ADVERTISEMENT

ಸುನಿಲ್ ಬೋಸ್ ಪ್ರಕರಣ; ಸಾಕ್ಷಿಗಳ ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:09 IST
Last Updated 22 ಮಾರ್ಚ್ 2017, 10:09 IST

ಮೈಸೂರು: ಲಂಚ ಪಡೆಯಲು ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ಪ್ರಕರಣದಲ್ಲಿ ಮಂಗಳವಾರ ಸಾಕ್ಷಿಗಳ ವಿಚಾರಣೆ ನಡೆಯಿತು. ನಂತರ, ಮುಂದಿನ ವಿಚಾರಣೆಯನ್ನು ನ್ಯಾಯಾಧೀಶರು ಏಪ್ರಿಲ್ 5ಕ್ಕೆ ಮುಂದೂಡಿದರು.

ಇದಕ್ಕೂ ಮುನ್ನ ಸುನಿಲ್ ಬೋಸ್ ಪರ ವಕೀಲರಾದ ಜೋಷಿ ಮನವಿ ಸಲ್ಲಿಸಿ, ಸುನಿಲ್ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಿದ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಮಾರ್ಚ್ 26ರಂದು ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.

ಇವರ ಮನವಿ ತಿರಸ್ಕರಿಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ಲೋಕಾಯುಕ್ತ ವಿಶೇಷ ನ್ಯಾಯಾಲಯ) ನ್ಯಾಯಾಧೀಶ ಸುಧೀಂದ್ರನಾಥ್, ಈ ಹಂತದಲ್ಲಿ ಮುಂದೂಡುವುದು ಸರಿಯಲ್ಲ ಎಂದು ಹೇಳಿ, ಸಾಕ್ಷಿಗಳ ವಿಚಾರಣೆಗೆ ಸೂಚಿಸಿದರು. ನಂತರ, ದೂರುದಾರ ಬಸವರಾಜು ಅವರಿಂದ ಹೇಳಿಕೆ ಪಡೆಯಲಾಯಿತು.

ಆರೋಪಿಗಳಾದ ಸುನಿಲ್ ಹಾಗೂ ರಾಜು ಹಾಜರಿದ್ದರು. ಪ್ರಮುಖ ಆರೋಪಿ ಅಲ್ಫೋನ್ಸಿಸ್ ಅನಾರೋಗ್ಯದ ಕಾರಣದಿಂದ ಹಾಜರಾಗಿರಲಿಲ್ಲ.
ಲೋಕಾಯುಕ್ತದ ಪರ ಸರ್ಕಾರಿ ವಕೀಲರಾದ ಮುತ್ತಮ್ಮ, ದೂರುದಾರ ಬಸವರಾಜು ಪರ ವಕೀಲರಾದ ಎಸ್.ಲೋಕೇಶ್ ಹಾಗೂ ಆರ್.ಗಂಗಾಧರ್, ರಾಜು ಪರ ಲೋಕೇಶ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.