ADVERTISEMENT

ಸಾಲ ಮರುಪಾವತಿಗೆ ಪೀಡಿಸಿದ್ದಕ್ಕೆ ಕೊಲೆ

​ಪ್ರಜಾವಾಣಿ ವಾರ್ತೆ
Published 29 ಮೇ 2017, 7:02 IST
Last Updated 29 ಮೇ 2017, 7:02 IST

ಮೈಸೂರು: ಸಾಲ ಮರುಪಾವತಿ ಮಾಡುವಂತೆ ಪೀಡಿಸುತ್ತಿದ್ದ ಕೇಬಲ್‌ ಆಪರೇಟರ್‌ ಜಯರಾಂ ಅವರನ್ನು (25) ಕೊಲೆ ಮಾಡಿದ ಅನಿಲ್‌ (27) ಹಾಗೂ ಈತನ ಸಹಚರರಾದ ಸತೀಶ್‌ (20), ಮಹೇಶ್‌ (25) ಎಂಬುವರನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹತ್ಯೆ ನಡೆದ ಏಳು ಗಂಟೆಯ ಒಳಗೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ನ್ಯಾಯಾಧೀಶರ ಎದುರು ಭಾನುವಾರ ರಾತ್ರಿ ಹಾಜರುಪಡಿಸಿದ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಮಾಫಿ ಸಾಕ್ಷಿಯಾಗಿದ್ದಾನೆ.

‘ಹೂಟಗಳ್ಳಿಯ ಅನಿಲ್‌ ಹಾಗೂ ಬೆಳವಾಡಿಯ ಜಯರಾಂ ಸ್ನೇಹಿತರು. ಕಾರು ಸರ್ವಿಸ್‌ ಸ್ಟೇಷನ್‌ವೊಂದರಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಜಯರಾಂ ಬಳಿ ಅನಿಲ್‌ ₹ 20 ಸಾವಿರ ಸಾಲ ಪಡೆದಿದ್ದ. ಹಲವು ದಿನಗಳಾದರೂ ಇದನ್ನು ಮರುಪಾವತಿ ಮಾಡಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‘ಈ ನಡುವೆ ಸರ್ವಿಸ್‌ ಸ್ಟೇಷನ್‌ನಲ್ಲಿ ₹ 17 ಸಾವಿರ ಹಣ ಕಾಣೆಯಾಗಿತ್ತು. ಇದನ್ನು ಅನಿಲ್‌ ಕಳವು ಮಾಡಿದ್ದಾಗಿ ಜಯರಾಂ ಹಲವರ ಎದುರು ಸಂಶಯ ವ್ಯಕ್ತಪಡಿಸಿದ್ದರು. ಇದು ಆತನನ್ನು ಕೆರಳಿಸಿತ್ತು. ಹೀಗಾಗಿ, ಸ್ನೇಹಿತನನ್ನೇ ಮುಗಿಸಲು ವಿದ್ಯಾರಣ್ಯಪುರಂನ ಸತೀಶ್‌ ಹಾಗೂ ಕೂರ್ಗಳ್ಳಿಯ ಮಹೇಶ್‌ ಎಂಬುವರೊಂದಿಗೆ ಸಂಚು ರೂಪಿಸಿದ’ ಎಂದು ವಿವರಿಸಿದರು.

‘ವಿಜಯನಗರ 4ನೇ ಹಂತದಲ್ಲಿದ್ದ ಜಯರಾಂ ಭೇಟಿ ಮಾಡಿದ ಅನಿಲ್‌ ಮತ್ತು ಸತೀಶ್‌ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಮನೆಯವರೆಗೂ ಡ್ರಾಪ್‌ ನೀಡುವುದಾಗಿ ನಂಬಿಸಿ ಉಪಾಯದಿಂದ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡಿದ್ದಾರೆ. ರಿಂಗ್‌ ರಸ್ತೆಯಿಂದ ಬೆಳವಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಮೂತ್ರ ವಿಸರ್ಜನೆಯ ನೆಪವೊಡ್ಡಿ ಬೈಕ್‌ ನಿಲುಗಡೆ ಮಾಡಿದ್ದಾರೆ’.

ಈ ಸ್ಥಳದಲ್ಲಿ ಅದಾಗಲೇ ಮಹೇಶ್‌ ಹಾಗೂ ಇನ್ನೊಬ್ಬ ಇದ್ದರು. ಈ ವೇಳೆ ಏಕಾಏಕಿ ಜಯರಾಂ ಮೇಲೆ ಎಲ್ಲರೂ ಮುಗಿಬಿದ್ದಿದ್ದಾರೆ. ಚಾಕುವಿನಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಲೆಯಾದ ಯುವಕನ ಹಿನ್ನೆಲೆ ಕೆದಕಿದ ಪೊಲೀಸರಿಗೆ ಅನಿಲ್‌ನೊಂದಿಗೆ ಗಲಾಟೆ ನಡೆದಿದ್ದ ಸಂಗತಿ ಗೊತ್ತಾಗಿದೆ. ಈತನ ಜಾಡು ಹಿಡಿದು ಸಾಗಿ ಭಾನುವಾರ ನಸುಕಿನ 4 ಗಂಟೆಯಲ್ಲಿ ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೃಹಿಣಿ ಆತ್ಮಹತ್ಯೆ
ಮೈಸೂರು: ಹೂಟಗಳ್ಳಿಯ ಮಹದೇವ ಪ್ರಸಾದ್‌ ಎಂಬುವರ ಪತ್ನಿ ಪಲ್ಲವಿ (30) ನೇಣು ಹಾಕಿಕೊಂಡು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ ಪಲ್ಲವಿ ನೇಣು ಹಾಕಿಕೊಂಡಿದ್ದಾರೆ. ಕುಟುಂಬದ ಸದಸ್ಯರು ತಡರಾತ್ರಿ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.