ADVERTISEMENT

ಸಂಘ–ಸಂಸ್ಥೆಗಳಿಗೆ ನಿವೇಶನ ಭಾಗ್ಯ

250 ಸಿ.ಎ ನಿವೇಶನ ನೀಡಲು ಸಿದ್ಧತೆ; ಸಿ.ಎಂ.ಅನುಮತಿ: ‘ಮುಡಾ’ ಅಧ್ಯಕ್ಷ ಧ್ರುವಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:51 IST
Last Updated 9 ಜನವರಿ 2017, 8:51 IST

ಮೈಸೂರು: ನಗರದ ವಿವಿಧೆಡೆ 250 ಸಿ.ಎ ನಿವೇಶನ ಗುರುತಿಸಿ ಸಮಾಜಸೇವೆ ಯಲ್ಲಿ ತೊಡಗಿರುವ ಜವಾಬ್ದಾರಿಯುತ ಸಂಘ, ಸಂಸ್ಥೆಗಳಿಗೆ ನೀಡಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಡಿ.ಧ್ರುವಕುಮಾರ್‌ ತಿಳಿಸಿದರು.

ಹಾಸನ ಜಿಲ್ಲಾ ಬಳಗದ ವತಿಯಿಂದ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನು ವಾರ ಆಯೋಜಿಸಿದ್ದ ಪ್ರತಿಭಾ ಪುರ ಸ್ಕಾರ, ಸಾಧಕರಿಗೆ ಸನ್ಮಾನ, ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಅನುಮತಿ ನೀಡಿದ್ದಾರೆ. ಪ್ರಾಧಿಕಾರದ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗುವುದು. ಅಧ್ಯಕ್ಷ ಅವಧಿ ಮುಗಿಯುವುದರೊಳಗೆ 250 ನಿವೇಶನ ಹಂಚುತ್ತೇನೆ ಎಂದು ತಿಳಿಸಿದರು.

‘ಹಾಸನ ಜಿಲ್ಲಾ ಬಳಗದವರೂ ಸಿ.ಎ ನಿವೇಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅವರ ಕೋರಿಕೆಯನ್ನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.
ಮೇಯರ್‌ ಎಂ.ಜೆ.ರವಿಕುಮಾರ್‌ ಮಾತನಾಡಿ, ಮೈಸೂರು ನಗರ ‘ಸ್ವಚ್ಛತಾ ನಗರ’ ಎಂಬ ಹ್ಯಾಟ್ರಿಕ್‌ ಸಾಧನೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

‘ನಗರದಲ್ಲಿ 12 ಲಕ್ಷ ಜನರಿದ್ದಾರೆ. ಆದರೆ, ಕೇವಲ 5 ಸಾವಿರ ಮಂದಿ ಮಾತ್ರ ಆ್ಯಪ್‌ ಡೌನ್‌ಲೋಡ್‌ ಮಾಡಿ ಕೊಂಡಿದ್ದಾರೆ. 18 ಸಾವಿರ ಮಂದಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ 150 ಪಾಯಿಂಟ್‌ ಸಿಗುತ್ತದೆ’ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಮಳಲಿ ನಟ ರಾಜ್‌, ಲೇಖಕಿ ವೈ.ಸಿ. ಭಾನುಮತಿ ಅವರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ಎಸ್‌.ಪರೀಕ್ಷಿತ್‌, ಅರ್ಜುನ್‌ ವಿ.ಶ್ರೀವತ್ಸ, ನಮೃತಾ ಶಿವಾನಂದ, ಎಚ್‌.ಎಂ.ಸುಮಾ, ಆರ್‌. ಶ್ರೇಯಾ, ಬಿ.ಎನ್‌.ಕೃಪಾ, ಬಿ.ಸಂದೀಪಾ, ರೋಹನ್‌ ಗೌಡ, ವರ್ಷಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಸಹಕಾರ ಸಂಘಗಳ ಹೆಚ್ಚುವರಿ ನಿರ್ದೇಶಕ ಯದುನಾಥ್‌, ಬಳಗದ ಗೌರವಾಧ್ಯಕ್ಷ ಬಿ.ಬಿ.ರಾಮಕೃಷ್ಣ, ಅಧ್ಯಕ್ಷೆ ಪಿ.ಶಾರದಮ್ಮ, ಬಿ.ಜಿ.ರಂಗೇಗೌಡ, ಸುಬ್ಬೇಗೌಡ, ರಾಮಚಂದ್ರ, ಪುಟ್ಟಸ್ವಾಮಿಗೌಡ, ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.