ADVERTISEMENT

ಸಾಲದ ಹಣ ಎಲ್ಲಿ ಹೋಯಿತು?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:30 IST
Last Updated 8 ನವೆಂಬರ್ 2017, 9:30 IST
ಮೈಸೂರಿನಲ್ಲಿ ಮಂಗಳವಾರ ನಡೆದ ಜೆಡಿಎಸ್‌ ‘ಕುಮಾರ ಪರ್ವ–2018’ ಸಮಾವೇಶದಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತುಕತೆಯಲ್ಲಿ ತೊಡಗಿದ್ದ ಕ್ಷಣ. ಚನ್ನಮ್ಮ ಇದ್ದಾರೆ.
ಮೈಸೂರಿನಲ್ಲಿ ಮಂಗಳವಾರ ನಡೆದ ಜೆಡಿಎಸ್‌ ‘ಕುಮಾರ ಪರ್ವ–2018’ ಸಮಾವೇಶದಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತುಕತೆಯಲ್ಲಿ ತೊಡಗಿದ್ದ ಕ್ಷಣ. ಚನ್ನಮ್ಮ ಇದ್ದಾರೆ.   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 1.25 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಆ ಹಣ ಎಲ್ಲಿ ಹೋಯಿತು? ರೈತರ ಹಿತಕ್ಕೆ ಬಳಸಿದ್ದಾರೆಯೇ? ನೀರಾವರಿ ಯೋಜನೆಗಳಿಗೆ ನೀಡಿದ್ದಾರೆಯೇ? ಸತ್ಯಹರಿಶ್ಚಂದ್ರ ಸಿದ್ದರಾಮಯ್ಯಯವರೇ ಜನರಿಗೆ ಲೆಕ್ಕಕೊಡಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ‘ಕುಮಾರ ಪರ್ವ–2018’ ವಿಕಾಸ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಸರ್ಕಾರದ ಸಾಧನೆಯ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ವಿಧಾನಸೌಧದ ವಜ್ರಮಹೋತ್ಸವಕ್ಕೆ ನೀಡಲು ಹಣವಿದೆ.

ಲೂಟಿ ಹೊಡೆಯುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಬೆಳೆನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೀಡಲು ಹಣವಿಲ್ಲ. ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ರೈತರ ಬಗ್ಗೆ ನಿಜವಾದ ಕಾಳಜಿ, ಬದ್ಧತೆ ಇದ್ದರೆ ಸಂಪೂರ್ಣ ಸಾಲಮನ್ನಾ ಮಾಡಿ. ಕೇಂದ್ರದತ್ತ ಕೈತೋರಿಸಬೇಡಿ’ ಎಂದು ಒತ್ತಾಯಿಸಿದರು. ‘ಚಿಕಿತ್ಸೆ ಬಳಿಕ ಎರಡನೇ ಜನ್ಮವೆತ್ತು ಜನರ ಬಳಿ ಬಂದಿದ್ದೇನೆ. ನನ್ನ ಆರೋಗ್ಯದ ಬಗ್ಗೆ ನನಗೆ ಸ್ವಲ್ಪವೂ ಭಯವಿಲ್ಲ. ಜನರ ಕಷ್ಟ ಬಗೆಹರಿಸಲು ಕೇವಲ 2 ವರ್ಷ ಅವಕಾಶ ಮಾಡಿಕೊಡಿ.

ಯೋಜನೆ ಹೆಸರಿನಲ್ಲಿ ಹಣ ಲೂಟಿ ಮಾಡುವುದಿಲ್ಲ. ಬದಲಾಗಿ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ. ರೈತರು ಸಾಲಗಾರರಾಗದಂತೆ ಯೋಜನೆ ರೂಪಿಸುತ್ತೇನೆ. ತಿಂಗಳಿಗೆ ₹ 15,000 ದುಡಿಯುವಂತೆ ಮಾಡುತ್ತೇನೆ’ ಎಂದರು. ‘ನನ್ನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇಟ್ಟುಕೊಂಡಿರುವ ಜನರು ವೋಟು ಹಾಕಲು ಮತಗಟ್ಟೆಗೆ ತೆರಳಿದಾಗ ನನ್ನನ್ನು ಮರೆತುಬಿಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಣೆ ಇಲ್ಲ: ‘ಟಿಕೆಟ್‌ ಸಿಗದೆ ಕೊನೆಯ ಕ್ಷಣದಲ್ಲಿ ಅಸಮಾಧಾನದಿಂದ ಹೊರ ಬರುವ ಬೇರೆ ಪಕ್ಷದ ಪ್ರಮುಖರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡುವುದಿಲ್ಲ. ಈಗಾಗಲೇ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ನ. 16ರಂದು ಹುಬ್ಬಳ್ಳಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ನಂತರ, ಕೋರ್‌ ಸಮಿತಿ ಸಭೆ ನಡೆಸುತ್ತೇವೆ. ತಿಂಗಳ ಅಂತ್ಯದಲ್ಲಿ ಮೊದಲ ಹಂತದ ಪಟ್ಟಿ ಬಿಡುಗಡೆಗೊಳಿಸುತ್ತೇವೆ’ ಎಂದರು.

ಶಾಸಕ ರೇವಣ್ಣ ಗೈರು‌: ಮೈಸೂರು: ಸಮಾವೇಶದಲ್ಲಿ ಶಾಸಕ ರೇವಣ್ಣ ಅವರ ಗೈರು ಹಾಜರಿ ಎದ್ದು ಕಾಣುತಿತ್ತು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಚನ್ನಮ್ಮ, ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಚಾಲನೆ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಇದ್ದರು.

ರೇವಣ್ಣ ಅವರನ್ನು ಭಾಷಣದ ವೇಳೆ ಕುಮಾರಸ್ವಾಮಿ ಹೊಗಳಿದರು. ‘ರಾಜ್ಯದಲ್ಲಿ ಕ್ಷೀರಕ್ರಾಂತಿಗೆ ಕಾರಣವಾಗಿದ್ದು ರೇವಣ್ಣ. ಈ ಮೂಲಕ ರೈತರಿಗೆ ನೆರವಾದರು. ಕೆಎಂಎಫ್‌ ಅಧ್ಯಕ್ಷರಾಗಿದ್ದಾಗ ಸುಮಾರು ₹ 45 ಲಕ್ಷ ಕೋಟಿ ಆಸ್ತಿ ಉಳಿಸಿದರು. ಆದರೆ, ಅದನ್ನು ಸಿದ್ದರಾಮಯ್ಯ ನೆನಪಿಸಿಕೊಳ್ಳುವುದಿಲ್ಲ. ಬದಲಾಗಿ ಕ್ಷೀರಭಾಗ್ಯದ ಸಾಧನೆ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.