ADVERTISEMENT

ಹಣ ಬಲದಿಂದ ಸಿ.ಎಂ ಗೆಲುವು ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 5:44 IST
Last Updated 20 ನವೆಂಬರ್ 2017, 5:44 IST
ಮೈಸೂರಿನಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಎಚ್.ಡಿ.ದೇವೇಗೌಡ ಉದ್ಘಾಟಿಸಿದರು
ಮೈಸೂರಿನಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಎಚ್.ಡಿ.ದೇವೇಗೌಡ ಉದ್ಘಾಟಿಸಿದರು   

ಮೈಸೂರು: ಹಣ ಬಲದಿಂದ ಗೆಲುವು ಪಡೆಯಬಹುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಇಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದುಡ್ಡಿನ ಮದದಿಂದ ಸಿದ್ದರಾಮಯ್ಯ ಮೆರೆಯುತ್ತಿದ್ದಾರೆ. ಅವರ ದುರಂಹಕಾರಕ್ಕೆ ರಾಜ್ಯದಲ್ಲಿ ಇದುವರೆಗೂ ನಡೆದಿರುವ ಕುಮಾರ ಪರ್ವ ಸಮಾವೇಶಗಳು ಸೂಕ್ತ ಉತ್ತರವನ್ನೇ ನೀಡಿವೆ. ಜಿ.ಟಿ.ದೇವೇಗೌಡ ಅವರನ್ನು ಅಷ್ಟು ಸುಲಭವಾಗಿ ಮನೆಗೆ ಕಳುಹಿಸಲು ಸಾಧ್ಯವಾಗದು’ ಎಂದು ತಿರುಗೇಟು ನೀಡಿದರು.

ವೈದ್ಯರನ್ನು ನೇಮಕ ಮಾಡಲು ಯೋಗ್ಯತೆ ಇಲ್ಲ: ಆರೋಗ್ಯ ಸಚಿವ ರಮೇಶಕುಮಾರ್ ಅವರಿಗೆ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಲು ಯೋಗ್ಯತೆ ಇಲ್ಲ ಎಂದು ಅವರು ವ್ಯಂಗ್ಯವಾಡಿದರು.

ADVERTISEMENT

ಕಸದ ಬುಟ್ಟಿಯಲ್ಲಿ ಜಯಚಂದ್ರ ವರದಿ: ’ನೈಸ್ ರಸ್ತೆ ರದ್ದು ಮಾಡುವ ಪ್ರಸ್ತಾವ ಇರಿಸಿದಾಗ ಅಂದಿನ ಶಾಸಕರು ‘ಪ್ಯಾಕೆಟ್‌’ಗಳನ್ನು ತೆಗೆದುಕೊಂಡು ಬೆಂಬಲ ನೀಡಲಿಲ್ಲ. ಈಗ ಕಾಂಗ್ರೆಸ್‌ ಪಕ್ಷದ ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ನೈಸ್ ರಸ್ತೆ ರದ್ದು ಮಾಡಲು ಮಾಡಿದ ಶಿಫಾರಸನ್ನು ಸಿದ್ದರಾಮಯ್ಯ ಕಸದ ಬುಟ್ಟಿಗೆ ಎಸೆದಿದ್ದಾರೆ. ಈಗಲೂ ಹಣಕಾಸಿನ ವ್ಯವಹಾರ ನಡೆದಿರಬಹುದು’ ಎಂದು ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದರು.

ಪ್ರಾದೇಶಿಕ ಪಕ್ಷ ಉಳಿಯಬೇಕು– ದೇವೇಗೌಡ: ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ‘ತಮಿಳುನಾಡಿನಲ್ಲಿ ಅಂದು ಅಣ್ಣಾದೊರೈ ಕಾಂಗ್ರೆಸ್ ಪಕ್ಷ ತೆಗೆಯಲು ಮಾಡಿದ ಪ್ರತಿಜ್ಞೆಯಿಂದ ಇದುವರೆಗೂ ಕಾಂಗ್ರೆಸ್‌ ಅಲ್ಲಿ ತಲೆ ಎತ್ತಲಾಗಿಲ್ಲ. ಅಂತಹ ಒಂದು ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಬೇಕು’ ಎಂದರು.

‘ನನಗೆ ಅಹಿಂದ ಶಬ್ದದ ಅರ್ಥವೇ ಗೊತ್ತಿಲ್ಲ. ಆದರೆ, ನನ್ನ ಸಂಪುಟದಲ್ಲಿ 7 ಜನ ಹಿಂದುಳಿದವರು, 8 ಜನ ಲಿಂಗಾಯತರು ಸಚಿವರಾಗಿದ್ದರು. ಆದರೆ, ಕೊನೆಗೆ ಒಕ್ಕಲಿಗರಿಗೆ ಮಾತ್ರ ಮಣೆ ಹಾಕಿದ ದೇವೇಗೌಡ ಎಂಬ ಮಾತು ನನಗೆ ಅಂಟಿಸಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಗಂಟಲು ಬೇನೆ ಇದ್ದರೂ ಸರಿ, ಜಿ.ಟಿ.ದೇವೇಗೌಡ ಅವರೊಂದಿಗೆ ಚುನಾವಣೆ ಮುಗಿಯುವವರೆಗೂ ಇರುತ್ತೇನೆ’ ಎಂದು ಘೋಷಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮಧು ಬಂಗಾರಪ್ಪ ಇದ್ದರು. ಪ್ರೊ.ಕೆ.ಎಸ್.ರಂಗಪ್ಪ ಅವರ ಕಚೇರಿಯನ್ನು ಉದ್ಘಾಟಿಸಲಾಯಿತು.

ಪುಸ್ತಕ ಬರೆಯಲು ಸಿ.ಎಂ.ಗೆ ಸವಾಲು
ಮೈಸೂರು: ‘ಮೊದಲು ಶಾಸಕ ಹೇಗಾದೆ ಎಂದು ಒಂದು ಪುಸ್ತಕ ಬರೆಯಿರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದರು. ‘ಆಗ ಸೂಟುಬೂಟು ಇತ್ತಾ? ಹರಕಲು ಚಾಪೆ ಮೇಲೆ ಸಿದ್ದರಾಮಯ್ಯ ಮಲಗುತ್ತಿದ್ದರು. ಕೆಂಪೀರಯ್ಯ ಅವರು ಬೆಂಬಲ ನೀಡದಿದ್ದರೆ ಏನಾಗುತ್ತಿತ್ತು’ ಎಂದು ಪ್ರಶ್ನಿಸಿದರು.

‘ಹಿರಿಯರನ್ನು ಬಿಟ್ಟು ಎಲ್ಲ ಜಾತಿಯವರಿಗೆ ಅಧಿಕಾರ ಕೊಡಬೇಕು ಎಂದು ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ದೇವೇಗೌಡ ಮಾಡಿದರು. ಈಗ ಒಬ್ಬ ಅಕೌಂಟೆಂಟ್ ನ ಬದಲಾಯಿಸಿ ಎಂದು ದೇವೇಗೌಡ ಹೇಳಿದರೆ ಬದಲಿಸಿಲ್ಲ. ನಮ್ಮನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ಅಧಿಕಾರ ಗಳಿಸಿ ಈಗ ನಮ್ಮನ್ನು ಮೂಲೆಗೆ ದೂಡಿದ್ದಾರೆ’ ಎಂದು ಕಿಡಿಕಾರಿದರು.

ಪ್ರೊ.ಕೆ.ಎಸ್.ರಂಗಪ್ಪ ಚಾಮರಾಜ ಕ್ಷೇತ್ರದ ಅಭ್ಯರ್ಥಿ– ಘೋಷಣೆ
ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಎಂದು ಅಡಗೂರು ಎಚ್.ವಿಶ್ವನಾಥ್ ಘೋಷಿಸಿದರು. ನಂತರ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಸಹ ಇದನ್ನು ಪರೋಕ್ಷವಾಗಿ ಅನುಮೋದಿಸಿದರು.

ಪಕ್ಷಕ್ಕಾಗಿ ತ್ಯಾಗ ಮಾಡುವವರನ್ನು ಪಕ್ಷ ಎಂದೂ ಕೈಬಿಡುವುದಿಲ್ಲ. ಸಾಕಷ್ಟು ಅವಕಾಶಗಳು ಮುಂದೆಯೂ ಲಭ್ಯವಾಗುತ್ತವೆ. ಈಗ ಜೆಡಿಎಸ್‌ಗೆ ಒಂದೊಂದು ಕ್ಷೇತ್ರವೂ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಅಳೆದು, ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಕೆಲವರಿಗೆ ಟಿಕೆಟ್ ಕೈತಪ್ಪಿದರೆ ಸಹಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಹೊಸಬರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಪ್ರತಾಪಸಿಂಹ ಮೈಸೂರಿಗೆ ಹೊಸಬರಾಗಿರಲಿಲ್ಲವೇ? ಮೋದಿ ಮುಖ ನೋಡಿ ಅವರನ್ನು ಗೆಲ್ಲಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಕೆ.ಟಿ.ಚೆಲುವೇಗೌಡ ಹಿರಿಯರು. ಮೇಯರ್‌ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಮೇಯರ್ ಸ್ಥಾನ ಕೈತಪ್ಪಿತು. ಹಾಗೆಂದು ಅವರು ಪಕ್ಷ ಬಿಟ್ಟು ಹೋಗಿದ್ದಾರಾ ಎಂದು ಕೇಳಿದರು. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾದ ಪಕ್ಷದ ನಗರ ಘಟಕದ ಅಧ್ಯಕ್ಷ ಹರೀಶ್‌ ಗೌಡ ಸಮಾರಂಭದಲ್ಲಿ ಗೈರಾಗಿದ್ದರು.

ವೇದಿಕೆಯಲ್ಲಿ ಸಿಂಧ್ಯ
ಹಲವು ವರ್ಷಗಳ ಬಳಿಕ ರಾಜಕಾರಣದಲ್ಲಿ ಸಕ್ರಿಯರಾಗಿರುವ ಪಿ.ಜಿ.ಆರ್ ಸಿಂಧ್ಯ ವೇದಿಕೆ ಮೇಲಿದ್ದರು. ‘ಜಾತಿ, ಜಾತಿಗಳ ಮಧ್ಯೆಯೇ ಸಂಘರ್ಷವನ್ನು ಹುಟ್ಟು ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಎಸ್‌ ರಾಜ್ಯಕ್ಕೆ ಅಗತ್ಯ ಇದೆ ಎಂದು ಅವರು ಹೇಳಿದರು.

* * 

5 ಜನ ಮಾರ್ಗದರ್ಶಕರ ಪೈಕಿ ಮೂವರು ರಾಜಕಾರಣ ಪ್ರವೇಶಕ್ಕೆ ಸಲಹೆ ನೀಡಿದರು. ವಿಜ್ಞಾನಿಯಾಗಿ ಏನೇ ಮಾಡಿದರೂ ಅಂತಿಮವಾಗಿ ಜಾರಿಯಾಗುವುದು ರಾಜಕಾರಣಿಗಳಿಂದ
ಪ್ರೊ.ಕೆ.ಎಸ್.ರಂಗಪ್ಪ
ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.