ.

ADVERTISEMENT

‘ಶಸ್ತ್ರಚಿಕಿತ್ಸೆ ಪಡೆದ ಕೆಲ ದಿನಗಳ ಬಳಿಕ ನಿಂಗಮ್ಮ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಏ.30ರಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಚಿಕಿತ್ಸೆಯ ವೆಚ್ಚವಾಗಿ ₹ 2.9 ಲಕ್ಷ ಕಟ್ಟಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗೀತಾ ಅವರು 2010ರ ಡಿಸೆಂಬರ್‌ 10ರಂದು ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.