ADVERTISEMENT

ಸ್ಥಾನದ ಘನತೆ ಕುಂದಿಸಿದ ಪ್ರಧಾನಿ

ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 11:36 IST
Last Updated 19 ಮಾರ್ಚ್ 2018, 11:36 IST
ಚಂದ್ರಶೇಖರ್
ಚಂದ್ರಶೇಖರ್   

ಮೈಸೂರು: ರಾಜಕೀಯ ಭಾಷಣದಲ್ಲಿ ಕೀಳುಮಟ್ಟದ ಪದ ಪ್ರಯೋಗದ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯ ಘನತೆಗೆ ಚ್ಯುತಿಯುಂಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ ಆರೋಪಿಸಿದರು.

‘ಚುನಾವಣಾ ಪ್ರಚಾರಕ್ಕಾಗಿ ಈವರೆಗೆ ಐದು ಬಾರಿ ರಾಜ್ಯಕ್ಕೆ ಭೇಟಿ ನೀಡಿರುವ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅಗ್ಗದ ಮಾತುಗಳನ್ನಾಡಿದ್ದಾರೆ. ಸಾಂವಿಧಾನಿಕ ಹುದ್ದೆಯ ಘನತೆಗೆ ತಕ್ಕಂತೆ ಪ್ರಧಾನಿ ವರ್ತಿಸುತ್ತಿಲ್ಲ. ಅವರ ಮಾತುಗಳು ಕೇಂದ್ರ ಮತ್ತು ರಾಜ್ಯಗಳ ಸಾಂವಿಧಾನಿಕ ಸಂಬಂಧದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜವಾಹರಲಾಲ್ ನೆಹರೂ ಅವರಿಂದ ಮನಮೋಹನಸಿಂಗ್‌ ವರೆಗೆ ಯಾವೊಬ್ಬ ಪ್ರಧಾನಿಯೂ ಇಂತಹ ಪದಪ್ರಯೋಗ ಮಾಡಿರಲಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಏಕಮಾತ್ರ ಉದ್ದೇಶಕ್ಕೆ ಮಾಲಿನ್ಯ ತುಂಬಿದ ಮಾತುಗಳನ್ನು ಆಡ ಬಾರದು. ಇದಕ್ಕೆ ಬಿಜೆಪಿಯಲ್ಲಿ ಸಚಿವ ಅನಂತಕುಮಾರ ಹೆಗಡೆ ಹಾಗೂ ಸಂಸದ ಪ್ರತಾಪ ಸಿಂಹ ಇದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರಭಾವ ಕುಂಠಿತಗೊಳ್ಳುತ್ತಿದೆ ಎಂಬುದು ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯ ಫಲಿತಾಂಶವೇ ನಿರೂಪಿಸಿದೆ. ಹಿಂದಿ ಭಾಷಿಗರ ಹೃದಯ ಭಾಗದಲ್ಲಿಯೇ ಬಿಜೆಪಿ ಹೀನಾಯ ಸೋಲು ಕಂಡಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತಿನಿ ಧಿಸಿದ್ದ ಕ್ಷೇತ್ರಗಳು ಕೂಡ ಕೈತಪ್ಪಿವೆ. ಇದು ಮುಂದಿನ ರಾಜಕೀಯ ಬದಲಾವಣೆಯ ಶುಭಸೂಚನೆ’ ಎಂದು ವ್ಯಾಖ್ಯಾನಿಸಿದರು.

‘ಮೋದಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದಿವೆ. ಜನತೆಯ ವಿಶ್ವಾಸಗಳಿಸುವಂಥ ಅಭಿವೃದ್ಧಿ ದೇಶದಲ್ಲಿ ಕಾಣಿಸುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭಾರತದ ಸಾಫ್ಟವೇರ್‌ ಕಂಪನಿಯ ಉದ್ಯೋಗಿಗಳು ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಜನಾಂಗೀಯ ಹತ್ಯೆಗೆ ಭಾರತೀಯರು ಬಲಿಯಾಗುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ಮೋದಿ ಅವರ ಆಲಿಂಗನದಿಂದ ಯಾವುದೇ ಪ್ರಯೋಜನ ವಾಗಿಲ್ಲ’ ಎಂದು ದೂರಿದರು.

‘ಲೋಕಸಭಾ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಮೋದಿ ಅವರ ಅವಧಿಯಲ್ಲಿಯೇ ಅತಿ ಹೆಚ್ಚು ಸೈನಿಕರು ಹಾಗೂ ಸಾರ್ವಜನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಶಾಂತಿ ನೆಲೆಸುವಂತೆ ಮಾಡಲು ಈವರೆಗೆ ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಜನಪ್ರತಿನಿಧಿಗಳು ಉದ್ದೇಶ ಪೂರ್ವಕವಾಗಿಯೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನ ಬದಲಾವಣೆಗೆ ಷಡ್ಯಂತ್ರ ರೂಪಿಸುತ್ತಿದ್ದಾರೆ. 2014ರಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರನ್ನು ಕೈಬಿಟ್ಟಿರುವುದೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.