ADVERTISEMENT

ಸಂಜೆ ವೇಳೆ ಮೈಸೂರಿಗೆ ರೈಲು

ಮೈಸೂರು ಗ್ರಾಹಕರ ಪರಿಷತ್‌, ನೈರುತ್ಯ ರೈಲ್ವೆ ಅಧಿಕಾರಿಗಳ ನಡುವೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 10:38 IST
Last Updated 10 ಏಪ್ರಿಲ್ 2018, 10:38 IST

ಮೈಸೂರು: ಮೈಸೂರು– ಬೆಂಗಳೂರು ನಡುವೆ ಸಂಜೆ ವೇಳೆ ರೈಲು ಸಂಚಾರ ಇಲ್ಲದೆ ಇರುವ ಕುರಿತು ಮೈಸೂರು ಗ್ರಾಹಕರ ಪರಿಷತ್‌ ಸದಸ್ಯರು ನೈರುತ್ಯ ರೈಲ್ವೆ ಅಧಿಕಾರಿಗಳ ಗಮನಸೆಳೆದಿದ್ದಾರೆ.

ಈ ಕುರಿತು ಪರಿಷತ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸದಸ್ಯರು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ಪ್ರತಿನಿತ್ಯ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಾಗುತ್ತಿದ್ದ ಕಣ್ಣೂರು–ಕಾರವಾರ ಎಕ್ಸ್‌ಪ್ರೆಸ್‌ ರೈಲು ಈಗ ವಾರಕ್ಕೆ ಎರಡು ದಿನ ಮಾತ್ರ ಸಂಚರಿಸುತ್ತಿರುವ ಕಾರಣ, ರಾತ್ರಿ 7ರಿಂದ 11ರ ನಡುವೆ ರೈಲಿಲ್ಲದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

ಈ ಕುರಿತು ಪರಿಷತ್‌ ಸದಸ್ಯರು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಯಶೋಧ್ ಕುಮಾರ್, ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಇಜಾಜ್‌ ಅಹಮದ್ ಅವರ ಗಮನಸೆಳೆದರು. ಈ ಕೊರತೆಯನ್ನು ನೀಗಿಸಲು ಹಾಲಿ ಚೆನ್ನೈ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಚೆನ್ನೈ–ಬೆಂಗಳೂರು ಇಂಟರ್‌ಸಿಟಿ ರೈಲನ್ನು (ಸಂಖ್ಯೆ 12609/10) ಮೈಸೂರಿನವರೆಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ವಾದ ಮಂಡಿಸಿದರು.

ADVERTISEMENT

ಈ ರೈಲು ಪ್ರತಿದಿನ ಬೆಳಿಗ್ಗೆ 8ಕ್ಕೆ ಬೆಂಗಳೂರನ್ನು ಬಿಟ್ಟು ಚೆನ್ನೈ ಕಡೆಗೆ ಪ್ರಯಾಣ ಬೆಳೆಸುತ್ತಿದೆ. ಈ ರೈಲನ್ನು ನಸುಕಿನ 5.20ಕ್ಕೆ ಬಿಡುವಂತೆ ಅವಕಾಶ ಮಾಡಿಕೊಟ್ಟರೆ, ಬೆಳಿಗ್ಗೆ 7.45ಕ್ಕೆ ಬೆಂಗಳೂರು ಸೇರುತ್ತದೆ. ಅಂತೆಯೇ, ಚೆನ್ನೈನಿಂದ ಬರುವ ಇದೇ ರೈಲು ರಾತ್ರಿ 8ಕ್ಕೆ ಬೆಂಗಳೂರು ತಲುಪುತ್ತಿದೆ. ಈ ರೈಲನ್ನು ಮುಂದುವರಿಸಿ ಮೈಸೂರು ಕಡೆಗೆ ಸಂಚರಿಸುವಂತೆ ಮಾಡಿದರೆ ರಾತ್ರಿ 11ಕ್ಕೆ ಮೈಸೂರು ಸೇರುತ್ತದೆ ಎಂಬ ಪರಿಹಾರವನ್ನು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಯಶೋಧ್ ಕುಮಾರ್, ಈಗಾಗಲೇ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ರೈಲು ಸಂಚರಿಸುವ ಸಮಯ ತೀರ್ಮಾನವಾಗದ ಕಾರಣ, ಸಂಚಾರ ಆರಂಭವಾಗಿಲ್ಲ. ಈ ಕುರಿತು ಬೆಂಗಳೂರು ವಿಭಾಗದೊಂದಿಗೆ ಮತ್ತೊಮ್ಮೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪರಿಷತ್ತಿನ ಅಧ್ಯಕ್ಷ ಎಸ್.ಡಿ.ಸಾವಕಾರ್, ಕಾರ್ಯಾಧ್ಯಕ್ಷ ಪ್ರೊ.ಎಸ್.ವೆಂಕಟೇಶ್‌, ಕಾರ್ಯದರ್ಶಿ ಕೆ.ಎಸ್‌.ವೆಂಕಟೇಶ ಭಾಗವಹಿಸಿದ್ದರು.

ಇಂಟ್ರಾ ಸಿಟಿ ಬಸ್‌ ಸೌಲಭ್ಯ ಮನವಿ

ಮೈಸೂರಿನ ರೈಲು ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ನಗರ ಹಾಗೂ ಗ್ರಾಮಾಂತರ ಬಸ್‌ ನಿಲ್ದಾಣಗಳ ನಡುವೆ ಬಸ್‌ ಸಂಚಾರ ಸೌಲಭ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೈಲ್ವೆ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಇಡಲಾಯಿತು.ಹಾಗಾಗಿ, ರೈಲು ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಬಸ್‌ಗಳು ಇಲ್ಲಿಂದ ಬಸ್‌ ನಿಲ್ದಾಣಕ್ಕೆ ಅಥವಾ ನಗರದ ವಿವಿಧ ಸ್ಥಳಗಳಿಗೆ ಹೊರಡಬೇಕು. ಜತೆಗೆ, ನಿಲ್ದಾಣ ಹಿಂಭಾಗದ ಎರಡನೇ ಪ್ರವೇಶ ದ್ವಾರದಲ್ಲಿ ದ್ವಿಚಕ್ರವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಬೇಕು. ನಿಲುಗಡೆಗೆ ತಿಂಗಳ ಪಾಸ್‌ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.