ADVERTISEMENT

ಸಮಸ್ಯೆ ಹೇಳಿಕೊಳ್ಳಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:07 IST
Last Updated 21 ಮೇ 2017, 9:07 IST

ಮೈಸೂರು: ‘ಕುಟುಂಬದವರೇ ಹೊಲ, ಮನೆ ಕಿತ್ತುಕೊಂಡು ನನ್ನನ್ನು ಹೊರಗೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಕೇಸು ದಾಖಲಿಸುತ್ತಿಲ್ಲ. ನನ್ನ ಬದುಕು ಬೀದಿ ಪಾಲಾಗಿದೆ. ಏನಾದರೂ ಸಹಾಯ ಕಲ್ಪಿಸಿ ಸ್ವಾಮಿ’–80 ವರ್ಷ ವಯಸ್ಸಿನ ಕಲ್ಯಾಣಮ್ಮ ಎಂಬುವರು ಒಂದು ಕೋಲು ಹಾಗೂ ಪ್ಲಾಸ್ಟಿಕ್‌ ಬಾಟಲಿ ಹಿಡಿದುಕೊಂಡು ಬಂದು ಮನವಿ ಮಾಡಿದ ಪರಿ ಇದು. ಬೆಳಗೊಳದಿಂದ ಬಂದಿದ್ದ ಅವರು ಪಕ್ಕದಲ್ಲಿ ನಿಂತಿದ್ದ ಪೊಲೀಸರೊಬ್ಬರ ಕೈ ಹಿಡಿದು ಹಣೆಗೆ ಒತ್ತಿಕೊಂಡರು.

‘ಮೈಸೂರು ಹಾಗೂ ಬೆಂಗಳೂರು ಜೈಲಿನಲ್ಲಿ 14 ವರ್ಷ ಶಿಕ್ಷೆ ಅನುಭವಿ ಸಿದ್ದೇನೆ. ಜೈಲಿನಿಂದ ಬರುವಷ್ಟರಲ್ಲಿ ಮನೆಯನ್ನು ಕೆಡವಿದ್ದಾರೆ. ಜಾಗವಿದೆ, ಆದರೆ, ಹಕ್ಕುಪತ್ರ ಇಲ್ಲ. ಇಬ್ಬರು ಹೆಣ್ಣುಮಕ್ಕಳು ಕೂಲಿ ಮಾಡುತ್ತಿದ್ದಾರೆ. ದಯವಿಟ್ಟು ಪರಿಹಾರ ನೀಡಿ’ ಎಂದು ಮೈಸೂರಿನ ಎಂ.ಕೆ. ಮಹದೇವು ಎಂಬುವರು ಮನವಿ ಮಾಡಿದರು.

‘ಜಮೀನು ಬಿಟ್ಟು ಕೊಡಿ ಎಂದು ನನ್ನ ಮೇಲೆ ರೌಡಿಗಳಿಂದ ಹಲ್ಲೆ ಮಾಡಿಸುತ್ತಿದ್ದಾರೆ. ಪೊಲೀಸ್ ಠಾಣೆಗೆ ಹೋದರೂ ನ್ಯಾಯ ಸಿಕ್ಕಿಲ್ಲ’ ಎಂದು ಬಿಳಿಕೆರೆ ದೊಡ್ಡೇಕೊಪ್ಪಲಿನ ಕೃಷ್ಣೇಗೌಡ ಎಂಬುವರು ಸಮಸ್ಯೆ ಹೇಳಿಕೊಂಡರು.

ADVERTISEMENT

‘ಸ್ವಾಮಿ, ನನ್ನ ಮೇಲೆ ಸುಖಾಸುಮ್ಮನೇ ರೌಡಿ ಶೀಟರ್‌ ಹಾಕಿದ್ದಾರೆ. ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ನನಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ’ ಎಂದು ಕೆ.ಆರ್‌.ನಗರದಿಂದ ಬಂದಿದ್ದ ವ್ಯಕ್ತಿಯೊಬ್ಬರು ಕಣ್ಣೀರಿಟ್ಟರು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳದಲ್ಲೇ ಇದ್ದ ಎಸ್ಪಿ ರವಿ ಡಿ.ಚನ್ನಣ್ಣ ನವರ ಹಾಗೂ ಪಾಲಿಕೆ ಆಯುಕ್ತ ಜಿ.ಜಗದೀಶ್‌ ಅವರನ್ನು ಕರೆದು ಇವರ ಸಮಸ್ಯೆ ಬಗೆಹರಿಸುವಂತೆ ಹೇಳಿದರು.ಸರ್ಕಾರಿ ಅತಿಥಿ ಗೃಹದಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು 200ಕ್ಕೂ ಅಧಿಕ ಅಹವಾಲು ಸ್ವೀಕರಿಸಿ ಸಾರ್ವಜನಿಕರಿಗೆ ನೆರವಿನ ಭರವಸೆ ನೀಡಿದರು.

ಮನವಿ ಪತ್ರಗಳಿಗೆ ಸಹಿ ಹಾಕಿ ಜಂಟಿ ಕಾರ್ಯದರ್ಶಿ ರಾಮಯ್ಯ ಅವರಿಗೆ ನೀಡುತ್ತಿದ್ದರು. ಇನ್ನು ಕೆಲವು ಅರ್ಜಿ ಗಳನ್ನು  ಜಿಲ್ಲಾಧಿಕಾರಿ ಡಿ.ರಂದೀಪ್‌, ಮುಡಾ ಆಯುಕ್ತ ಮಹೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಜಗದೀಶ್‌ ಹಾಗೂ ಇತರ ಇಲಾಖೆಯ ಅಧಿಕಾರಿಗಳಿಗೆ ಕೊಡುತ್ತಿದ್ದರು.

ಅಲ್ಲದೆ, ಸಂಘ ಸಂಸ್ಥೆಗಳು ಕೂಡ ಮನವಿ ಸಲ್ಲಿಸಿದವು. ಫಾಲ್ಕಾನ್‌ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಕೋರಿದರು. ಹಿಂದಿ ಶಿಕ್ಷಕರಿಗೆ ಅನ್ಯಾಯವಾಗುತ್ತಿರುವ ಸಂಬಂಧ ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್‌ ಗಮನ ಸೆಳೆದರು.

ಪರಿಹಾರ ಕೊಡಿಸಿ ಸ್ವಾಮಿ: ‘ಹರಿಹರದಲ್ಲಿ 1966ರಲ್ಲಿ ರೈಲು ಸಂಪರ್ಕಕ್ಕಾಗಿ ಪ್ರತಿಭಟನೆ ನಿರತರಾಗಿದ್ದಾಗ ನಡೆದ ಗೋಲಿಬಾರ್‌ನಲ್ಲಿ ನನ್ನ ಅಣ್ಣ ಪಿ.ಎಂ.ಮಂಚಯ್ಯ ಮೃತಪಟ್ಟಿದ್ದರು. ಆಗ ಪರಿಹಾರವಾಗಿ ಎಂಟು ಎಕರೆ ಜಮೀನು ನೀಡಿದ್ದರು. ಆದರೆ, ಅದಿನ್ನೂ ನಮಗೆ ಲಭಿಸಿಲ್ಲ. ಬೇಗ ಪರಿಹಾರ ಕೊಡಿಸಿ’ ಎಂದು ಕುಪ್ಪೇಗಾಲದ ಮಹದೇವಮ್ಮ ಎಂಬುವರು ವಿನಂತಿ ಮಾಡಿಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಸಿ.ಎಂ, ‘ನಿನಗೆ ಕೆಲಸ ಕೊಡಿಸಿದ್ದೇನೆ ಅಲ್ಲವೇ? ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ’ ಎಂದರು. ಮಧ್ಯಾಹ್ನ 2.30ರವರೆಗೆ ಕುಳಿತಲ್ಲಿ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ ಸಮಯದ ಕೊರತೆಯಿಂದ ಹೊರಗೆ ಬಂದರು. ಸಾಲಿನಲ್ಲಿ ನಿಂತಿದ್ದ ಜನರ ಬಳಿಯೇ ಹೋಗಿ ಅರ್ಜಿ ಪಡೆದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಆಹಾರ  ಸಚಿವ ಯು.ಟಿ.ಖಾದರ್‌, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತಾರಾಂ, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ವರುಣಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಇದ್ದರು.

ಸಿ.ಎಂ ಜನಸಂಪರ್ಕ ಸಭೆಯ ವಿಶೇಷಗಳು

*ಸಾರ್ವಜನಿಕರ ಅಹವಾಲು–ಸ್ಪಂದನೆಯ ಭರವಸೆ
* ಏನ್ರಿ ಹಳೆ ಗಿರಾಕಿಗಳೇ ಅರ್ಜಿ ಹಿಡಿದು ಬರುತ್ತಿದ್ದಾರಲ್ಲ ಎಂದಾಗ ಸಭಾಂಗಣದಲ್ಲಿ ನಗುವಿನ ಅಲೆ
* ಮೈಸೂರು ವಿ.ವಿ ಹಂಗಾಮಿ ಕುಲಪತಿ ಪ್ರೊ.ದಯಾನಂದ ಮಾನೆ ಅವರಿಂದ ಮನವಿ
* ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಸಂಭ್ರಮಕ್ಕೆ ₹ 30 ಲಕ್ಷ ಅನುದಾನ ನೀಡುವಂತೆ ನಿರ್ದೇಶಕಿ ಪ್ರೊ.ಪ್ರೀತಿ ಶ್ರೀಮಂಧರಕುಮಾರ್‌ ಅರ್ಜಿ
* ಬೀದಿ ಬದಿ ಕಿರಾಣಿ ಅಂಗಡಿ ಇಟ್ಟುಕೊಂಡು ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವಂತೆ ಅಂಗವಿಕಲರ ಒತ್ತಾಯ, ಪೊಲೀಸರಿಂದ ತೊಂದರೆ ಆಗುತ್ತಿದೆ, ಮೊಕದ್ದಮೆ    ಹೂಡಿದ್ದಾರೆ ಎಂದು ಮನವಿ. ಪ್ರಕರಣ ಕೈಬಿಡುವಂತೆ ಪೊಲೀಸ್‌ ಕಮಿಷನರ್‌ಗೆ ಸಿ.ಎಂ ಸೂಚನೆ
*ಕಂಪೆನಿಯೊಂದರಿಂದ 101 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ವಾಪಸ್‌ ಕೆಲಸ ಕೊಡಿಸಿ ಎಂದು ಮನವಿ
* ಕಿಡ್ನಿ ಸಮಸ್ಯೆ ಇದ್ದು ಡಯಲಿಸಿಸ್‌ ಮಾಡಿಸಿಕೊಳ್ಳಲು ಹಣವಿಲ್ಲ ಎಂದು ಕಣ್ಣೀರಿಟ್ಟ ಸರಗೂರಿನ ಸತೀಶ್‌ ಎಂಬುವರಿಗೆ ₹ 50 ಸಾವಿರ ನೆರವು ನೀಡಲು ಸೂಚನೆ
* ಬಾಡಿಗೆ ಮನೆ ಖಾಲಿ ಮಾಡಿಸುತ್ತಿದ್ದಾರೆ, ಬೇರೆ ಮನೆ ಸಿಗುವವರಿಗೆ ಅಲ್ಲೇ ಇರಲು ಸೂಚನೆ ನೀಡುವಂತೆ ದಂಪತಿ ಮನವಿ ಸಲ್ಲಿಸಿದರು
* ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಒಬ್ಬರು ಅರ್ಜಿ ನೀಡಿದರು. ಇದನ್ನು ಖುದ್ದಾಗಿ ಪರಿಶೀಲನೆ ನಡೆಸುವಂತೆ ಎಸ್ಪಿಗೆ ಸೂಚನೆ ನೀಡಿದರು.
* ಹೂಟಗಳ್ಳಿಯಲ್ಲಿ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಯೊಬ್ಬರು ಮುಖ್ಯಮಂತ್ರಿ ಎದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
* ಸ್ಮಶಾನಕ್ಕೆ ಸೇರಿದ 2 ಎಕರೆ ಜಾಗ ಬಿಟ್ಟುಕೊಡುವಂತೆ ಸಜ್ಜೆಹುಂಡಿಯ ರವಿ ಎಂಬುವರು ಮನವಿ ಪತ್ರ ನೀಡಿದರು 
* ಐಟಿಸಿಯಲ್ಲಿ ಕಾರ್ಮಿಕರ ಸಂಘ ರಚನೆ ಮಾಡಿದ್ದಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಸುಶೀಲ್‌ ಬಾಬು ಎಂಬುವರಿಂದ ದೂರು 
* ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕಾರ್ಖಾನೆಯ ನೌಕರರು ಮನವಿ
* ಶಾದನಹಳ್ಳಿ ಜಮೀನಿನಲ್ಲಿ ಈಚೆಗೆ ಕಾಣಿಸಿಕೊಂಡ ಬೆಂಕಿಗೆ ಬಲಿಯಾದ ಬಾಲಕ ಹರ್ಷಿಲ್‌ ಕುಟುಂಬಕ್ಕೆ ಸಿದ್ದರಾಮಯ್ಯ ಅವರಿಂದ ₹ 2 ಲಕ್ಷ ಪರಿಹಾರ ವಿತರಣೆ
* ಕಬ್ಬು ಬೆಳೆಗಾರರಿಗೆ ಎಸ್ಎಪಿ ದರ ನಿಗದಿಗೆ ಕಬ್ಬು ಖರೀದಿ ಮಂಡಳಿ ಸಭೆ ಕರೆಯುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್‌ ಶಾಂತಕುಮಾರ್‌          ಮನವಿ ಸಲ್ಲಿಸಿದರು

ಕೆಲಸ ವಿಳಂಬವೇ ಭ್ರಷ್ಟಾಚಾರ–ಸಿ.ಎಂ
ಮೈಸೂರು: ‘ಜನರ ಕೆಲಸ ವಿಳಂಬ ಮಾಡುವುದು, ಸರ್ಕಾರಿ ಕಚೇರಿಗೆ ಸುಖಾಸುಮ್ಮನೇ ಅಲೆಯುವಂತೆ ಮಾಡುವುದು ದೊಡ್ಡ ಭ್ರಷ್ಟಾಚಾರ. ಜನರಿಗೆ ನ್ಯಾಯ ಕೊಡುವುದು ವಿಳಂಬವಾದರೆ ಗೆದ್ದವನು ಸೋತ, ಸೋತವನು ಸತ್ತ ಎಂಬಂತೆ ಆಗುತ್ತದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ತಾಲ್ಲೂಕು ಕಚೇರಿಗಳಲ್ಲಿ ತುಂಬಾ ಸಮಸ್ಯೆಯಿದೆ. ಕಂದಾಯ ಇಲಾಖೆ ಅದರಲ್ಲೂ ಭೂಮಾಪನಕ್ಕೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವರೂ ಸಹಾಯ ಮಾಡಲ್ಲ...
ಮೈಸೂರು: ವರುಣಾ ಕ್ಷೇತ್ರದಿಂದ ಬಂದಿದ್ದ ಶಿವಣ್ಣ ಎಂಬುವವರು ಸರ್ಕಾರಿ ಕೆಲಸ ಕೊಡಿಸಿ ಎಂದು ವಿನಂತಿ ಮಾಡಿಕೊಂಡರು. ಆಗ ಸಿದ್ದರಾಮಯ್ಯ ಏನು ಓದಿದ್ದಿಯಪ್ಪ ಎಂದು ಕೇಳಿದರು. ಆಗ ಅವರು ಎಸ್ಸೆಸ್ಸೆಲ್ಸಿ ಎಂದರು.

ಅವರ ಮುಖವನ್ನು ದಿಟ್ಟಿಸಿ ನೋಡಿದ ಮುಖ್ಯಮಂತ್ರಿ, ‘ನಾನು ಮಾತ್ರ ಅಲ್ಲ; ದೇವರಿಗೂ ನಿನಗೆ ಸಹಾಯ ಮಾಡಲು ಆಗಲ್ಲ. ಬಣ್ಣಾರಿಯಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಕೊಡಿಸುತ್ತೇನೆ ಹೋಗು’ ಎಂದು ಹೇಳಿ ಕಳಿಸಿದರು.

ಸಿ.ಎಂ ಸ್ನೇಹಿತರಿಂದ ಮನವಿ
ಮೈಸೂರು: ಸಿದ್ದರಾಮಯ್ಯ  ಅವರ ಬಾಲ್ಯದ ಕೆಲ ಸ್ನೇಹಿತರು ಸಹಾಯ ಕೋರಿ ಬಂದಿದ್ದು ವಿಶೇಷ. ವಕೀಲರಾಗಿ ನಿವೃತ್ತರಾಗಿರುವ ಎನ್‌.ಸಿ.ಸಂಜೀವನ್‌ ಎಂಬುವವರು ಬಾಕಿ ವೇತನ (ಅರಿಯರ್ಸ್) ಕೊಡಿಸುವಂತೆ ಕೋರಿದರು. ವರುಣಾದಿಂದ ಬಂದಿದ್ದ ಮತ್ತೊಬ್ಬ ಸ್ನೇಹಿತರು ಮನೆ ಕಟ್ಟಲು ನಿವೇಶನ ಕಲ್ಪಿಸುವಂತೆ ಬೇಡಿಕೆ ಇಟ್ಟರು. ಆಗ ಸಿದ್ದರಾಮಯ್ಯ, ಆಯ್ತು ಹೋಗಿ ನೋಡೋಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.