ADVERTISEMENT

ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿಯ ಕೊರತೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:38 IST
Last Updated 16 ಜನವರಿ 2017, 6:38 IST
ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿಯ ಕೊರತೆ
ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿಯ ಕೊರತೆ   

ಮೈಸೂರು: ದೇಶದಲ್ಲಿ ಸಂಸ್ಕೃತದ ಅಧ್ಯಯನಕ್ಕೆ  ಸಮರ್ಪಕವಾದ ವ್ಯವಸ್ಥೆ ಇಲ್ಲ. ಸಂಸ್ಕೃತದ ವಿಚಾರದಲ್ಲಿ ತೀಕ್ಷ್ಣವಾದ ಆಸಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ಎಂ.ಎನ್.ವೆಂಕಟಾಚಲಯ್ಯ ಇಲ್ಲಿ ಹೇಳಿದರು.

ವೇದಶಾಸ್ತ್ರ ಪೋಷಿಣೀ ಸಭಾ ನಗರದ ಕುವೆಂಪುನಗರದ ಗಾನ­ಭಾರತೀಯಲ್ಲಿ ಭಾನುವಾರ ಹಮ್ಮಿ­ಕೊಂಡಿದ್ದ ವಿದ್ವಾಂಸರ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ವಾಂಸರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡಬೇಕು ಎಂದು ಡಾ.ಬಿ.ಆರ್.­ಅಂಬೇಡ್ಕರ್ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅಂಬೇಡ್ಕರ್ ಅವರು ಈ ಪ್ರಸ್ತಾಪವನ್ನೇ ಕೈಬಿಟ್ಟರು. ಆದರೆ, ಈ ವಿಚಾರವನ್ನು ವಿರೋಧಿಸಿದ್ದವರೇ ಹಲವು ವರ್ಷಗಳ ಬಳಿಕ ತಮ್ಮ ವಿರೋಧಕ್ಕೆ ಪಶ್ಚಾತ್ತಾಪವನ್ನೂ ಪಟ್ಟಿದ್ದರು ಎಂದರು.

ಸಂಸ್ಕೃತ ಪಂಡಿತರಿಗೆ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಪಾಂಡಿತ್ಯ ಇದ್ದರೆ ಅವರ ಕಲ್ಪನಾಶಕ್ತಿಯನ್ನು ವಿಸ್ತರಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ವಿದ್ವಾಂಸರನ್ನು ಗೌರವಿಸುವ ಪರಿಸ್ಥಿತಿ ನಿರ್ಮಾಣ ಆಗಬೇಕು. ಇದಕ್ಕೆ ಸರ್ಕಾರವೂ ಕನ್ನಡಿಯಾಗಬೇಕು ಎಂದು ಸಲಹೆ ನೀಡಿದರು.

ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ. ಆಯುಷ್ಯವನ್ನೂ ವೃದ್ಧಿಸುವಂಥ ಸಂಶೋಧನೆಗಳು ನಡೆಯುತ್ತಿವೆ. ಮಧುಮೇಹ ಮತ್ತು ಕ್ಯಾನ್ಸರ್ ಭಾರತದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು ಆಯುರ್ವೇದ, ಸಂಸ್ಕೃತ ಕ್ಷೇತ್ರದಲ್ಲಿರುವ ಅವಕಾಶಗಳ ಬಗೆಗೂ ಚಿಂತನೆಗಳು ನಡೆಯಬೇಕಿದೆ ಎಂದರು.

ವಿದ್ವಾಂಸರಾದ ಎಂ.ಗೋವಿಂದ ಭಟ್ಟ–ಬಳ್ಳಾರಿ, ಎಂ.ಎಸ್.­ಅಶ್ವತ್ಥ­ನಾರಾಯಣ ಅವಧಾನಿ–ಮತ್ತೂರು, ಸುಬ್ರಾಯ ಭಟ್ಟ –ಹೊನ್ನಾವರ, ಡಾ.ಎಸ್.ಆರ್. ಲೀಲಾ–ಬೆಂಗಳೂರು, ಡಾ.ಟಿ.ವಿ. ಸತ್ಯನಾರಾಯಣ–ಮೈಸೂರು, ಡಾ.ಆರ್.ಶ್ರೀಧರಶಾಸ್ತ್ರಿ ಸೂರಿ –ತುಮಕೂರು, ಜಿ.ಶಿವರಾಮ ಅಗ್ನಿಹೋತ್ರಿ, ರಾಮಚಂದ್ರ ಜಿ.ಭಟ್ಟ– ಬೆಂಗಳೂರು, ಡಾ.ರಾಮಾಚಾರ್ಯ ಮಾಳಗಿ ಮೊದಲಾದವರನ್ನು ಈ ವೇಳೆ ಸನ್ಮಾನಿಸಲಾಯಿತು. ವಿದ್ವಾನ್ ಮೋಹನ ಭಟ್ಟ ಜೋಶಿ–ಕಲಬುರ್ಗಿ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಜೋಶಿ ಅವರನ್ನು ಗೌರವಿಸಲಾಯಿತು.

ವೇದಶಾಸ್ತ್ರ ಪೋಷಿಣೀ ಸಭಾ ಅಧ್ಯಕ್ಷ ವಿದ್ವಾನ್ ಪ್ರೊ.ಬಿ.ಎನ್.­ನಾಗರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ.ಎನ್.ವೆಂಕಟಕೃಷ್ಣ, ಗೌರವ ಕಾರ್ಯದರ್ಶಿ ಎ.ಎಂ.­ಚಂದ್ರಶೇಖರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.